ಯುವಕರಿಗೆ ಬಸವಾದಿ ಶರಣರ ಸಂದೇಶ ತಲುಪಿಸಿ

ಯುವಕರಿಗೆ ಬಸವಾದಿ ಶರಣರ ಸಂದೇಶ ತಲುಪಿಸಿ  Convey the message of Basavanna and the other Sharanas to the youth


ತಾಳಿಕೋಟಿ 19: ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವದಿಂದ ಯುವ ಸಮುದಾಯ ದಾರಿ ತಪ್ಪುತ್ತಿರುವ ಹಿನ್ನೆಲೆಯಲ್ಲಿ, ಅವರನ್ನು ಸನ್ಮಾರ್ಗದತ್ತ ಕೊಂಡೊಯ್ಯಲು ಬಸವಾದಿ ಶರಣರ ಉದಾತ್ತ ಮೌಲ್ಯಗಳನ್ನು ತಿಳಿಸಿಕೊಡುವ ಅಗತ್ಯವಿದೆ ಎಂದು ವಚನ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ಅಬ್ದುಲ್ ರೆಹಮಾನ್ ನಾಯ್ಕೋಡಿ ಹೇಳಿದರು.  

ಪಟ್ಟಣದ ಶ್ರೀ ಕಾಳಿಕಾದೇವಿ ದೇವಸ್ಥಾನದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ತಾಲೂಕು ಘಟಕ, ಯುವ ಘಟಕ ಹಾಗೂ ಕದಳಿ ವೇದಿಕೆ ವತಿಯಿಂದ ಶ್ರಾವಣ ಮಾಸದ ಅಂಗವಾಗಿ ಆಯೋಜಿಸಿದ್ದ ‘ವಚನ ಶ್ರಾವಣ ಹಾಗೂ ಶರಣ ಸಾಹಿತ್ಯ ್ಘ್ತ್ಟೃ್ಲಿಹಿೂ್ಛ್ತು ವೇದಿಕೆ ನೂತನ ಪದಾಧಿಕಾರಿಗಳ ಪದಗ್ರಹಣ’ ಕಾರ್ಯಕ್ರಮದಲ್ಲಿ ‘ಶರಣ ತತ್ವ ಪರಿಪಾಲನೆಯಲ್ಲಿ ಯುವಕರ ಪಾತ್ರ’ ಕುರಿತು ಅವರು ವಿಶೇಷ ಉಪನ್ಯಾಸ ನೀಡಿದರು. 

ಬಸವಣ್ಣನವರ ವಚನಗಳಲ್ಲಿ ವಿಶ್ವಮಾನವ ಕಲ್ಪನೆಯಿದ್ದು, ಅವರನ್ನು ಯಾವುದೇ ಸೀಮಿತ ಚೌಕಟ್ಟಿಗೆ ಒಳಪಡಿಸುವುದು ಸರಿಯಲ್ಲ. ಬಸವಣ್ಣನವರ ಮೌಲ್ಯಗಳನ್ನು ಸ್ವಾರ್ಥ ಅಥವಾ ಲಾಭಕ್ಕಾಗಿ ಬಳಸಿಕೊಳ್ಳಬಾರದು. ಮಕ್ಕಳಿಗೆ ಉತ್ತಮ ತರಬೇತಿ ಹಾಗೂ ಸಂಸ್ಕಾರ ನೀಡುವುದು ಪಾಲಕರ ಕರ್ತವ್ಯ. ಈ ನಿಟ್ಟಿನಲ್ಲಿ ತಾಯಂದಿರ ಪಾತ್ರವೂ ಮಹತ್ವದ್ದಾಗಿದೆ. ಮೊಬೈಲ್ ಗೀಳಿನಿಂದ ಮಕ್ಕಳನ್ನು ರಕ್ಷಿಸುವತ್ತ ಪಾಲಕರು ಹೆಚ್ಚಿನ ಗಮನಹರಿಸಬೇಕು ಎಂದರು.  

ಪರಿಷತ್ತಿನ ಯುವ ಘಟಕದ ಪದಾಧಿಕಾರಿಗಳು ಶಾಲಾ-ಕಾಲೇಜುಗಳಲ್ಲಿ ಹೆಚ್ಚಿನ ಚಟುವಟಿಕೆಗಳನ್ನು ನಡೆಸುವ ಅಗತ್ಯವಿದೆ ಎಂದು ಅವರು ಹೇಳಿದರು. ಶರಣ ಸಾಹಿತ್ಯ ಪರಿಷತ್ ವಿಜಯಪುರ ಜಿಲ್ಲಾಧ್ಯಕ್ಷ ಜಂಬುನಾಥ ಕಂಚಾಣಿ ಮಾತನಾಡಿ, ಪದಗ್ರಹಣದ ಮೂಲಕ ಅಧಿಕಾರ ಸ್ವೀಕರಿಸಿದ ನೂತನ ಪದಾಧಿಕಾರಿಗಳು ಹೆಚ್ಚಿನ ಆಸಕ್ತಿಯಿಂದ ಪರಿಷತ್ತಿನ ಕಾರ್ಯಗಳನ್ನು ಕೈಗೊಳ್ಳಬೇಕು. ದತ್ತಿಗಳು ಪರಿಷತ್ತಿನ ಆತ್ಮವಾಗಿದ್ದು, ಅವುಗಳಿಂದಲೇ ವಿವಿಧ ಚಟುವಟಿಕೆಗಳು ನಡೆಯುತ್ತಿವೆ. ಆದ್ದರಿಂದ ದತ್ತಿಗಳ ಸಂಖ್ಯೆಯನ್ನು ಹೆಚ್ಚಿಸುವ ಜೊತೆಗೆ ಬಸವಾದಿ ಶರಣರ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ನಡೆ-ನುಡಿಯಲ್ಲಿ ಸಾಮ್ಯತೆ ಇರಲಿ ಎಂದು ಆಶಿಸಿದರು.  

ಇದೇ ಸಂದರ್ಭದಲ್ಲಿ ಶರಣ ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷ ಡಾ. ವಿಜಯಕುಮಾರ ಕಾರ್ಚಿ, ಯುವ ಘಟಕದ ಅಧ್ಯಕ್ಷ ಕಾಶೀನಾಥ ಸಜ್ಜನ ಹಾಗೂ ಕದಳಿ ವೇದಿಕೆ ಅಧ್ಯಕ್ಷೆ ಉಮಾದೇವಿ ಗಂಗಾಧರ ಕಸ್ತೂರಿ ಅವರು ಪದಗ್ರಹಣ ಮಾಡಿದರು.  

ಕಾರ್ಯಕ್ರಮದ ಅಧ್ಯಕ್ಷತೆಯನ್ನು ನೂತನ ಅಧ್ಯಕ್ಷ ಡಾ. ವಿಜಯಕುಮಾರ ಕಾರ್ಚಿ ವಹಿಸಿದ್ದರು. ಕದಳಿ ವೇದಿಕೆಯ ನಿಕಟಪೂರ್ವ ಅಧ್ಯಕ್ಷೆ ಉಮಾ ಜವಾರಿ, ಮಹಾದೇವಪ್ಪ ಕುಂಬಾರ, ಎಂ.ಎಸ್‌. ನಾಗರಾಜ, ಸಮಾಜ ಸೇವಕ ಇಬ್ರಾಹಿಂ ಮನ್ಸೂರ್, ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಸಾಹೇಬಗೌಡ ಬಿರಾದಾರ ಸೇರಿದಂತೆ ಹಲವು ಗಣ್ಯರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು. ಕಾಶೀನಾಥ ಕಾರಾಗನೂರು ಪ್ರಾರ್ಥಿಸಿದರು. ಮಹಾಂತೇಶ ಮುರಾಳ ಸ್ವಾಗತಿಸಿದರು. ಸಾಹೇಬಗೌಡ ಬಿರಾದಾರ ಹಾಗೂ ಶಿಕ್ಷಕ ಸಿದ್ದು ಕರಡಿ ನಿರೂಪಿಸಿದರು. ಮಲ್ಲನಗೌಡ ಪಾಟೀಲ ವಂದಿಸಿದರು.