ಶಿಕ್ಷಣ, ಉತ್ತಮ ನಡವಳಿಕೆಯಿಂದ ಸಮಾಜದಲ್ಲಿ ಉನ್ನತ ಸ್ಥಾನ: ಶೆಟ್ಟಿ

ಧಾರವಾಡ 14: ಭವಿಷ್ಯ ಬದಲಾಯಿಸಲು ಯಾರಿಂದಲೂ ಸಾಧ್ಯವಿಲ್ಲ. ಆದರೆ, ನಮ್ಮ ಹವ್ಯಾಸಗಳನ್ನು ಬದಲಿಸಿಕೊಂಡರೆ ಬದುಕಿನಲ್ಲಿ ನಿರೀಕ್ಷಿತ ಗುರಿ ತಲುಪಬಹುದು ಎಂದು ಉದ್ಯಮಿ ರವಿ ಶೆಟ್ಟಿ ಅಭಿಪ್ರಾಯಪಟ್ಟರು.

ಅವರು ಶನಿವಾರ ನಗರದ ಧರ್ಮಸ್ಥಳ ಮಂಜುನಾಥೇಶ್ವರ ತಾಂತ್ರಿಕ ಮತ್ತು ಅಭಿಯಾಂತ್ರಿಕ ಮಹಾವಿದ್ಯಾಲಯದ 40 ನೇ ಸಂಸ್ಥಾಪನಾ ಆಚರಣೆ ಸಂದರ್ಭದಲ್ಲಿ ಏರ್ಪಡಿಸಿದ್ದ 'ಗ್ಲೋಬಲ್ ಅಲುಮ್ನಿ ಮೀಟ್ಗೆ ಚಾಲನೆ ನೀಡಿ ಮಾತನಾಡಿದರು.

ದೇಶದಲ್ಲಿ ಇಂದು ಅನೇಕರಿಗೆ ಮೂಲ ಸೌಕರ್ಯಗಳು ಸಿಗುತ್ತಿಲ್ಲ. ಈ ಬಗ್ಗೆ ಎಲ್ಲರೂ ಚಿಂತನೆ ನಡೆಸಬೇಕಿದೆ. ನಮಗೆ ಒದಗಿರುವ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಳ್ಳುವ ಜಾಣ್ಮೆ ಇರಬೇಕು. ಭೌತಿಕ ಕೆಲಸಗಳ ಜೊತೆಗೆ ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವ ಮಹಾನ್ ಕಾರ್ಯವೂ ಇಂಜನೀಯರಗಳ ಮೇಲಿದೆ ಎಂಬುದನ್ನು ನೆನಪಿನಲ್ಲಿಡಬೇಕು. ಕಲಿತ ಶಿಕ್ಷಣ ಮತ್ತು ಉತ್ತಮ ನಡವಳಿಕೆಗಳು ಮನುಷ್ಯನನ್ನು ಸಮಾಜದಲ್ಲಿ ಉನ್ನತ ಸ್ಥಾನಕ್ಕೇರಿಸುತ್ತವೆ. ಜವಾಬ್ದಾರಿ ಸಮಾಜದಲ್ಲಿ ಶಾಂತಿ ಮತ್ತು ಮಾನವೀಯ ಮೌಲ್ಯಗಳು ಮೇಳೈಸುವಲ್ಲಿ ಪ್ರತಿಯೊಬ್ಬರ ಕೊಡುಗೆ ಪ್ರಮುಖ ಪಾತ್ರವಹಿಸುತ್ತದೆ. ಸಮುದಾಯದ ಕಾಳಜಿ ಇದ್ದರೆ ಇನ್ನೂ ಹೆಚ್ಚು ಗೌರವ ಲಭಿಸುತ್ತದೆ.ಈ ನಿಟ್ಟಿನಲ್ಲಿ ಮಾನವೀಯ ಮೌಲ್ಯಗಳ ಪ್ರತಿರೂಪವಾಗಿರುವ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ ಸಮಾಜಮುಖಿ ಕಾರ್ಯಗಳು ಆದರ್ಶಪ್ರಾಯವಾಗಿವೆ ಎಂದು ಕಾಲೇಜಿನ ಹಳೆಯ ವಿದ್ಯಾಥರ್ಿಯೂ ಆದ ರವಿ ಶೆಟ್ಟಿ ಸ್ಮರಿಸಿದರು.

ಹಳೆಯ ವಿದ್ಯಾರ್ಥಿ ಗಳ ವಂತಿಗೆಯಿಂದ ನಿರ್ಮಿ ಸಲಾಗುವ ಒಳಾಂಗಣ ಕ್ರೀಡಾ ಸಂಕೀರ್ಣಕ್ಕೆ ಕೃಷ್ಣಮೋಹನ ಅವರು ವೈಯಕ್ತಿಕ 10 ಲಕ್ಷ ರೂಪಾಯಿ ಮತ್ತು ಹಳೆಯ ವಿದ್ಯಾರ್ಥಿ ಗಳ ಸಂಘದಿಂದ 10 ಲಕ್ಷ ರೂಪಾಯಿಗಳ ಚೆಕ್ನ್ನು ಪ್ರಾಚಾರ್ಯರಿಗೆ ಹಸ್ತಾಂತರಿಸಲಾಯಿತು.

ಪ್ರಾಚಾರ್ಯ ಡಾ.ಎಸ್.ಬಿ.ವಣಕುದರೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ವೀಣಾ ಚಕ್ರವರ್ತಿ  ವೇದಿಕೆಯಲ್ಲಿದ್ದರು. ಹಳೆಯ ವಿದ್ಯಾರ್ಥಿ ಗಳ ಸಂಘದ ಅಧ್ಯಕ್ಷ ಡಾ.ಎಸ್.ಜಿ.ಜೋಶಿ ಸ್ವಾಗತಿಸಿದರು. ಕಾರ್ಯದರ್ಶಿ  ಪ್ರೊ.ವಿ.ಕೆ.ಪರ್ವತಿ ನಿರೂಪಿಸಿದರು. ಡೀನ್ ಡಾ.ಕೆ.ಗೋಪಿನಾಥ ವಂದಿಸಿದರು. ಸಚಿನ ಜೋಶಿ ಪ್ರಾರ್ಥಿ ಸಿದರು. ಸಮಾರಂಭದಲ್ಲಿ ಕಾಲೇಜಿನ ನೂರಾರು ಹಳೆಯ ವಿದ್ಯಾರ್ಥಿ ಗಳು ಭಾಗವಹಿಸಿದ್ದರು.