ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆ ಪುನರುಜ್ಜಿವನಕ್ಕೆ ಪಣ -ಅಣ್ಣಾಸಾಹೇಬ ಜೊಲ್ಲೆ

Hiranyakesi Co-operative Sugar Factory Pledge for Revival -Annasaheba Jolle

ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆ ಪುನರುಜ್ಜಿವನಕ್ಕೆ ಪಣ -ಅಣ್ಣಾಸಾಹೇಬ ಜೊಲ್ಲೆ 

ಸಂಕೇಶ್ವರ 18: ಏಷ್ಯಾ ಖಂಡದಲ್ಲಿಯೆ ಸುಪ್ರಸಿದ್ದವಾದ ಸಂಕೇಶ್ವರದ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆಯ ಪುನುರುಜ್ಜಿವನಕ್ಕೆ ಇಂದು ನಡೆದ ಹುಕ್ಕೇರಿ ತಾಲೂಕಿನ ಎಲ್ಲ ಸಹಕಾರಿ ಸಂಘಗಳು ಹಾಗೂ ಹಿತೈಶಿಗಳ ಸಭೆಯಲ್ಲಿ ಪಣ ತೊಡಲಾಯಿತು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಸಂಸದ ಅಣ್ಣಾಸಾಹೇಬ ಶಂಕರ ಜೊಲ್ಲೆ ಅವರು, ಕಳೆದ ಕೆಲವು ವರ್ಷಗಳಿಂದ ಈ ಸಕ್ಕರೆ ಕಾರ್ಖಾನೆಯ ಹಾನಿ ಮತ್ತು ಸಾಲದ ಪ್ರಮಾಣ ಹೆಚ್ಚಾಗುತ್ತಲೆ ನಡೆದಿದೆ. ಇದರಿಂದ ರೈತರ ಕಬ್ಬಿಗೆ ಉತ್ತಮ ಬೆಲೆ ಹಾಗೂ ಕಾರ್ಮಿಕರಿಗೆ ಉತ್ತಮ ವೇತನ ಕೊಡಲು ಆಗುತ್ತಿಲ್ಲ. ಈ ಹಿನ್ನಲೆಯಲ್ಲಿ ಕಬ್ಬಿನ ಉಪ-ಉತ್ಪನ್ನಗಳ ಅಭಿವೃದ್ದಿಗೆ ಹೆಚ್ಚಿನ ಗಮನ ನೀಡಬೇಕಾಗಿದೆ. ಇದಕ್ಕಾಗಿ ನೂತನ ಬಾಯ್ಲರ್ ಅಳವಡಿಕೆ ಹಾಗೂ ಇಥೆನಾಲ್, ಕೊ-ಜನರೇಶನ್ ಕಡೆಗೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ. ಇದರಿಂದ ಕಾರ್ಖಾನೆಯ ಒಟ್ಟು ಉತ್ಪನ್ನ ಹೆಚ್ಚಾಗುತ್ತದೆ.ಇದರಿಂದ ಕಬ್ಬು ಕಳಿಸಿದ 15 ದಿನಗಳ ಅವಧಿಯಲ್ಲಿ ರೈತರಿಗೆ ಬಿಲ್ಲು ಕೊಡಲು ಸಾಧ್ಯವಾಗುತ್ತದೆ. ಹಾಗೂ ಕಾರ್ಮಿಕರಿಗೆ 10 ನೇ ತಾರೀಖಿನ ಒಳಗೆ ವೇತನ ಕೊಡಲು ಸಾಧ್ಯವಾಗುತ್ತದೆ ಎಂದರು. ಹುಕ್ಕೇರಿ ತಾಲೂಕಿನ ಎಲ್ಲ   ರೈತರು ತಮ್ಮ ಕಬ್ಬನ್ನು  ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆಗೆ ಕಳಿಸಬೇಕೆಂದರು. ಈ ರೀತಿಯಾಗಿ ಮಾಡಿದರೆ ಕೆಲವೆ ವರ್ಷಗಳಳ್ಲಿ ಹಿರಣ್ಯಕೇಶಿಯ ಸಾಲದ ಹೊರೆಯನ್ನು ಕಡಿಮೆ ಮಾಡಲು ಸಾಧ್ಯ ಎಂದರು. ಈ ಹಿನ್ನಲೆಯಲ್ಲಿ ಹುಕ್ಕೇರಿ ತಾಲೂಕಿನ ಎಲ್ಲ ಸಹಕಾರಿ ಸಂಘಗಳು ತಮ್ಮಲ್ಲಿನ ಹೆಚ್ಚುವರಿ ಠೇವಣಿ ಹಣವನ್ನು ಈ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಇಡಲು ವಿನಂತಿಸಿದರು. ಇದಲ್ಲದೆ ರೈತರಿಗೆ ಉತ್ತಮ ಕಬ್ಬಿನ ಸಸಿ, ರಸಗೊಬ್ಬರ ಪೂರೈಕೆ ಮಾಡಲಾಗುವುದು, ರಿಯಾಯಿತಿ ದರದಲ್ಲಿ ಕಾಂಪೋಷ್ಟ ಗೊಬ್ಬರ ನೀಡಲಾಗುವುದು, ರೈತರಿಗೆ ರಿಯಾಯಿತಿ ದರದಲ್ಲಿ ಸಕ್ಕರೆ ಪೂರೈಕೆ ಮಾಡಲಾಗುವುದು. ಕಾರ್ಮಿಕರ ಮನೆಗಳ ದುರಸ್ತಿ,ಕಾರ್ಮಿಕರಿಗೆ ಜೀವ ವಿಮೆ, ಆರೋಗ್ಯ ವಿಮೆ ಹಗೂ ಅಪಘಾತ ವಿಮೆಗಳ ಸೌಲಭ್ಯ ನೀಡುವುದು, ಆಡಳಿತ ಕಛೇರಿಯ ದುರಸ್ತಿ, ಸಭಾಂಗಣ ದುರಸ್ತಿ ಮಾಡಲಾಗುವುದು ಎಂದು  ಮಾಜಿ ಸಂಸದ ಅಣ್ಣಾಸಾಹೇಬ ಶಂಕರ ಜೊಲ್ಲೆ ಹೇಳಿದರು.  

ಕಾರ್ಖಾನೆಯ ಜನರಲ್ ಮ್ಯಾನೇಜರ ವಿ.ಎಸ್‌.ದೇಸಾಯಿ ಅವರು ಮಾತನಾಡಿ,  ಟ್ರಕ್ಕು, ಟ್ರಾಕ್ಟರ್, ಚಕ್ಕಡಿಗಳಿಂದ ಬೇಗನೆ ಕಬ್ಬು ತೂಕ ಮಾಡಿ ಇಳಿಸಿ ಕಬ್ಬು ನುರಿಸುವ  ವಿನೂತನ ತಂತ್ರಜ್ಞಾನದ ಪ್ರಾತ್ಯಕೆಯನ್ನು ತೋರಿಸಿದರು. ಇದರಿಂದ ರೈತರಿಗೆ ಹಾಗೂ ಕಾರ್ಖಾನೆಗೆ ಸಾಕಷ್ಟು ಲಾಭ ಆಗುತ್ತದೆ ಎಂದರು.ಈ ಸಮಾರಂಭದಲ್ಲಿ ಶಂಕರರಾವ ಹೆಗಡೆ, ಜಯಪಾಲ ಮುನ್ನೋಳಿ, ಆನಂದ ಚೌಗಲಾ, ಸಿ.ಕೆ.ದೇಸಾಯಿ, ಆರ್‌.ಎಸ್‌.ನೂಲಿ ಮುಂತಾದವರು ಮಾತನಾಡಿ ಕಾರ್ಖಾನೆಯ ಪುನರುಜ್ಜಿವನಕ್ಕೆ ವಿವಿಧ ಸಲಹೆಗಳನ್ನು ನೀಡಿದರು.  

ಸಮಾರಂಭದ ಅಧ್ಯಕ್ಷತೆಯನ್ನು ಕಾರ್ಖಾನೆಯ ಅಧ್ಯಕ್ಷ ಬಸವರಾಜ ಕಲ್ಲಟ್ಟಿ ವಹಿಸಿದ್ದರು. ಸಮಾರಂಭದಲ್ಲಿ ಕಾರ್ಖಾನೆಯ ಸಂಚಾಲಕರಾದ ಶಿವ ನಾಯಿಕ ನಾಯಿಕ, ಪ್ರಭುದೇವಗೌಡ  ಪಾಟೀಲ,ಮಲ್ಲಿಕಾರ್ಜುನ ಪಾಟೀಲ, ಶಾರದಾ ಪಾಟೀಲ, ಸುರೇಶ ರಾಯಮಾನೆ, ಮುಖಂಡರಾದ ಬಸವರಾಜ ಬಾಗಲಕೋಟಿ, ಶಶಿಕಾಂತ ದೊಡಲಿಂಗನವರ, ಕಾರ್ಖಾನೆಯ ಆಡಳಿತಾಧಿಕಾರಿ ರವೀಂದ್ರ ಚೌಗಲಾ, ಕಾರ್ಮಿಕ ಸಂಘಟನೆಯ ಅಧ್ಯಕ್ಷ ಮೋಹನ ಕೋಟಿವಾಲೆ ಮುಂತಾದವರು ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಕಾರ್ಖಾನೆಯ ಉಪಾಧ್ಯಕ್ಷ ಅಶೋಕ ಪಟ್ಟಣಶೆಟ್ಟಿ ಸ್ವಾಗತಿಸಿದರು. ಕಛೇರಿ ಅಧಿಕ್ಷಕ ಸುಭಾಷ ನಾಶಿಪುಡಿ ವಂದಿಸಿದರು. ಲಕ್ಷ್ಮಣ ಹಂಚಿನಮನಿ ನಿರೂಪಿಸಿದರು.