ಬಡತನದಲ್ಲೂ ಮೆರೆದ ಮಾನವೀಯತೆ: ಮಹಾಲಿಂಗಪುರದಲ್ಲಿ ಕಣ್ಣೀರಾಗಿಸಿತು ಅಪರೂಪದ ಕ್ಷಣ
ಮಹಾಲಿಂಗಪುರ 2: ಇಂದಿನ ಸ್ವಾರ್ಥಮಯ ಸಮಾಜದಲ್ಲಿ ಹಣವೇ ಎಲ್ಲವೂ ಎಂಬ ಭಾವನೆ ಹೆಚ್ಚುತ್ತಿರುವ ಸಂದರ್ಭದಲ್ಲಿ, ಮಹಾಲಿಂಗಪುರ ಪುರಸಭೆಯ ಮುಂಭಾಗದಲ್ಲಿ ಗುರುವಾರ ನಡೆದ ಒಂದು ಮನಕಲಕುವ ಘಟನೆ ಮಾನವೀಯತೆ ಇನ್ನೂ ಜೀವಂತವಾಗಿದೆ ಎಂಬುದನ್ನು ಸಾಕ್ಷಿಕರಿಸಿತು. ಹೊಟ್ಟೆಪಾಡಿಗಾಗಿ ಹೋರಾಡುವ ಇಬ್ಬರು ವೃದ್ಧೆಯರ ನಡುವೆ ನಡೆದ ಈ ಅಪರೂಪದ ಘಟನೆ ಅಲ್ಲಿದ್ದವರ ಹೃದಯವನ್ನು ಸ್ಪರ್ಶಿಸಿತು.
ಪುರಸಭೆಯ ಮುಂಭಾಗದ ರಸ್ತೆಯ ಬದಿಯಲ್ಲಿ ಕಾಲಿನ ಸಮಸ್ಯೆಯಿಂದ ಸರಿಯಾಗಿ ನಡೆಯಲು ಸಾಧ್ಯವಾಗದ ಅಂಗವಿಕಲ ವೃದ್ಧೆಯೊಬ್ಬರು ತಮ್ಮ ಬಳಿ ತಂದಿದ್ದ ಸ್ವಲ್ಪ ತರಕಾರಿಗಳನ್ನು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದರು. ಜೀವನವೇ ಕಷ್ಟಗಳ ಸರಮಾಲೆಯಾಗಿದ್ದರೂ, ಯಾರ ಮುಂದೆಯೂ ಕೈಚಾಚದೆ, ದುಡಿದು ಬದುಕಬೇಕು ಎಂಬ ಆತ್ಮಗೌರವದ ಬದುಕನ್ನು ಅವರು ನಡೆಸುತ್ತಿದ್ದರು. ಅದೇ ವೇಳೆ ಸಮೀಪದಲ್ಲೇ ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿದ್ದ ಮತ್ತೊಬ್ಬ ವೃದ್ಧೆ, ದಾನಿಗಳು ನೀಡಿದ್ದ ಅಲ್ಪಸ್ವಲ್ಪ ಹಣವನ್ನು ಕೈಯಲ್ಲಿ ಹಿಡಿದು ಆ ಅಂಗವಿಕಲ ಅಜ್ಜಿಯ ಬಳಿ ಬಂದರು. ತಮ್ಮ ಕಷ್ಟವನ್ನೂ ಮರೆತು, ಈ ಹಣದಲ್ಲಿ ಸ್ವಲ್ಪವಾದರೂ ನಿಮಗೆ ಉಪಯೋಗವಾಗಲಿ ಎಂಬ ಕರುಣೆಯಿಂದ ಆ ಹಣವನ್ನು ನೀಡಲು ಮುಂದಾದರು.