ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ ಜಾಗೃತಿಗಾಗಿ ಬೈಕ್ ರ್ಯಾಲಿ

ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ ಜಾಗೃತಿಗಾಗಿ ಬೈಕ್ ರ್ಯಾಲಿ Bike rally to create awareness about the special comprehensive revision of the electoral roll

ಮುಂಡರಗಿ 04 : ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌.ಐ.ಆರ್‌.-2026) ಕುರಿತು ಸಾರ್ವಜನಿಕರಲ್ಲಿ ತಿಳುವಳಿಕೆ ಹಾಗೂ ಜಾಗೃತಿ ನಿರ್ಮಾಣಕ್ಕಾಗಿ ಮುಂಡರಗಿಯ ತಾಲೂಕು ಪಂಚಾಯತ್, ತಾಲೂಕು ಆಡಳಿತ, ಶಿಕ್ಷಣ ಇಲಾಖೆ, ವಿವಿಧ ಇಲಾಖೆಗಳ ಹಾಗೂ ಹೊರಗುತ್ತಿಗೆ ನೌಕರರ ಸಂಘದ ಆಶ್ರಯದಲ್ಲಿ ಶುಕ್ರವಾರ ಪಟ್ಟಣದಲ್ಲಿ ಬೈಕ್ ರ್ಯಾಲಿ ನಡೆಸಲಾಯಿತು. ಪಟ್ಟಣದ ತಹಶೀಲ್ದಾರ ಕಚೇರಿಯಿಂದ ಪ್ರಾರಂಭಗೊಂಡ ಬೈಕ್ ರ್ಯಾಲಿ ಮಾರ್ಕೆಟ್, ಅನ್ನದಾನೀಶ್ವರ ಮಠಗಳ ಮೂಲಕ ಸಾಗಿ ಬಸ್ ನಿಲ್ದಾಣದಲ್ಲಿ ವಿಶೇಷ ಸಮಗ್ರ ಪರಿಷ್ಕರಣೆಗೆ ಸಂಬಂಧಿಸಿದ ಜಾಗೃತಿ ಘೋಷಣೆಗಳನ್ನು ಕೂಗುವ ಮೂಲಕ ಸಾರ್ವಜನಿಕರು ಹಾಗೂ ಪ್ರಯಾಣಿಕರಲ್ಲಿ ಅರಿವು ಮೂಡಿಸಲಾಯಿತು.

ಈ ವೇಳೆ ಮಾತನಾಡಿದ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ವಿಜಯಕುಮಾರ ಬೆಣ್ಣೆ ಜೂನ್ 30ರಿಂದ ಆರಂಭವಾಗಿರುವ  ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಜುಲೈ 29ರವರೆಗೂ ನಡೆಯಲಿದೆ.ಬೂತ್ ಮಟ್ಟದ ಅಧಿಕಾರಿಗಳು (ಬಿ.ಎಲ್‌.ಒ.) ಮನೆ-ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸುವ ಕಾರ್ಯ ಪ್ರಗತಿಯಲ್ಲಿದೆ. ಸಾರ್ವಜನಿಕರು ಬಿ.ಎಲ್‌.ಒ.ಗಳು ಕೇಳುವ ಪ್ರಶ್ನೆಗಳಿಗೆ ಅಗತ್ಯ ಮಾಹಿತಿ ನೀಡಿ, ನಿಗದಿತ ನಮೂನೆಗಳನ್ನು ಭರ್ತಿ ಮಾಡಿ ಸ್ವೀಕೃತಿ ಪಡೆಯುವ ಮೂಲಕ ಸಹಕರಿಸಬೇಕು ಎಂದು ಮನವಿ ಮಾಡಿದರು. ಸರಕಾರಿ ನೌಕರರ ಸಂಘದ ತಾಲೂಕು ಘಟಕದ ಅಧ್ಯಕ್ಷ ನಾಗರಾಜ ಹಳ್ಳಿಕೇರಿ ಮಾತನಾಡಿ, ಮತದಾರರ ಪಟ್ಟಿಯಲ್ಲಿ ಅರ್ಹರನ್ನು ಸೇರಿಸುವ ಉದ್ದೇಶದಿಂದಾಗಿ ಮಾಧ್ಯಮಗಳಲ್ಲಿನ ಪ್ರಚಾರದ ಮೂಲಕ ವ್ಯಾಪಕ ಅರಿವು ಮೂಡಿಸಲಾಗುತ್ತಿದೆ ಎಂದರು.

ಶಿರಸ್ತೆದಾರ ಚಿದಾನಂದ ಸ್ವಾಗತಿಸಿದರು. ತಾಲೂಕಾ ನೌಕರರ ಸಂಘದ ಹಿರಿಯ ಉಪಾಧ್ಯಕ್ಷ ಜಗದೀಶ ಐರಣಿ, ಪ್ರೌಢಶಾಲಾ ಶಿಕ್ಷಕರ ಸಂಘದ ತಾಲೂಕು ಘಟಕದ ಎಸ್‌. ಸಿ. ಹರ್ತಿ,  ಪ್ರಾಥಮಿಕ ಶಾಲಾ ಸಂಘದ ಜಿಲ್ಲಾ ಕಾರ್ಯದರ್ಶಿ ವಿಶ್ವನಾಥ ಉಳ್ಳಾಗಡ್ಡಿ, ತಾಲೂಕಾ ಕಾರ್ಯದರ್ಶಿ ಎಸ್ ಡಿ ಬಸೇಗೌಡ್ರ,  ರ್ಯಾಲಿಯಲ್ಲಿ ಆರ್ ಡಿಪಿಆರ್ ಇಲಾಖೆ ನೌಕರರು, ಕಂದಾಯ ಇಲಾಖೆ ನೌಕರರು, ಶಿಕ್ಷಣ ಇಲಾಖೆ ನೌಕರರು, ತೋಟಗಾರಿಕೆ ಇಲಾಖೆ ನೌಕರರು, ಹೊರಗುತ್ತಿಗೆ ನೌಕರರ ಸಂಘದ ಸದಸ್ಯರು ಇದ್ದರು.