ಮಳೆಗಾಗಿ ಕತ್ತೆಗಳ ವಿವಾಹ: ಗ್ರಾಮದ ಸಂಪ್ರದಾಯಕ್ಕೆ ಸಾಕ್ಷಿಯಾದ ಸಾವಿರಾರು ಜನ

ಮಳೆಗಾಗಿ ಕತ್ತೆಗಳ ವಿವಾಹ: ಗ್ರಾಮದ ಸಂಪ್ರದಾಯಕ್ಕೆ ಸಾಕ್ಷಿಯಾದ ಸಾವಿರಾರು ಜನ  Donkey wedding for rain: Thousands witness village tradition

ಲೋಕದರ್ಶನ ವರದಿ 

ಧಾರವಾಡ ಜು. 04: ಉತ್ತಮ ಮಳೆಯಾಗಲಿ, ರೈತರ ಬೆಳೆ ಸಮೃದ್ಧಿಯಾಗಲಿ ಎಂಬ ಸಂಕಲ್ಪದೊಂದಿಗೆ ಧಾರವಾಡ ತಾಲೂಕಿನ ಅಮ್ಮಿನಭಾವಿ ಗ್ರಾಮದ ಪಾದಗಟ್ಟಿ ತಾಣದಲ್ಲಿ ಶನಿವಾರ ಸಂಪ್ರದಾಯಬದ್ಧವಾಗಿ ಕತ್ತೆಗಳ ವಿವಾಹ ಮಹೋತ್ಸವವನ್ನು ಗ್ರಾಮಸ್ಥರು ನೆರವೇರಿಸಿದರು. ವೈದಿಕರಾದ ಸೋಮಲಿಂಗಶಾಸ್ತ್ರಿ ಗುಡ್ಡದಮಠ ಹಾಗೂ ಎಸ್‌.ಎಂ. ಪ್ರಶಾಂತ ರಾಜಗುರು ಅವರ ನೇತೃತ್ವದಲ್ಲಿ ವೈದಿಕ ಮಂತ್ರೋಚ್ಚಾರಣೆಯೊಂದಿಗೆ ಮೇಘರಾಜ ಮತ್ತು ವಸುಂಧರಾ ಹೆಸರಿನ ಕತ್ತೆಗಳ ವಿವಾಹ ನೆರವೇರಿತು. ಮಂಗಳಸೂತ್ರ ಧಾರಣೆ, ಕಂಕಣ ಕಟ್ಟುವುದು, ಕನ್ಯಾದಾನ, ಅಕ್ಷತೆ ಹಾಕುವುದು ಸೇರಿದಂತೆ ಹಿಂದೂ ವಿವಾಹದ ಎಲ್ಲ ಶಾಸ್ತ್ರೋಕ್ತ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಗ್ರಾಮಸ್ಥರು “ಹರ ಹರ ಮಹಾದೇವ” ಘೋಷಣೆಗಳೊಂದಿಗೆ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.  

ವಿಶೇಷವೆಂದರೆ, ಈ ವಿವಾಹದಲ್ಲಿ ವಧು-ವರರ ಸಂಬಂಧಿಕರು ಅಥವಾ ಪೋಷಕರು ಇರಲಿಲ್ಲ. ಗ್ರಾಮದವರೇ ಎಲ್ಲ ಜವಾಬ್ದಾರಿಗಳನ್ನು ಹೊತ್ತು ವಿವಾಹವನ್ನು ಯಶಸ್ವಿಯಾಗಿ ನಡೆಸಿದರು. ಮಳೆಗಾಗಿ ವಿಶೇಷ ಪೂಜೆ ಶ್ರೀ ಮಹಾಗಣಪತಿ ಪೂಜೆ, ಪಂಚಕಲಶ ಪೂಜೆ ಹಾಗೂ ಗಂಗಾಕಲಶ ಪೂಜೆಯ ಬಳಿಕ ರೈತರು ಉತ್ತಮ ಮಳೆಯಾಗಲೆಂದು ವಿಶೇಷ ಸಂಕಲ್ಪ ಪೂಜೆ ಸಲ್ಲಿಸಿದರು. ಇದಕ್ಕೂ ಮುನ್ನ ಎರಡೂ ಕತ್ತೆಗಳಿಗೆ ಅರಿಶಿನ ಲೇಪನ ಮಾಡಿ, ಮಂಗಳ ಸ್ನಾನ ಮಾಡಿಸಲಾಯಿತು. ಬಳಿಕ ಶಾಸ್ತ್ರೋಕ್ತವಾಗಿ ವಿವಾಹ ನೆರವೇರಿಸಲಾಯಿತು.  

ವಿವಾಹದ ನಂತರ ಮೇಘರಾಜ ಮತ್ತು ವಸುಂಧರಾ ಕತ್ತೆಗಳ ಮೆರವಣಿಗೆ ಗ್ರಾಮ ಪ್ರಮುಖ ಬೀದಿಗಳಲ್ಲಿ ವಿವಿಧ ಜಾನಪದ ವಾದ್ಯಗಳೊಂದಿಗೆ ನಡೆಯಿತು. ಬಳಿಕ ಗ್ರಾಮಸ್ಥರಿಗೆ ಶಿರಾ, ಬೂಂದಿ, ಬದನೆಕಾಯಿ ಪಲ್ಯ, ಅನ್ನ ಮತ್ತು ಸಾರು ಒಳಗೊಂಡ ಪ್ರಸಾದದ ಊಟ ವ್ಯವಸ್ಥೆ ಮಾಡಲಾಗಿತ್ತು. ವಿವಾಹಕ್ಕೂ ಮುನ್ನ ಶುಕ್ರವಾರ ರಾತ್ರಿ ನಿಶ್ಚಿತಾರ್ಥ ಕಾರ್ಯಕ್ರಮವೂ ನಡೆದಿದ್ದು, ಇದು ಕಾರ್ಯಕ್ರಮದ ಮತ್ತೊಂದು ವಿಶೇಷವಾಗಿತ್ತು.

ಮಳೆಯ ನೀರೀಕ್ಷೆಯಲ್ಲಿ ರೈತರು ಈ ವರ್ಷ ಮುಂಗಾರು ಮಳೆ ವಿಳಂಬವಾಗಿರುವ ಹಿನ್ನೆಲೆಯಲ್ಲಿ ರೈತರು ಬಿತ್ತನೆ ಕಾರ್ಯ ಮುಗಿಸಿದ್ದರೂ, ಅಗತ್ಯ ಪ್ರಮಾಣದ ಮಳೆ ಕೊರತೆಯಿಂದ ಬೆಳೆಗಳು ಸಂಕಷ್ಟಕ್ಕೆ ಸಿಲುಕಿವೆ. ಈ ಹಿನ್ನೆಲೆಯಲ್ಲಿ ಉತ್ತಮ ಮಳೆಯಾಗಲೆಂದು ಪಾರಂಪರಿಕ ನಂಬಿಕೆಯಂತೆ ಕತ್ತೆಗಳ ವಿವಾಹವನ್ನು ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡ ತವನಪ್ಪ ಅಷ್ಟಗಿ, ಪ್ರಶಾಂತ ಕೇಕರೆ, ಈಶ್ವರ ಶಿವಳ್ಳಿ, ಉದ್ಯಮಿ ಮಂಜುನಾಥ ಮಕ್ಕಳೆಗೇರಿ ಸೇರಿದಂತೆ ವಿವಿಧ ಸಮಾಜಗಳ ಮುಖಂಡರು, ರೈತರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.