ಹುಬ್ಬಳ್ಳಿ 19: ಶ್ರೇಷ್ಠ ಕಲಾವಿದರು ವ್ಯಸನಕ್ಕೆ ಒಳಗಾಗಿ ತಮ್ಮ ಅಮೂಲ್ಯವಾದ ಜೀವನವನ್ನು ಕಳೆದುಕೊಳ್ಳುತ್ತಿರುವುದು ಅತ್ಯಂತ ಕಳವಳಕಾರಿ ಸಂಗತಿ. ಕಲಾವಿದರು ದುಷ್ಟಚಟಗಳಿಂದ ದೂರ ಇದ್ದು ತಮ್ಮ ಕಲೆಯ ಮೂಲಕ ಸಮಾಜಕ್ಕೆ, ದೇಶಕ್ಕೆ ಉತ್ತಮ ಸೇವೆ ಸಲ್ಲಿಸುವಂತಾಗಲಿ ಎಂದು ಮೂರುಸಾವಿರ ಮಠದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ , ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಹನುಮಂತ ಶಿಗ್ಗಾಂವಿ ಹೇಳಿದರು.
ಅವರು ಶಿವರುದ್ರ ಟ್ರಸ್ಟ ವಿಜಯ ಮಹಾಂತೇಶ ಲಲಿತ ಕಲಾ ಮಹಾವಿದ್ಯಾಲಯದ ಆಶ್ರಯದಲ್ಲಿ ಆಯೋಜಿಸಿದ್ದ ಹತ್ತನೇ ಹುಬ್ಬಳ್ಳಿ ಕಲಾ ಹಬ್ಬ 2020 ಉದ್ಘಾಟಿಸಿ ಮಾತನಾಡಿದರು.
ಕಲಾವಿದರು ಕಲೆಯ ಮೂಲಕ ಮಾನವೀಯ ಗುಣಗಳನ್ನು ಬೆಳೆಸಲು ಶ್ರಮಿಸಬೇಕು ಎಂದರು.
ಮಾನಸಿಕ ಹಾಗೂ ನರರೋಗ ತಜ್ಞ ಡಾ. ವಿ. ಜಿ. ಕುಲಕರ್ಣಿ ಅವರು ವ್ಯಕ್ತಿತ್ವ ವಿಕಸನದಲ್ಲಿ ಕಲೆಯ ಪಾತ್ರ ಕುರಿತು ಮಾತನಾಡಿ ಸೂಪ್ತ ಹಾಗೂ ಜಾಗೃತ ಮನಸ್ಸುಗಳಲ್ಲಿ ಸೂಪ್ತ ಮನಸ್ಸಿನ ಪಾತ್ರ ದೊಡ್ಡದು. ಸೂಪ್ತ ಮನಸ್ಸಿನಲ್ಲಿ ನಡೆಯುವ ಚಿಂತನೆಗಳೇ ವ್ಯಕ್ತಿತ್ವ ವಿಕಾಸಕ್ಕೆ ಕಾರಣವಾಗುತ್ತವೆ. ರಚನಾತ್ಮಕ ಹಾಗೂ ಸೃಜನಾತ್ಮಕ ಚಟುವಟಿಕೆಗಳಿಗೆ ಕಲೆಯ ಮಹತ್ವ ಬಹಳವಿದೆ. ಕಾನ್ಸರ್ ಮುಂತಾದ ರೋಗಗಳ ನೋವನ್ನು ಚಿತ್ರಕಲೆಯ ಮೂಲಕ ಕಡಿಮೆ ಮಾಡಬಹುದು. ಆಘಾತ, ಅಪಘಾತದಿಂದ ನೊಂದ ಮನಸ್ಸುಗಳಿಗೆ ಚಿತ್ರಕಲೆಯಿಂದ ಭಾವನೆಗಳನ್ನು ಹರಿಸುವುದರಿಂದ ನೆಮ್ಮದಿ ನೀಡಲು ಸಾಧ್ಯ ಎಂದರು.
ಪ್ರಾಚಾರ್ಯ ಬಿ.ವಾಯ್.ನಾಗನಗೌಡರ ಮಾತನಾಡಿ ಅಕ್ಷರ ಅನ್ನುವುದು ಒಂದು ಚಿತ್ರ, ಭಾಷೆಯ ರೂಪದಲ್ಲಿ ಬಳಸುತ್ತೇವೆ. ಚಿತ್ರ ಅಂದರೆ ನಾವು ಕಂಡಂತಹ, ನೋಡಿದ ವಸ್ತುವನ್ನು ದಾಖಲೀಕರಣ ಅಥವಾ ಅನುಕರಣೆ ಮಾಡುವುದು. ಶಾಲಾ ಪಠ್ಯಕ್ರಮದಲ್ಲಿ ಚಿತ್ರಕಲಾ ವಿಷಯವನ್ನು ಕಡ್ಡಾಯಗೊಳಿಸಬೇಕು ಎಂದರು.
ಶಿವರುದ್ರ ಟ್ರಸ್ಟನ ಅಧ್ಯಕ್ಷ ಜೆ.ಎಸ್.ಮಹಗಾಂವಕರ ಅವರು ಅಧ್ಯಕ್ಷತೆ ವಹಿಸಿದ್ದರು. ಹರೀಶ ಮಲ್ಲಿಗವಾಡ ಪ್ರಾರ್ಥಿ ಸಿದರು. ಗೌರವಾಧ್ಯಕ್ಷ ಡಾ. ವಿ.ಬಿ.ನಿಟಾಲಿ ಸ್ವಾಗತಿಸಿದರು. ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ್ಯದರ್ಶಿ ಸುರೇಶ ಡಿ. ಹೊರಕೇರಿ ನಿರೂಪಿಸಿದರು. ಶ್ರೀಕಾಂತ ಎನ್. ಕಬಾಡಿ ವಂದಿಸಿದರು. ಸಂತೋಷ ಕುಸನೂರ ಸ್ವರಚಿತ ಕವನ ವಾಚನ ಮಾಡಿದರು.
ಹಿರಿಯ ಕಲಾವಿದ ಈಶ್ವರ ತಿಗಡಿ, ಕಲಾಶಿಕ್ಷಕ ಸಂಜೀವ ಕಾಳೆ, ಸುರೇಶ ಅರ್ಕಸಾಲಿ ಅವರನ್ನು ಸನ್ಮಾನಿಸಲಾಯಿತು.
ಪಾಲಿಕೆ ವೈದ್ಯಾಧಿಕಾರಿ ಡಾ. ಪ್ರಭು ಬಿರಾದಾರ, ಎಂ.ಜೆ.ಬಂಗ್ಲೆವಾಲೆ, ಪ್ರೊ ಎಸ್.ಎಂ.ಸಾತ್ಮಾರ, ಡಾ.ಬಸವಕುಮಾರ ತಲವಾಯಿ, ಆನಂದ ಘಟಪನದಿ, ಶ್ರೇಯಾ ಶೆಟ್ಟಿ, ಅಶ್ವಿನಿ ಹಿರೇಮಠ, ಅಶ್ವಿನಿ ಕುಲಕರ್ಣಿ , ಸಂತೋಷ ಹಸಬಿ, ಪ್ರತಾಪ ಬಹುರೂಪಿ, ರಮೇಶ ಹಿರೇಗೌಡರ, ರಮೇಶ ಚಂಡೆಪ್ಪನವರ ಶಂಕರ, ಮುಂತಾದವರು ಇದ್ದರು.