ನರೇಗಾ ಬಜೆಟ್ ಹೆಚ್ಚಿಸಿ, ಅಲೆದಾಟದ ಕಾನೂನುಗಳನ್ನು ಕೈ ಬಿಡಿ : ಗ್ರಾಕೂಸ್

ಲೋಕದರ್ಶನ ವರದಿ

ಹಗರಿಬೊಮ್ಮನಹಳ್ಳಿ 05: ನರೇಗಾ ಕೂಲಿ ಕಾರ್ಮಿಕರಿಗೆ ಕೇಂದ್ರ ಸರಕಾರ ದಿನಕ್ಕೊಂದು ಕಾನೂನುಗಳನ್ನು ರೂಪಿಸುತ್ತಿದ್ದು ಕೂಡಲೇ ಅವುಗಳನ್ನು ಕೈಬಿಡುವಂತೆ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಪ್ರಧಾನ ಮಂತ್ರಿಗಳಿಗೆ ತಾಹಶಿಲ್ದಾರ್ ಮೂಲಕ ಶುಕ್ರವಾರ ಮನವಿ ಸಲ್ಲಿಸಿದರು.

   ಈ ವೇಳೆ ಗ್ರಾಕೂಸ್ ಸಂಚಾಲಕಿ ಅಕ್ಕಮಹಾದೇವಿ ಮಾತನಾಡಿ ನರೇಗಾ ಯೋಜನೆಯಿಂದ ಲಕ್ಷಾಂತರ ಕುಟುಂಬಗಳು ನೆಮ್ಮದಿಯ ಬದುಕು ಸಾಗಿಸುತ್ತಿವೆ ಆದರೆ ಹೊಸ ಕಾನೂನುಗಳಿಂದ ಬ್ಯಾಂಕ್ ಅಲೆದಾಟ ಹೆಚ್ಚಾಗಿದ್ದು ಕೂಲಿ ಸಿಗದೇ ಪರಿತಪಿಸುವಂತಹ ಸ್ಥಿತಿ ಎದುರಾಗಿದೆ, ಜೊತೆಗೆ ಕೇಂದ್ರ ಸರಕಾರ ಕಳೆದ ಬಾರಿ ಬಜೆಟ್ನಲ್ಲಿ ನರೇಗಾ ಯೋಜನೆಗೆ ನೀಡಿದ ಮೊತ್ತಕ್ಕಿಂತ ಈಬಾರಿಯ ಬಜೆಟ್ನಲ್ಲಿ ಕಡಿತಗೊಳಿಸಿದೆ, 100 ಮಾನವ ದಿನಗಳ ಪೂರೈಕೆಗೆ ವಿಧಿಸಿದ ಷರತ್ತುಗಳು ಸರ್ಕಾರಿ ನೌಕರರಿಗೆ ಏಕೆ ಇಲ್ಲ ಎಂದು ಪ್ರಶ್ನಿಸಿದರು. ನರೇಗಾ ಬಜೆಟ್ ಕೂಡಲೇ ಹೆಚ್ಚಿಸಬೇಕು, ಕೂಲಿಯನ್ನು 800 ರೂಗಳಿಗೆ ಹೆಚ್ಚಿಸಬೇಕು, 2ಹಂತದ ಎನ್ಎಂಎಂಎಸ್ ಕೈಬಿಡಬೇಕು, ತಾಂತ್ರಿಕ ಸಮಸ್ಯೆ ನೆಪ ಹೇಳದೇ ಕೂಲಿಯನ್ನು 15 ದಿನಗಳಲ್ಲಿ ಪಾವತಿಸಬೇಕು ಎಂದರು.

     ನರೇಗಾ ಸಮಸ್ಯೆಗಳ ಇತ್ಯರ್ಥಕ್ಕಾಗಿ ರಾಯಚೂರಿನಲ್ಲಿ ರಾಜ್ಯ ಮಟ್ಟದ ಅನಿರ್ಧಿಷ್ಠಾವಧಿ ಉಪವಾಸ ಸತ್ಯಾಗ್ರಹ ಮಾಡುತ್ತಿರುವ ಅಭಯ್ ಕುಮಾರ ಅವರಿಗೆ ಬೆಂಬಲ ಸೂಚಿಸುವುದರ ಜೊತೆ 2 ತಿಂಗಳಿನಿಂದ ದೆಹಲಿಯಲ್ಲಿ 18 ರಾಜ್ಯಗಳ ಕೂಲಿ ಕಾರ್ಮಿಕರ ಹೋರಾಟಕ್ಕೆ ಬೆಂಬಲ ನೀಡುತ್ತಾ  ಪ್ರಧಾನಿ ಮಂತ್ರಿ ಅವರಿಗೆ ಹಕ್ಕೊತ್ತಾಯಗಳನ್ನು ನೀಡುತ್ತಿದ್ದೇವೆ ಎಂದರು.

 ಎಂ.ಬಿ.ಕೊಟ್ರಮ್ಮ, ಟಿ.ಹುಲುಗೆಮ್ಮ, ಗಂಗಮ್ಮ, ಚಂದ್ರಪ್ಪ, ಅಂಬರಿಷ್, ಸೋಮೇಶ್, ತ್ರೀವೇಣಿ, ದುರುಗಮ್ಮ, ಹನುಮಂತ, ವೀರಯ್ಯ ಸೆರಿದಂತೆ ಇನ್ನಿತರರು ಇದ್ದರು.