ಸರ್ಕಾರಿ ಗೌರವಗಳೊಂದಿಗೆ ಬಿಎಸ್‌ಎಫ್ ಯೋಧನ ಅಂತಿಮ ಸಂಸ್ಕಾರ
ತಾಳಿಕೋಟಿ, 04: ತಾಲೂಕಿನ ಬಳಗಾನೂರ ಗ್ರಾಮದ ನಿವಾಸಿಯಾದ ಸಿದ್ದಣ್ಣ ಮಾದರ ಇವರು ಏಪ್ರಿಲ್ ಎರಡರಂದು ಆಸಾಮ್ ರಾಜ್ಯದ ಅಗರ್ತಲಾದಲ್ಲಿ ಸೇವೆ ಎಲ್ಲಿ ನಿರತರಾಗಿರುವಾಗಲೇ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಅವರ ಅಂತ್ಯಕ್ರಿಯೆಯು ಸಕಲ ಸರ್ಕಾರಿ ಗೌರವಗಳೊಂದಿಗೆ ಶನಿವಾರ ಅವರ ಸ್ವಗ್ರಾಮದಲ್ಲಿ ನಡೆಯಿತು. ನಿನ್ನೆ ಮಧ್ಯಾಹ್ನ 4:00 ಗಂಟೆಗೆ ಅವರ ಪಾರ್ಥಿವ ಶರೀರವು ಗ್ರಾಮಕ್ಕೆ ಆಗಮಿಸಿದಾಗ ಯೋಧನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತು, ಪಾರ್ಥಿವ ಶರೀರವನ್ನು ಸಾರ್ವಜನಿಕರ ದರ್ಶನಕ್ಕಾಗಿ ಕೆಲ ಹೊತ್ತು ಗ್ರಾಮದ ಶ್ರೀ ಹನುಮಾನ ದೇವಸ್ಥಾನದ ಹತ್ತಿರ ಇಡಲಾಯಿತು.
ಈ ಸಮಯದಲ್ಲಿ ಮುದ್ದೇಬಿಹಾಳ ಮತಕ್ಷೇತ್ರದ ಶಾಸಕರಾದ ಅಪ್ಪಾಜಿ ನಾಡಗೌಡ,ಮಾಜಿ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ, ತಹಸಿಲ್ದಾರ್ ಡಾ.ವಿನಯಾ ಹೂಗಾರ, ಸಿಪಿಐ ಮೊಹಮ್ಮದ್ ಫಸಿಯುದ್ದೀನ್, ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಹಲವಾರು ಗಣ್ಯರು ಪಾರ್ಥಿವ ಶರೀರದ ದರ್ಶನ ಪಡೆದುಕೊಂಡು ಅಂತಿಮ ನಮನ ಸಲ್ಲಿಸಿದರು. ಸಂಜೆ ಐದು ಗಂಟೆಗೆ ಗ್ರಾಮದಲ್ಲಿ ಪಾರ್ಥಿವ ಶರೀರದ ಮೆರವಣಿಗೆ ನಡೆಸಿ ಸರ್ಕಾರಿ ಗೌರವಗಳೊಂದಿಗೆ ಅಂತಿಮ ಸಂಸ್ಕಾರ ನಡೆಸಲಾಯಿತು.