ಸಾಮಾಜಿಕ ವಿಜ್ಞಾನ ವಿಷಯಗಳ ಪರಿಣಾಮಕಾರಿ ಬೋಧನೆಯಿಂದ ಮಾತ್ರ ಸಮಾಜದ ಸ್ವಾಸ್ಥವನ್ನು ಕಾಪಾಡಬಹುದು: ಡಾ. ಉಮೇಶಪ್ಪ ಎಚ್

Health of society can be maintained only by effective teaching of social science subjects: Dr. Umes

ಸಾಮಾಜಿಕ ವಿಜ್ಞಾನ ವಿಷಯಗಳ ಪರಿಣಾಮಕಾರಿ ಬೋಧನೆಯಿಂದ ಮಾತ್ರ ಸಮಾಜದ ಸ್ವಾಸ್ಥವನ್ನು ಕಾಪಾಡಬಹುದು: ಡಾ. ಉಮೇಶಪ್ಪ  ಎಚ್ 

ಹಾವೇರಿ : ಬದಲಾದ ಜಗತ್ತಿಗೆ ಶೀಘ್ರವಾಗಿ ಹೊಂದಿಕೊಂಡು ಅದರ ಆಶಯಗಳನ್ನು ಅರ್ಥೈಸಿಕೊಳ್ಳುತ್ತ ಉಪನ್ಯಾಸಕರು ಬೋಧನೆ ಮಾಡಿದರೆ ಮಾತ್ರ ಸಮಾಜವನ್ನು ಜೀವಂತವಾಗಿರಿಸಲು ಸಾಧ್ಯ. ಬದಲಾಗುತ್ತಿರುವ ತಂತ್ರಜ್ಞಾನ ಮತ್ತು ವಿದ್ಯಾರ್ಥಿಗಳ ಅಶೋತ್ತರಗಳನ್ನ ಈಡೇರಿಸುವಂತೆ ಬೋಧನೆಯ ಹೊಸಬಗೆಯ ಸಾಧ್ಯತೆಗಳನ್ನು ಅಳವಡಿಸಿಕೊಳ್ಳಬೇಕು. ವಿಶೇಷವಾಗಿ ಇಂದಿನ ವಿದ್ಯಾರ್ಥಿಗಳಲ್ಲಿ ಮೌಲ್ಯಗಳನ್ನು ಬಿತ್ತುವ ಕೆಲಸವಾಗಬೇಕು. ಅದಕ್ಕೆ ಸಾಮಾಜಿಕ ವಿಜ್ಞಾನ ವಿಷಯಗಳ ಪರಿಣಾಮಕಾರಿ ಬೋಧನೆಯಿಂದ ಮಾತ್ರ ಸಮಾಜದ ಸ್ವಾಸ್ಥವನ್ನು ಕಾಪಾಡಬಹುದು ಎಂದು ಹಾವೇರಿಯ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಡಾ. ಉಮೇಶಪ್ಪ  ಎಚ್ ಕರೆಕೊಟ್ಟರು.  

        ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆರಂಭವಾದ ಹಾವೇರಿ ಧಾರವಾಡ ಮತ್ತು ಗದಗ ಜಿಲ್ಲೆಗಳ ಪದವಿಪೂರ್ವ ಕಾಲೇಜುಗಳಲ್ಲಿನ ಅರ್ಥಶಾಸ್ತ್ರ ಮತ್ತು ರಾಜ್ಯಶಾಸ್ತ್ರ ಉಪನ್ಯಾಸಕರುಗಳಿಗೆ ಎರಡು ದಿನಗಳ ಪುನಶ್ಚೇತನ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. 

        ಸಂಕೀರ್ಣವಾಗುತ್ತಿರುವ ಸಮಾಜದಲ್ಲಿ ಉತ್ತಮ ನಾಗರಿಕರನ್ನ ಸೃಷ್ಟಿಸುವ ಮಹತ್ವದ ಜವಾಬ್ದಾರಿ ಉಪನ್ಯಾಸಕರ ಮೇಲಿದೆ. ಸದಾ ಅಧ್ಯಯನಶೀಲರಾಗಿರುವ ಉಪನ್ಯಾಸಕರು ಮಾತ್ರ ವಿದ್ಯಾರ್ಥಿಗಳ ಜ್ಞಾನ ತೃಷೆಯನ್ನ ನೀಗಿಸಬಲ್ಲರು. ವಿದ್ಯಾರ್ಥಿಗಳ ಭವಿಷ್ಯ ಕಟ್ಟುವ ದೊಡ್ಡ ಜವಾಬ್ದಾರಿಯಲ್ಲಿರುವ ತಮಗೆ ಇಂತಹ ಪುನಶ್ಚೇತನ ತರಬೇತಿಗಳಿಂದ ವಿಷಯಗಳ ಮನನದೊಂದಿಗೆ ಬೋಧನೆಗೆ ಹೊಸ ಚೈತನ್ಯ ಸಿಕ್ಕಂತಾಗುತ್ತದೆ. ಉಪನ್ಯಾಸಕರು ಇದರ ಸದುಪಯೋಗ ಪಡೆದು ಪ್ರತಿಫಲವನ್ನು ಮಕ್ಕಳಿಗೆ ನೀಡಬೇಕು ಎಂದು ಕಿವಿಮಾತು ಹೇಳಿದರು. 

          ಮೊದಲಿಗೆ ಪ್ರಸ್ತಾವಿಕ ನುಡಿಗಳನ್ನಾಡಿದ ಪ್ರಾಚಾರ್ಯ ಎಚ್‌.ಡಿ.ಗಂಟೇರ ಇಲಾಖೆ ನಡೆಸುತ್ತಿರುವ ಇಂತಹ ತರಬೇತಿಗಳಿಂದ ಉಪನ್ಯಾಸಕರುಗಳಿಗೆ ಆತ್ಮಸ್ಥೈರ್ಯ ಹೆಚ್ಚುತ್ತದೆ.ವಿದ್ಯಾರ್ಥಿಗಳಲ್ಲಿನ ಪರೀಕ್ಷೆ ಭಯ ಹೋಗಲಾಡಿಸಿ ಹೆಚ್ಚು ಅಂಕಗಳನ್ನು ಗಳಿಸುವಂತೆ ಮಾಡಲು ಸಹಾಯಕವಾಗುತ್ತದೆ. ಆದ್ದರಿಂದ  ಉಪನ್ಯಾಸಕರು ಇದರ ಫಲವನ್ನು ಮಕ್ಕಳಿಗೆ ತಲುಪಿಸಬೇಕು ಎಂದು ಮನವಿ ಮಾಡಿದರು. ನಾಗರಾಜ ಹೆಕ್ಕೇರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರಾಚಾರ್ಯರಾದ ಜಿ.ಪಿ.ಪೂಜಾರ, ಬಸವರಾಜ ಇಟ್ಟಿಗುಡಿ, ಸಂಯೋಜಕ ರವಿಕುಮಾರ ಅಂಬೋರೆ, ಮಂಜುನಾಥ ಹಟ್ಟಿಯವರ, ರಾಜ್ಯ ಸಂಪನ್ಮೂಲ ವ್ಯಕ್ತಿಗಳು, ಉಪನ್ಯಾಸಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.  

        ಮೊದಲಿಗೆ ಸುಜಾತ ಕೋಪರ್ಡೇ  ಪ್ರಾರ್ಥಿಸಿದರೆ, ಸಂಯೋಜಕ ರವಿ ಸಾದರ ಸ್ವಾಗತಿಸಿದರು. ಮಂಜುನಾಥ ಹಟ್ಟಿಯವರ ನಿರೂಪಿಸಿ, ಸಿದ್ದಪ್ಪ ಸಿದ್ದಣ್ಣನವರ ವಂದಿಸಿದರು.