ವಸತಿ ಶಾಲೆಗೆ ಶಾಸಕ ಶ್ರೀನಿವಾಸ ಮಾನೆ ದಿಢೀರ್ ಭೇಟಿ

ಲೋಕದರ್ಶನ ವರದಿ

ಹಾನಗಲ್ 19:  ಹಾನಗಲ್ ತಾಲೂಕಿನ ಹಳ್ಳಿಬೈಲ್ ಗ್ರಾಮದ ಸಮಾಜ ಕಲ್ಯಾಣ ಇಲಾಖೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಶಾಸಕ ಶ್ರೀನಿವಾಸ ಮಾನೆ ದಿಢೀರ್ ಭೇಟಿ ನೀಡಿ, ಸೌಲಭ್ಯಗಳ ಪರಿಶೀಲನೆ ನಡೆಸಿ, ವಿದ್ಯಾರ್ಥಿಗಳ ಕುಂದು, ಕೊರತೆ ಆಲಿಸಿದರು.

  ಅಭ್ಯಾಸದಲ್ಲಿ ತೊಡಗಿದ್ದ ವಿದ್ಯಾರ್ಥಿಗಳತ್ತ ತೆರಳಿ ಆತ್ಮೀಯವಾಗಿ ಮಾತನಾಡಿಸಿದರು. ವಸತಿ ಶಾಲೆಯಲ್ಲಿ ಲಭ್ಯ ಸೌಲಭ್ಯಗಳೇನಿವೆ?, ಊಟ ಹೇಗಿರುತ್ತದೆ?, ಶಿಕ್ಷಣ ವ್ಯವಸ್ಥೆ ಹೇಗಿದೆ? ಓದು ಪೂರ್ಣಗೊಳಿಸಿ ಮುಂದೆ ಏನಾಗ ಬಯಸಿದ್ದೀರಿ? ಎಂದೆಲ್ಲಾ ಕೇಳಿ ತಿಳಿದರು. ಬಳಿಕ ವಿದ್ಯಾರ್ಥಿಗಳ ಜೊತೆ ಕುಳಿತು ಬೆಳಗಿನ ಉಪಹಾರ ಇಡ್ಲಿ, ಸಾಂಬಾರ ಸೇವಿಸಿದರು.

  ಅಡುಗೆ ಕೊಠಡಿ, ಊಟದ ಹಾಲ್, ವಸತಿ ಗೃಹ ಸೇರಿದಂತೆ ವಸತಿ ಶಾಲೆಯ ಬೇರೆ ಬೇರೆ ವಿಭಾಗಗಳಿಗೆ ಭೇಟಿ ನೀಡಿ ಸೌಲಭ್ಯಗಳ ಪರಿಶೀಲನೆ ನಡೆಸಿ, ಮಾಹಿತಿ ಪಡೆದರು. ಶುಚಿ, ರುಚಿ ಊಟ ನೀಡುವಲ್ಲಿ ಕಾಳಜಿ ವಹಿಸಿ. ಉತ್ತಮ ಶಿಕ್ಷಣ ನೀಡುವಂತೆ ಪ್ರಾಚಾರ್ಯ ಸೊಲಬೇಶ್ವರ ಚೌಟೇರ ಅವರಿಗೆ ಸೂಚಿಸಿದರು. ಅನವಶ್ಯಕ ಗಿಡಗಂಟಿಗಳು ಬೆಳೆದು, ಹುಳ-ಹುಪ್ಪಡಿಗಳ ಕಾಟ ಹೇಳತೀರದ್ದಾಗಿದೆ ಎಂದು ಗಮನ ಸೆಳೆದಾಗ ಶಾಸಕ ಮಾನೆ ಸ್ಪಂದಿಸಿದರು.

  ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳೊಂದಿಗೆ ಕೆಲಕಾಲ ಸಂವಾದ ನಡೆಸಿದ ಶ್ರೀನಿವಾಸ ಮಾನೆ, ನಿರಂತರ ಅಭ್ಯಾಸ, ಕಠಿಣ ಪರಿಶ್ರಮ ಎಂದೂ ಕೈ ಬಿಡದು. ಅಕ್ಷರದ ಜ್ಞಾನಕ್ಕೆ ಬದುಕು ಬೆಳಗುವ ಶಕ್ತಿ ಇದೆ. ನಮ್ಮ ಬಳಿ ಇರುವ ಆಸ್ತಿ, ಹಣ ಹೋಗಬಹುದು, ಆದರೆ ಗಳಿಸಿದ ಜ್ಞಾನ ಕೊನೆವರೆಗೂ ನಮ್ಮ ಜೊತೆಗಿರಲಿದೆ. ಸರಕಾರ ವಸತಿ ಶಾಲೆಗಳಿಗೆ ಸಾಕಷ್ಟು ಹಣ ವ್ಯಯ ಮಾಡುತ್ತದೆ. ಅದು ಸದ್ಭಳಕೆಯಾಗಬೇಕಾದರೆ ನೀವೆಲ್ಲ ಉತ್ತಮ ಶಿಕ್ಷಣ ಪಡೆದು, ಸತ್ಪ್ರಜೆಗಳಾಗಿ, ಕಂಡ ಕನಸುಗಳನ್ನು ನನಸಾಗಿಸಬೇಕಿದೆ. ಹೆತ್ತವರು, ಪೋಷಕರ ನಿರೀಕ್ಷೆ ಹುಸಿಗೊಳಿಸದೇ ಆದರ್ಶ ಬದುಕು ಸಾಗಿಸಿ ಎಂದು ಹಾರೈಸಿದರು. 

  ಅಕ್ಕಿಆಲೂರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜು ಗೊರಣ್ಣನವರ, ಕಿರವಾಡಿ ಗ್ರಾಪಂ ಉಪಾಧ್ಯಕ್ಷ ಯಲ್ಲಪ್ಪ ಕಲ್ಲೇರ, ಮುಖಂಡರಾದ ಪರಶುರಾಮ ಮುನಿಯಣ್ಣನವರ, ಸುನೀಲಗೌಡ ಪಾಟೀಲ, ಖುರ್ಷಿದ್ ಹುಲ್ಲತ್ತಿ, ರಾಮಚಂದ್ರ ಕಲ್ಲೇರ, ನಿರಂಜನಗೌಡ ಪಾಟೀಲ, ಶಿವಲಿಂಗಪ್ಪ ಕುಬಟೂರ, ಶಿದ್ದರಾಮಪ್ಪ ಕೊಟ್ರಳ್ಳಿ, ಕುಮಾರಸ್ವಾಮಿ ಹಿರೇಮಠ, ಮಾರುತಿ ಮೂಕನವರ ಸೇರಿದಂತೆ ಇನ್ನೂ ಹಲವರು ಉಪಸ್ಥಿತರಿದ್ದರು