ಪ್ರತಿಯೊಬ್ಬರೂ ಕೂಡ ಇಡೀ ಮನುಕುಲ ಪ್ರೀತಿಸಬೇಕಿದೆ: ಶ್ರೀನಿವಾಸ ಮಾನೆ

Everyone is to be loved by the whole of mankind: Srinivasa Mane

ಪ್ರತಿಯೊಬ್ಬರೂ ಕೂಡ ಇಡೀ ಮನುಕುಲ ಪ್ರೀತಿಸಬೇಕಿದೆ: ಶ್ರೀನಿವಾಸ ಮಾನೆ 

ಹಾನಗಲ್ 01: ಪ್ರತಿಯೊಬ್ಬರೂ ಕೂಡ ಇಡೀ ಮನುಕುಲ ಪ್ರೀತಿಸಬೇಕಿದ್ದು, ನಾವೆಲ್ಲರೂ ಒಂದೇ ಎನ್ನುವ ಸಂದೇಶ ಸಾರಬೇಕಿದೆ. ಅಂದಾಗ ಮಾತ್ರ ಸಂತರು, ಶರಣರು, ಸೂಫಿಗಳು ಸಾರಿರುವ ತತ್ವ, ಸಂದೇಶಗಳು ನಿಜ ಜೀವನದಲ್ಲಿಯೂ ಸಹ ಆಚರಣೆಗೆ ಬಂದಂತಾಗಲಿವೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು. 

  ತಾಲೂಕಿನ ಗೊಂದಿ ಗ್ರಾಮದ ಖಾನಖ್ವಾ ಎ ಫಕ್ರಿಯಾ ಗೌಸಿಯಾದಲ್ಲಿ ಗ್ಲೋಬಲ್ ಸೂಫಿ ಫೋರ್‌ಂ ಆಶ್ರಯದಲ್ಲಿ ನಡೆದ 16 ನೇ ಜಶ್ನೆ ಗೌಸುಲ್‌ವರಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಎಲ್ಲ ಧರ್ಮ ಗ್ರಂಥಗಳೂ ಕೂಡ ಮೊದಲು ಮಾನವನಾಗಿ ವಿಶ್ವಮಾನವನಾಗು ಎನ್ನುವ ಸಂದೇಶವನ್ನೇ ಸಾರಿವೆ. ಧರ್ಮಗಳ ಪ್ರತಿಪಾದನೆ ಭಿನ್ನ ಭಿನ್ನವಾಗಿ ನಮಗೆ ಕಂಡರೂ ಸಹ ಗುರಿ ಒಂದೇ ಆಗಿದೆ. ಪ್ರಪಂಚದ ನೂರಾರು ರಾಷ್ಟ್ರಗಳಲ್ಲಿ ಸಾವಿರಾರು ಸಂಸ್ಕೃತಿಗಳಿವೆ, ಲೆಕ್ಕವಿಲ್ಲದಷ್ಟು ಧರ್ಮಗಳೂ ಇವೆ. ಆದರೆ ಸಕಲ ಜೀವರಾಶಿಗಳಿಗೆ ಲೇಸು ಬಯಸುವುದು ಎಲ್ಲ ಧರ್ಮಗಳ ಹೆಗ್ಗುರಿಯಾಗಿದೆ ಎಂದು ಹೇಳಿದ ಅವರು ಮಾನವ ಕುಲಕ್ಕೆ ಒಳಿತಾಗುವಂತೆ ಜೀವನ ನಡೆಸುವುದು ನಮ್ಮೆಲ್ಲರ ಆದ್ಯತೆಯಾಗಬೇಕಿದೆ ಎಂದರು. 

  ಸಾನ್ನಿಧ್ಯವಹಿಸಿದ್ದ ಚಳಗೇರಿಯ ಹಜರತ್ ಸೈಯ್ಯದ್ ಸೂಫಿ ಅಲಿಯಾ ಶಾ ಖಾದ್ರಿ ಮಾತನಾಡಿ, ಬಹು ದಿನಗಳಗಳಿಂದಲೂ ಮನುಷ್ಯ ನೆಮ್ಮದಿಯಿಂದ ಜೀವನ ನಡೆಸಲು ತನಗೆ ತಾನು ಕೆಲ ನೀತಿ, ನಿಯಮ ರೂಪಿಸಿಕೊಂಡು ಬಂದಿದ್ದಾನೆ. ಸತ್ಯ, ಪ್ರೀತಿ, ನೀತಿ, ಪ್ರಾಮಾಣಿಕತೆ, ಅಹಿಂಸೆ, ದಯೆ, ಸಹಕಾರ, ಸಹಬಾಳ್ವೆ, ತ್ಯಾಗ ಇವೆಲ್ಲವುಗಳನ್ನು ಒಳಗೊಂಡಿರುವುದೇ ಧರ್ಮ ಎನ್ನುವ ಅರಿವು ಪ್ರತಿಯೊಬ್ಬರಿಗಾಗಬೇಕಿದೆ ಎಂದರು. 

  ಕಾರ್ಯಕ್ರಮದಲ್ಲಿ ಬೇರೆ, ಬೇರೆ ಕ್ಷೇತ್ರಗಳಲ್ಲಿನ ಸೇವೆ ಗುರುತಿಸಿ ಹಲವರನ್ನು ಸನ್ಮಾನಿಸಲಾಯಿತು. ಹಜರತ್ ಖ್ವಾಜಾ ಸೂಫಿ ಮೆಹೆದ್ದೀನ್‌ಅಲಿ ಶಾ ಖಾದ್ರಿ ಸಮ್ಮುಖ ವಹಿಸಿದ್ದರು. ತಾಪಂ ಮಾಜಿ ಸದಸ್ಯ ದ್ಯಾವನಗೌಡ ಪಟೀಲ, ಮುಖಂಡರಾದ ಆದರ್ಶ ಶೆಟ್ಟಿ, ರಾಜಕುಮಾರ ಶಿರಪಂತಿ, ಪ್ರಕಾಶ ರಾಠೆ, ಮಂಜುನಾಥ ದಳವಾಯಿ, ಅಶೋಕ ಸಿದ್ದಾಪೂರ, ಬಸವರಾಜ ತರವಂದ, ಪರಶುರಾಂ ಶೇಷಗಿರಿ, ಎಂ.ಕೆ.ಇಸ್ಮೈಲ್, ಮಹ್ಮದ್‌ಹುಸೇನ್ ಸೇರಿದಂತೆ ಅನೇಕರಿದ್ದರು.