ಭಗತ್ ಸಿಂಗ್ ಅವರ ವಿಚಾರಗಳು ಇಂದಿಗೂ ಪ್ರಸ್ತುತ: ಪ್ರೊ. ಪ್ರದೀಪ್ ನಾಯಕ

ಭಗತ್ ಸಿಂಗ್ ಅವರ ವಿಚಾರಗಳು ಇಂದಿಗೂ ಪ್ರಸ್ತುತ: ಪ್ರೊ. ಪ್ರದೀಪ್ ನಾಯಕ  Bhagat Singh's ideas remain relevant even today: Prof. Pradeep Nayak


ಮುಗಳಖೋಡ, 28: ಅಸಮಾನತೆ ಹಾಗೂ ಶೋಷಣೆಯ ವಿರುದ್ಧದ ಹೋರಾಟ ಮತ್ತು ನ್ಯಾಯಯುತ ಸಮಾಜ ನಿರ್ಮಾಣದ ಕುರಿತ ಭಗತ್ ಸಿಂಗ್ ಅವರ ಬರಹಗಳು ಹಾಗೂ ವಿಚಾರಗಳು ಇಂದಿಗೂ ಗಮನಾರ್ಹವಾಗಿವೆ ಎಂದು ವಾಣಿಜ್ಯ ವಿಭಾಗದ ಪ್ರಾಧ್ಯಾಪಕ ಪ್ರೊ. ಪ್ರದೀಪ್ ನಾಯಕ ಹೇಳಿದರು.  

ಶ್ರೀ ಚ.ವಿ.ವ. ಸಂಘದ ಡಾ. ಸಿ.ಬಿ. ಕುಲಿಗೋಡ ಪದವಿ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಭಗತ್ ಸಿಂಗ್ ಅವರ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಭಗತ್ ಸಿಂಗ್ ಅವರ ಜೀವನ ದೇಶದ ಸ್ವಾತಂತ್ರ್ಯಕ್ಕಾಗಿ ಮುಡಿಪಾಗಿತ್ತು. ಅವರು ದೇಶಪ್ರೇಮ, ಧೈರ್ಯ ಮತ್ತು ತ್ಯಾಗದ ಪ್ರತೀಕವಾಗಿದ್ದಾರೆ ಎಂದರು.  

“ಇಂಕ್ವಿಲಾಬ್ ಜಿಂದಾಬಾದ್‌” ಎಂಬ ಘೋಷಣೆಯ ಮೂಲಕ ಭಾರತೀಯ ಸ್ವಾತಂತ್ರ್ಯ ಚಳವಳಿಯಲ್ಲಿ ಅಳಿಸಲಾಗದ ಛಾಪು ಮೂಡಿಸಿದ ಭಗತ್ ಸಿಂಗ್, ಬ್ರಿಟಿಷರ ವಸಾಹತುಶಾಹಿ ಆಡಳಿತದ ವಿರುದ್ಧ ನಡೆಸಿದ ಹೋರಾಟವನ್ನು ಸ್ಮರಿಸಿದರು.  

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಪಿ.ಸಿ. ಕಂಬಾರ ಮಾತನಾಡಿ, ಬ್ರಿಟಿಷರ ಆಡಳಿತದ ವಿರುದ್ಧ ಭಗತ್ ಸಿಂಗ್ ನಡೆಸಿದ ಹೋರಾಟ ಮತ್ತು ಅವರ ತ್ಯಾಗವನ್ನು ಸ್ಮರಿಸಿದರು. ಭಗತ್ ಸಿಂಗ್ ಅವರ ಜೀವನ ಕೇವಲ ಇತಿಹಾಸವಲ್ಲ, ಅದು ಒಂದು ಅಧ್ಯಾಯವಾಗಿದೆ. ಅವರ ವಿಚಾರಧಾರೆ, ಆದರ್ಶ, ತ್ಯಾಗ ಹಾಗೂ ಸಾಮಾಜಿಕ ನ್ಯಾಯದ ಚಿಂತನೆಗಳನ್ನು ಯುವಜನತೆ ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದರು.  

ಕಾರ್ಯಕ್ರಮದಲ್ಲಿ ಹಲವು ವಿದ್ಯಾರ್ಥಿಗಳು ಭಗತ್ ಸಿಂಗ್ ಅವರ ಜೀವನ ಹಾಗೂ ಹೋರಾಟದ ಕುರಿತು ಮಾತನಾಡಿದರು. ಸಾಂಸ್ಕೃತಿಕ ವಿಭಾಗದ ಮುಖ್ಯಸ್ಥ ಸಂಗಮೇಶ ಹಿರೇಮಠ ಸ್ವಾಗತಿಸಿದರು. ಕುಮಾರಿ ಪೂಜಾ ಮಾಳಿ ನಿರೂಪಿಸಿ ವಂದಿಸಿದರು.  

ಈ ಸಂದರ್ಭದಲ್ಲಿ ಪ್ರಾಚಾರ್ಯ ಪಿ.ಸಿ. ಕಂಬಾರ, ಡಾ. ಪಿ.ಬಿ. ಕೊರವಿ, ಬಿ.ಎಸ್‌. ಸವಸುದ್ದಿ, ಎಚ್‌.ಎಂ. ಕಂಕಣವಾಡಿ, ಸಾಂಸ್ಕೃತಿಕ ವಿಭಾಗದ ಮುಖ್ಯಸ್ಥ ಸಂಗಮೇಶ ಹಿರೇಮಠ, ಪರೀಕ್ಷಾ ವಿಭಾಗದ ಮುಖ್ಯಸ್ಥ ಪ್ರದೀಪ್ ನಾಯಕ, ಕುಮಾರಿ ರತ್ನಾ ಖೇತಗೌಡರ, ಗ್ರಂಥಪಾಲಕಿ ಶ್ರದ್ಧಾ ಹಿರೇಮಠ, ಕಚೇರಿ ಅಧೀಕ್ಷಕ ಸಂಗಣ್ಣ ತೇಲಿ, ಹುಸೇನ್ ಯಲಿಗಾರ ಸೇರಿದಂತೆ ಕಾಲೇಜಿನ ಸಿಬ್ಬಂದಿ ಉಪಸ್ಥಿತರಿದ್ದರು.