ಮಕ್ಕಳ ಭವಿಷ್ಯ ರೂಪಿಸಿ,ಶಾಲೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕಿದೆ: ಶಾಸಕ ಶ್ರೀನಿವಾಸ

ಹಾನಗಲ್:ನಮ್ಮ ಮಕ್ಕಳ ಭವಿಷ್ಯ ರೂಪಿಸಿ, ಸದೃಢಗೊಳಿಸಲಿರುವ ಶಾಲೆಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಮತ್ತು ಪ್ರೋತ್ಸಾಹ ನೀಡಬೇಕಿದೆ. ಮೂಲಭೂತ ಸೌಲಭ್ಯ ಕಲ್ಪಿಸಲು ಸರಕಾರದ ಜೊತೆಗೆ ಸಮುದಾಯದ ಸಹಭಾಗಿತ್ವ ಅಗತ್ಯವಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.

  ತಾಲೂಕಿನ ಸೋಮಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಿರ್ಮಿಸಲಾದ ನೂತನ ಕೊಠಡಿ ಉದ್ಘಾಟಿಸಿ, ಗ್ರಾಮಸ್ಥರ ಅಹವಾಲು ಸ್ವೀಕರಿಸಿ ಅವರು ಮಾತನಾಡಿದರು.

 ಸೌಲಭ್ಯಗಳಿಗೆ ಸರ್ಕಾರವನ್ನು ಅವಲಂಬಿತರಾಗಿ ಕಾಯ್ದು ಕುಳಿತುಕೊಳ್ಳುವ ಬದಲಿಗೆ ವಿಶೇಷ ಮುತುವರ್ಜಿ ವಹಿಸಿ ಸಣ್ಣಪುಟ್ಟ ಅಗತ್ಯತೆಗಳನ್ನು ಹಳೆಯ ವಿದ್ಯಾರ್ಥಿಗಳು, ಗ್ರಾಮಸ್ಥರು ಜೊತೆ ಸೇರಿಕೊಂಡು ಪೂರೈಸಲು ಮುಂದಾದರೆ ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳಿಗೆ ಕಡಿಮೆ ಇಲ್ಲದಂತೆ ಎದ್ದು ನಿಲ್ಲಲಿವೆ. ಜಾತ್ರೆ, ಉತ್ಸವಗಳ ನೆಪದಲ್ಲಿ ಉದಾರವಾಗಿ ಹಣ ವ್ಯಯ ಮಾಡುವ ನಮ್ಮೆಲ್ಲರ ಮನೋಭಾವನೆ ಬದಲಾಗಬೇಕಿದ್ದು, ಶಾಲೆಗಳತ್ತ ಒಮ್ಮೆ ತಿರುಗಿ ನೋಡಿದರೆ ಭವಿಷ್ಯದ ಬದುಕು ಉಜ್ವಲವಾಗಲಿದೆ ಎಂದು ಹೇಳಿದ ಅವರು ಬಡವರಿಗೆ ಶಕ್ತಿ ತುಂಬಲು ರಾಜ್ಯ ಸರ್ಕಾರ ಮಹತ್ವಾಕಾಂಕ್ಷೆಯ ಗ್ಯಾರಂಟಿ ಯೋಜನೆ ಜಾರಿಗೆ ತಂದಿದೆ. ಬಡವರು, ಮಧ್ಯಮ ವರ್ಗಗಳಿಗೆ ಸೇರಿದ ಜನತೆಯ ಮೊಗದಲ್ಲೀಗ ಮಂದಹಾಸ ಮೂಡಿದೆ ಎಂದರು.

  ಎಸ್ಡಿಎಂಸಿ ಅಧ್ಯಕ್ಷ ಸಿದ್ದಲಿಂಗೇಶ ಚಿಕ್ಕಣ್ಣನವರ ಅಧ್ಯಕ್ಷತೆ ವಹಿಸಿದ್ದರು. ಬಿಇಒ ವಿ.ವಿ.ಸಾಲಿಮಠ, ತಾಪಂ ಮಾಜಿ ಉಪಾಧ್ಯಕ್ಷೆ ಅನಿತಾ ಶಿವೂರ, ಮುಖಂಡಉಮೇಶ ಗೌಳಿ, ಕರಿಯಪ್ಪ ಹೇರೂರ, ಪಾಲಾಕ್ಷಪ್ಪ ಕಾಗಿನೆಲ್ಲಿ, ಪುಟ್ಟವ್ವ ಅಡಿಗಣ್ಣನವರ, ಅಶೋಕ ಬುಡ್ಡನವರ, ಮುಖ್ಯೋಪಾಧ್ಯಾಯ ಎಂ.ಎಂ.ಹಲಸೂರ, ವಿ.ಟಿ.ಪಾಟೀಲ, ನಾಗರಾಜ್ ಸಿಂಗಾಪೂರ ಸೇರಿದಂತೆ ಗ್ರಾಪಂ, ಎಸ್ಡಿಎಂಸಿ ಸದಸ್ಯರು, ಗ್ರಾಮಸ್ಥರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.