ವಿದ್ಯಾರ್ಥಿಯ ಅಭಿವೃದ್ಧಿಗೆ ಶಿಕ್ಷಣವೇ ಅಡಿಗಲ್ಲು: ಗುರುಸಿದ್ಧರಾಜಯೋಗೀಂದ್ರ

ಹಾನಗಲ್ಲ : ಶಿಕ್ಷಕ ಜ್ಞಾನ ವಾಹಕನಾಗಿದ್ದು ಶಾಲಾ ಮಕ್ಕಳ ಬದುಕನ್ನು ಪ್ರಜ್ವಲ ಶಿಕ್ಷಣ ನೀಡಿ ಜೀವನ ಸಾರ್ಥಕಪಡಿಸಿಕೊಳ್ಳುವ ಸದಾಶಯ ಅವನದು ಎಂದು ಹುಬ್ಬಳ್ಳಿ ಮೂರುಸಾವಿರಮಠದ ಜಗದ್ಗುರು ಗುರುಸಿದ್ಧರಾಜಯೋಗೀಂದ್ರ ಮಹಾಸ್ವಾಮಿಗಳು ನುಡಿದರು.

ಶನಿವಾರ ಹಾನಗಲ್ಲಿನ ವಿರಕ್ತಮಠದ ಸದಾಶಿವ ಮಂಗಲ ಭವನದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯತ್, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ವಿವಿಧ ಶಿಕ್ಷಕ ಸಂಘಟನೆಗಳು ಸಂಯಕ್ತವಾಗಿ ಆಯೋಜಿಸಿದ ಶಿಕ್ಷಕ ದಿನಾಚರಣೆ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿದರು. ಜ್ಞಾನವೇ ನಿಜವಾದ ಬೆಳಕು. ವಿದ್ಯಾರ್ಥಿಯ ಅಭಿವೃದ್ಧಿಗೆ ಶಿಕ್ಷಣವೇ ಅಡಿಗಲ್ಲು. ಗುರು ಸ್ಥಾನ ಎಲ್ಲದಕ್ಕಿಂತ ದೊಡ್ಡದು ಎಂದ ಅವರು ಯಾವುದೇ ಪಲ್ಲಕ್ಕಿ ಪೀಠ ಸ್ಥಾನಮಾನಗಳು ಗುರುಸ್ಥಾನದ ಮುಂದಲ್ಲ ಎಂದರು.

ಸಮ್ಮುಖವಹಿಸಿ ಮಾತನಾಡಿದ ತುಮಕೂರು ಹಿರೇಮಠದ ಡಾ.ಶಿವಾನಂದ ಶಿವಾಚಾರ್ಯ ಸ್ವಾಮಿಜಿ, ಶಿಕ್ಷಕ ಒಬ್ಬ ಯೋಗಿಯಂತೆ, ಶೀಲವುಳ್ಳ ದಕ್ಷತೆಯ ಪ್ರತಿಮೂರ್ತಿ ಶಿಕ್ಷಕ. ಪಾಠವೇ ಅವನಿಗೆ ಪಂಚಪ್ರಾಣ. ಸ್ವಾಧ್ಯಾಯ ಆತನಿಗೆ ಸಿದ್ಧಿಸಬೇಕು. ಅವನು ನಿತ್ಯ ದಾಸೋಹಿ. ತಾಮಸಗಳನ್ನು ತೊರೆದು ಸಾತ್ವಿಕತೆ ಬಿತ್ತುವ ಬದ್ಧತೆಯ ಶಿಕ್ಷಕ ಈ ಜಗದ ಶ್ರೇಷ್ಟ ಗುರು. ಎಲ್ಲ ಕಾಲಕ್ಕೂ, ಎಲ್ಲೆಡೆ ಗೌರವಕ್ಕೆ ಪಾತ್ರವಾಗುವವನು ಗುರುವೆ ಎಂಬುದನ್ನು ಎಲ್ಲರೂ ಅರಿಯಬೇಕು ಎಂದರು.

ಶಾಸಕ ಶ್ರೀನಿವಾಸ ಮಾನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಾಡ ಕಟ್ಟುವಲ್ಲಿ ಶಿಕ್ಷಕನ ಪಾತ್ರ ಮಹತ್ವದ್ದು. ಮಕ್ಕಳ ಭವಿಷ್ಯ ರೂಪಿಸುವ ಶಿಕ್ಷಕನಿಗೆ ಮಕ್ಕಳಿಗಾಗಿ ಜ್ಞಾನ ದಾನ ಮಾಡುವುದೇ ಅತ್ಯಂತ ಶ್ರದ್ಧೆಯ ಕಾರ್ಯ. ಮಕ್ಕಳಿಗೆ ಪಠ್ಯದ ಶಿಕ್ಷಣದ ಜೊತೆಗೆ ಸಾಂಸ್ಕೃತಿಕ ಕ್ರೀಡಾ ತರಬೇತಿಯನ್ನೂ ನೀಡಬೇಕು. ನೈತಿಕವಾಗಿ ಮುಂದಿನ ಪೀಳಿಗೆಯನ್ನು ಬೆಳೆಸುವುದು ಅತ್ಯವಶ್ಯವಾಗಿದೆ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ.ಸಾಲಿಮಠ ಪ್ರಾಸ್ತಾವಿಕವಾಗಿ ಮಾತನಾಡಿ, ತಾಲೂಕಿನಲ್ಲಿ ಶೈಕ್ಷಣಿಕ ಹಿತಕ್ಕಾಗಿ ಇಡೀ ಶಿಕ್ಷಕ ಬಳಗ ಅತ್ಯುತ್ತಮ ಸೇವೆ ಸಲ್ಲಿಸುತ್ತಿದ್ದು ವಿದ್ಯಾರ್ಥಿಗಳ ಹಿತವೇ ನಮ್ಮೆಲ್ಲ ಹಿತವಾಗಿದೆ. ಅದಕ್ಕಾಗಿ ಹೆಚ್ಚು ಪರಿಶ್ರಮವಹಿಸಲು ನಮ್ಮ ಶಿಕ್ಷಕ ಬಳಗ ಸಿದ್ಧವಿದೆ ಎಂದರು.

ತಾಲೂಕು ತಹಶೀಲ್ದಾರ ರವಿಕುಮಾರ ಕೊರವರ, ಪುರಸಭೆ ಸದಸ್ಯೆ ಮಮತಾ ಆರೆಗೊಪ್ಪ,  ಪುರಸಭೆ ಉಪಾಧ್ಯಕ್ಷೆ ಶಂಶಿಯಾ ಬಾಳೂರು,  ಕ್ಷೇತ್ರ ಸಮನ್ವಯಾಧಿಕಾರಿ ಎಂ.ಎಸ್.ಗುಂಡಪಲ್ಲಿ, ವಿವಿಧ ಶಿಕ್ಷಕ ಸಂಘಟನೆಗಳ ಅಧ್ಯಕ್ಷ ಪದಾಧಿಕಾರಿಗಳಾದ ಬಿ.ಎಸ್.ಕರಿಯಣ್ಣನವರ, ಸಿ.ಜಿ.ಪಾಟೀಲ, ವಿಜಯೇಂದ್ರ ಯತ್ನಳ್ಳಿ, ಎಸ್.ಎಸ್.ನಿಸ್ಸೀಮಗೌಡರ, ಎಸ್.ವಿ.ಬೂದಿಹಾಳ, ರಾಕೇಶ ಜಿಗಳಿ, ಸುರೇಶ ಹಿರೂರ, ಎ.ವಿ.ಹನುಮಾಪುರ, ಅನಿತಾ ಕಿತ್ತೂರ, ಸಂತೋಷ ದೊಡ್ಡಮನಿ, ಅನಿಲ ಗೋಣೆಣ್ಣನವರ, ಆರ್.ಬಿ.ಬಡಿಗೇರ ಸೇರಿದಂತೆ ಪದಾಧಿಕಾರಿಗಳು ವೇದಿಕೆಯಲ್ಲಿದ್ದರು.

ಕಲಾವಿದರಾದ  ಮಹಾಂತೇಶ ಮರಿಗೂಳಪ್ಪನವರ, ಜಗದೀಶ ಮಡಿವಾಳರ, ಬಾಲಚಂದ್ರ ಅಂಬಿಗೇರ ನಾಡಗೀತೆ, ರೈತ ಗೀತೆಗಳನ್ನು ಹಾಡಿದರು.