ಸುರಕ್ಷಿತ ಹೆರಿಗೆಗೆ ಕಬ್ಬಿಣಾಂಶ ಮಾತ್ರೆಗಳ ಸೇವನೆ ಅಗತ್ಯ: ಡಿಹೆಚ್‌ಒ ಡಾ.ಯಲ್ಲಾ ರಮೇಶಬಾಬು

Taking iron tablets is essential for safe delivery: DHO Dr. Yalla Rameshbabu

ಸುರಕ್ಷಿತ ಹೆರಿಗೆಗೆ ಕಬ್ಬಿಣಾಂಶ ಮಾತ್ರೆಗಳ ಸೇವನೆ ಅಗತ್ಯ: ಡಿಹೆಚ್‌ಒ ಡಾ.ಯಲ್ಲಾ ರಮೇಶಬಾಬು 

ಬಳ್ಳಾರಿ 03:ಕಬ್ಬಿಣಾಂಶ ಮಾತ್ರೆಗಳ ಸೇವನೆಯಿಂದ ಗರ್ಭಿಣಿಯರಲ್ಲಿ ರಕ್ತಹೀನತೆ ಕಡಿಮೆ ಮಾಡುವುದರ ಜೊತೆಗೆ ಹೆರಿಗೆ ಸಮಯದಲ್ಲಿ ಹೆಚ್ಚುವರಿ ರಕ್ತದ ಅವಶ್ಯಕತೆಯನ್ನು ತಪ್ಪಿಸುತ್ತದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಲ್ಲಾ ರಮೇಶಬಾಬು ಅವರು ಹೇಳಿದರು. 

ಕುರುಗೋಡು ತಾಲ್ಲೂಕಿನ ಯಲ್ಲಾಪುರ ಕ್ರಾಸ್ ಬಳಿ ವಾಸವಿರುವ ಹಂಡಿಜೋಗಿ ಸಮುದಾಯದ ವಲಸೆ ಪ್ರದೇಶಕ್ಕೆ ಭೇಟಿ ನೀಡಿ ಗರ್ಭಿಣಿ ಮಹಿಳೆಯರೊಂದಿಗೆ ಆರೋಗ್ಯ ವಿಚಾರಿಸಿ ಅವರು ಮಾತನಾಡಿದರು. 

ಕಬ್ಬಿಣಾಂಶ ಮಾತ್ರೆ ನುಂಗಿದರೆ ಭ್ರೂಣ ದಪ್ಪವಾಗುತ್ತದೆ, ಕಪ್ಪು ಬಣ್ಣದ ಮಗು ಹುಟ್ಟುತ್ತದೆ ಎಂಬ ತಪ್ಪು ನಂಬಿಕೆ, ಗಾಳಿಸುದ್ದಿಗಳನ್ನು ನಂಬದೇ, ವೈದ್ಯರ ಸಲಹೆಯಂತೆ ಉಚಿತವಾಗಿ ನೀಡುವ ಕಬ್ಬಿಣಾಂಶ ಮಾತ್ರೆಗಳನ್ನು ಪ್ರತಿದಿನ ಒಂದರಂತೆ ಕನಿಷ್ಟ 180 ಮಾತ್ರೆ, ರಕ್ತಹೀನತೆಯ ಪ್ರಮಾಣ ತೀವ್ರವಾಗಿದ್ದಲ್ಲಿ ದಿನಕ್ಕೆ 2 ರಂತೆ 360 ಮಾತ್ರೆಗಳನ್ನು 6 ತಿಂಗಳ ಅವಧಿಗೆ ಸೇವಿಸಬೇಕು ಎಂದು ಅವರು ತಿಳಿಸಿದರು. 

ಗರ್ಭಿಣಿ ಎಂದು ತಿಳಿದ ನಂತರ ರಕ್ತದಲ್ಲಿ ಕಬ್ಬಿಣಾಂಶ ಹೆಚ್ಚಿಸಿ ಗರ್ಭಿಣಿಯು ಲವಲವಿಕೆಯಿಂದ ಇರಲು, ಗರ್ಭದಲ್ಲಿ ಭ್ರೂಣದ ಸರಿಯಾದ ಬೆಳವಣಿಗೆಗೆ ಮತ್ತು ಸುರಕ್ಷಿತ ಹೆರಿಗೆಗೆ ಸಹಕಾರಿಯಾಗುತ್ತದೆ. ಕುಟುಂಬದ ಸದಸ್ಯರು ಆರೋಗ್ಯ ಇಲಾಖೆಯಿಂದ ನೀಡುವ ಕಬ್ಬಿಣಾಂಶ ಮಾತ್ರೆಗಳನ್ನು ತಪ್ಪದೇ ಗರ್ಭಿಣಿಗೆ ನುಂಗಿಸಬೇಕು ಎಂದು ಅವರು ಮನವರಿಕೆ ಮಾಡಿದರು. 

ಮುಖ್ಯವಾಗಿ ಗಂಡಾಂತರ ಗರ್ಭಿಣಿಯರು ಎಂದು ಗುರ್ತಿಸಿದ ನಂತರ ಚೊಚ್ಚಲ ಗರ್ಭಿಣಿ, ಎತ್ತರ ಕಡಿಮೆ, ಅಧಿಕ ರಕ್ತದೊತ್ತಡ, ರಕ್ತದಲ್ಲಿ ಕಬ್ಬಿಣಾಂಶ ಕೊರತೆ, ಅವಳಿ-ಜವಳಿ ಗರ್ಭಿಣಿ, ವಿವಾಹವಾಗಿ ಐದಕ್ಕಿಂತ ಹೆಚ್ಚು ವರ್ಷಗಳ ನಂತರ ಗರ್ಭಿಣಿಯಾಗಿರುವುದು, ಮೊದಲ ಹೆರಿಗೆ ಸಿಸೇರಿಯನ್ ಮುಂತಾದ ಕಾರಣಗಳಿದ್ದರೆ ನಿರ್ಲಕ್ಷಿಸಬಾರದು. 

ತೀವ್ರ ರಕ್ತಹೀನತೆಯಂತಹ ಸನ್ನಿವೇಶದಲ್ಲಿ ಸ್ಥಳೀಯವಾಗಿ ನೀಡುವ ಚಿಕಿತ್ಸೆ (ಐಎಫ್‌ಎ ಮಾತ್ರೆ, ಐರನ್ ಸುಕ್ರೋಸ್, ರಕ್ತ ಹಾಕಿಸುವಿಕೆ) ಪಡೆಯಬೇಖು. ಸುಧಾರಣೆಯಾಗದಿದ್ದಲ್ಲಿ ತಜ್ಞರ ಬಳಿ ತಪ್ಪದೇ ಭೇಟಿ ನೀಡಬೇಕು. ಅಗತ್ಯವಿದ್ದಲ್ಲಿ ಸ್ಕ್ಯಾನ್ ಮಾಡಿಸಬೇಕು. ಮೊದಲ ಹೆರಿಗೆ ಶಸ್ತ್ರಚಿಕಿತ್ಸೆ ಮೂಲಕವಾದಲ್ಲಿ ಪುನಃ ಗರ್ಭಿಣಿಯಾಗುವ ಅವಧಿಯನ್ನು ಕನಿಷ್ಠ 3 ವರ್ಷಕ್ಕೆ ಕಡ್ಡಾಯವಾಗಿ ಮುಂದೂಡಬೇಕು. ಇದಕ್ಕಾಗಿ ಅಂತರ ಚುಚ್ಚುಮದ್ದು, ಕಾಪರ್‌-ಟಿ, ನಿರೋಧ್ ಬಳಸಲು ಸೂಚಿಸಿದರು. 

ಈ ಸಂದರ್ಭದಲ್ಲಿ ಕುರುಗೋಡು ತಾಲ್ಲೂಕು ಆರೋಗ್ಯ ಮೇಲ್ವಿಚಾರಣಾಧಿಕಾರಿ ಡಾ.ಮಂಜುನಾಥ ಜವಳಿ, ಜಿಲ್ಲಾ ಆರೋಗ್ಯ ಶಿಕ್ಷಣಾದಿಕಾರಿ ಈಶ್ವರ ಹೆಚ್ ದಾಸಪ್ಪನವರ, ಆರೋಗ್ಯ ಮೇಲ್ವಿಚಾರಣಾಧಿಕಾರಿ ವಿರುಪಾಕ್ಷಪ್ಪ, ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿ ರೇಣುಕಾ, ಆಶಾ ಕಾರ್ಯಕರ್ತೆ ಕಾವೇರಿ, ಅಂಗನವಾಡಿ ಕಾರ್ಯಕರ್ತೆ ಆಶಾಕುಮಾರಿ ಮತ್ತು ಸ್ಥಳೀಯರು ಉಪಸ್ಥಿತರಿದ್ದರು.