ಬಿಜೆಪಿ ಹೆಸರು, ಚಿಹ್ನೆ ದುರ್ಬಳಕೆ ಸಹಿಸುವುದಿಲ್ಲ: ವಿರೂಪಾಕ್ಷ ಮಾಮನಿ

ಬಿಜೆಪಿ ಹೆಸರು, ಚಿಹ್ನೆ ದುರ್ಬಳಕೆ ಸಹಿಸುವುದಿಲ್ಲ: ವಿರೂಪಾಕ್ಷ ಮಾಮನಿ  Misuse of BJP's name and symbol will not be tolerated: Virupaksha Mamani

ಲೋಕದರ್ಶನ ವರದಿ 

ಯರಗಟ್ಟಿ 05 : ಭಾರತೀಯ ಜನತಾ ಪಕ್ಷದ ಹೆಸರು ಮತ್ತು ಚಿಹ್ನೆಯನ್ನು ಬಳಸಿಕೊಂಡು ಬೇಕಾಬಿಟ್ಟಿ ಹೇಳಿಕೆ ನೀಡುವುದನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಪಕ್ಷದ ಸದಸ್ಯತ್ವ ಪಡೆದವರು ಶಿಸ್ತಿನಿಂದ ಪಕ್ಷದ ನಿಯಮಾನುಸಾರ ಕಾರ್ಯನಿರ್ವಹಿಸಬೇಕು ಎಂದು ಸವದತ್ತಿ ಮಂಡಲ ಬಿಜೆಪಿ ಅಧ್ಯಕ್ಷ ವಿರೂಪಾಕ್ಷ ಮಾಮನಿ ಹೇಳಿದರು.  

ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಹಾಗೂ ಜಿಲ್ಲಾ ಮುಖಂಡರ ಸಲಹೆ ಮತ್ತು ಮಾರ್ಗದರ್ಶನದಂತೆ ಪಕ್ಷದ ಕಾರ್ಯಕರ್ತರು ನಡೆದುಕೊಳ್ಳಬೇಕು.

ಯಾರೂ ಪಕ್ಷದ ನಿಯಮಗಳನ್ನು ಉಲ್ಲಂಘಿಸಬಾರದು. ಮಾಮನಿ ಕುಟುಂಬದ ಸದಸ್ಯರಂತೆ ಪಕ್ಷದ ಎಲ್ಲರೂ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುತ್ತಿದ್ದೇವೆ. ಪಕ್ಷದ ಹೆಸರು ಹಾಗೂ ಗೌರವಕ್ಕೆ ಧಕ್ಕೆ ತರುವ ರೀತಿಯಲ್ಲಿ ನಡೆದುಕೊಂಡರೆ ಅದನ್ನು ಸಹಿಸುವುದಿಲ್ಲ ಎಂದು ಎಚ್ಚರಿಸಿದರು.  

ರಾಜ್ಯದಲ್ಲಿ ಬರಗಾಲದ ಪರಿಸ್ಥಿತಿ ಎದುರಾಗಿದ್ದರೂ ಸವದತ್ತಿ ಹಾಗೂ ಯರಗಟ್ಟಿ ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸಲಾಗಿಲ್ಲ. ಈ ಹಿನ್ನೆಲೆಯಲ್ಲಿ ಶೀಘ್ರದಲ್ಲೇ ಯರಗಟ್ಟಿ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.  

ಪಕ್ಷದ ಮಾಜಿ ಮಂಡಲ ಅಧ್ಯಕ್ಷ ಈರಣ್ಣ ಚಂದರಗಿ, ವೆಂಕಟೇಶ ದೇವರಡ್ಡಿ, ಮಹಾಂತೇಶ ಗೋಡಿ, ಗೌಡಪ್ಪ ಸವದತ್ತಿ, ಚಂದ್ರಶೇಖರ ಅಳಗೋಡಿ, ಸುಭಾಷ ಗಿರಿಗೌಡರ, ಗೀರೀಶ ಪಾಟೀಲ, ಕೃಷ್ಣಮೂರ್ತಿ ತೊರಗಲ್ಲ, ಮಹಾಂತೇಶ ತೋಟಗಿ, ಶಿವಲಿಂಗಪ್ಪ ನುಗಣ್ಣನಟ್ಟಿ, ಮಹಾದೇವ ಮುರುಗೋಡ, ಆನಂದ ಬಾಗೋಡಿ, ಚೇತನ್ ಜಕಾತಿ, ಈರಣ್ಣ ಪೂಜೇರಿ, ಮುದಕಪ್ಪ ತಡಸಲೂರು, ಶಿವಾನಂದ ಪಟ್ಟಣಶೆಟ್ಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.