ಬೂದಿಹಾಳ ಸರಕಾರಿ ಪ್ರೌಢಶಾಲೆಯಲ್ಲಿ ಪೋಕ್ಸೋ, ಬಾಲ್ಯವಿವಾಹ, ಬಾಲಕಾರ್ಮಿಕ ನಿಷೇದ ಕಾಯಿದೆಗಳ ಬಗ್ಗೆ ಜಾಗೃತಿ

ಬೂದಿಹಾಳ ಸರಕಾರಿ ಪ್ರೌಢಶಾಲೆಯಲ್ಲಿ ಪೋಕ್ಸೋ, ಬಾಲ್ಯವಿವಾಹ, ಬಾಲಕಾರ್ಮಿಕ ನಿಷೇದ ಕಾಯಿದೆಗಳ ಬಗ್ಗೆ ಜಾಗೃತಿ Awareness about POCSO, Child Marriage, and Child Labor Prohibition Acts at Budihala Government High

ಬೈಲಹೊಂಗಲ 07 : ತಾಲೂಕಿನ ಬೂದಿಹಾಳ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ವಿಶೇಷ ಕಾನೂನು ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ತಾಲೂಕು ಕಾನೂನು ಸೇವಾ ಸಮಿತಿಯ ಮಧ್ಯಸ್ಥಿಕೆದಾರರು ಹಾಗೂ ಪ್ಯಾನಲ್ ವಕೀಲರಾದ ಬಸವರಾಜ ದೊತರದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಮಕ್ಕಳಿಗೆ ಕಾನೂನುಗಳ ಬಗ್ಗೆ ತಿಳಿವಳಿಕೆ ಇದ್ದರೆ ಬದುಕಿನಲ್ಲಿ ತಪ್ಪುಗಳನ್ನು ಮಾಡಲಾರರು ಎಂದು ಹೇಳಿದರು. ಪೋಕ್ಸೋ ಕಾಯಿದೆ, ಬಾಲ್ಯವಿವಾಹ ನಿಷೇಧ ಕಾಯಿದೆ, ಬಾಲಕಾರ್ಮಿಕ ನಿಷೇಧ ಕಾಯಿದೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ಸಮಗ್ರ ಮಾಹಿತಿ ನೀಡಿದರು. ಉಚಿತ ಕಾನೂನು ಸೇವೆ ಲಭ್ಯವಿದ್ದು ಅಗತ್ಯವಿದ್ದಾಗ ಸದುಪಯೋಗ ಪಡೆದುಕೊಳ್ಳಬಹುದಾಗಿದೆ ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಬೈಲಹೊಂಗಲ ತಾಲೂಕು ಸಿಡಿಪಿಒ ಅರುಣಕುಮಾರ ಮಾತನಾಡಿ ಬಾಲ್ಯವಿವಾಹ ಮಕ್ಕಳ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವುದಲ್ಲದೇ  ಸಾಮಾಜಿಕ ಸ್ವಾಸ್ಥ್ಯ ಹಾಳು ಮಾಡುತ್ತದೆ ಎಂದರು. ಗ್ರಾಮಗಳಲ್ಲಿನ ಹಿರಿಯರು, ಪ್ರಮುಖರು ಬಾಲ್ಯವಿವಾಹದ ದುಷ್ಪರಿಣಾಮಗಳ ಬಗ್ಗೆ ಎಲ್ಲರಿಗೂ ಜಾಗೃತಿ ಮೂಡಿಸುವ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದು ಅವರು ಅಭಿಪ್ರಾಯಪಟ್ಟರು.

ಮುಖ್ಯ ಅತಿಥಿಗಳಾದ ದೊಡವಾಡ ಪೊಲೀಸ್ ಠಾಣೆಯ ಪಿ.ಎಸ್‌.ಐ ಎಚ್‌.ಕೆ.ಪಾಟೀಲ ಮಾತನಾಡಿ ಮಕ್ಕಳು ಕಲಿಯುವ ವಯಸ್ಸಿನಲ್ಲಿ ಕಾಲಹರಣ ಮಾಡದೇ ಉತ್ತಮ  ಶಿಕ್ಷಣ ಪಡೆದರೆ ಗುರಿ ಸಾಧನೆ ಸಾಧ್ಯ ಎಂದರು.  ಸಮಸ್ಯೆಗಳನ್ನು ಧೈರ್ಯದಿಂದ ಎದುರಿಸುವ ಮನೋಸ್ಥೈರ್ಯವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದು ಹೇಳಿದರು. ಪೊಲೀಸ್ ಇಲಾಖೆ ಜನಸ್ನೇಹಿಯಾಗಿದ್ದು ಸಾರ್ವಜನಿಕರ ಯಾವುದೇ ತೊಂದರೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಲು ಸದಾ ಸಿದ್ದವಿದೆ ಎಂದರು. ಬಾಲ್ಯ ವಿವಾಹ ಮಾಡಿಕೊಂಡಲ್ಲಿ ಅಥವಾ ಯಾವುದೇ ರೀತಿಯಲ್ಲಿ ಭಾಗಿಯಾದಲ್ಲಿ, ಸಹಕರಿಸಿದಲ್ಲಿ ಅಂತವರಿಗೆ ಕಾನೂನು ಪ್ರಕಾರ ಶಿಕ್ಷೆ ಇದೆ ಎಂದು ಅವರು ಎಚ್ಚರಿಕೆ ನೀಡಿದರು.

ಇನ್ನೋರ್ವ ಮುಖ್ಯ ಅತಿಥಿಗಳಾದ ಬೆಳಗಾವಿಯ ಹೆಸ್ಕಾಂ ಇಂಟಲಿಜೆನ್ಸ್‌ ವಿಭಾಗದ ಪಿ.ಎಸ್‌.ಐ ವೀರಣ್ಣ ಗೂಳಪ್ಪನವರ ಮಾತನಾಡಿ ಮಕ್ಕಳ ಬಾಲ್ಯ ಬದುಕಿನ ಮಹತ್ತರ ಘಟ್ಟವಾಗಿದ್ದು ಶಾಲಾ ಕಾಲೇಜುಗಳಲ್ಲಿ ಕಾನೂನಿನ ಬಗ್ಗೆ ತಿಳಿವಳಿಕೆ ನೀಡಿದರೆ ಜೀವನದಲ್ಲಿ ಯುವಜನತೆ ದಾರಿ ತಪ್ಪುವುದಿಲ್ಲ ಎಂದರು. ಮಕ್ಕಳು ಗುಣಮಟ್ಟದ ಶಿಕ್ಷಣ ಪಡೆದು ಉನ್ನತ ಹುದ್ದೆಗಳನ್ನು ಅಲಂಕರಿಸುವ ಕನಸು ಕಾಣಬೇಕು. ಶಾಲೆ ಬಿಟ್ಟು ಬಾಲಕಾರ್ಮಿಕರಾಗಿ ಬೇರೆ ಬೇರೆ ಅಪಾಯಕಾರಿ ಕೆಲಸಗಳಲ್ಲಿ ತೊಡಗಿ ಅನಾಹುತ ಮಾಡಿಕೊಳ್ಳದಂತೆ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಮಕ್ಕಳಿಗೆ ಗುಡ್ ಟಚ್ ಮತ್ತು ಬ್ಯಾಡ್ ಟಚ್ ಗಳ ಬಗ್ಗೆ ಶಿಕ್ಷಕರು ಮತ್ತು ಪಾಲಕರು ತಿಳಿಹೇಳಲು ಸಲಹೆ ನೀಡಿದರು.

ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದ ಮುಖ್ಯ ಶಿಕ್ಷಕರಾದ ಎನ್‌.ಆರ್‌.ಠಕ್ಕಾಯಿ ಮಾತನಾಡಿ ಮಕ್ಕಳಿಗೆ ಅಕ್ಷರ ಜ್ಞಾನದ ಜೊತೆಗೆ ಕಾನೂನು ಸಾಕ್ಷರತೆಯೂ ಮುಖ್ಯವಾಗಿದೆ ಎಂದರು. ಮಕ್ಕಳ ರಕ್ಷಣೆ ಮತ್ತು ಸುರಕ್ಷತೆಗಾಗಿ 24ಥ7 ಮಕ್ಕಳ ಸಹಾಯವಾಣಿಯ ಸೌಲಭ್ಯವೂ ಇದೆ ಎಂದು ಅವರು ಹೇಳಿದರು. ಕಾರ್ಯಕ್ರಮದಲ್ಲಿ ಎಸ್‌.ಡಿ.ಎಂ.ಸಿ ಅಧ್ಯಕ್ಷ ವಿನಾಯಕ ಬಡಿಗೇರ, ಉಪಾಧ್ಯಕ್ಷ ರಮೇಶ ಸೂರ್ಯವಂಶಿ, ಸದಸ್ಯರಾದ ರಾಮು ಮೆಕ್ಕೇದ, ದುಂಡಪ್ಪ ಮಡಿವಾಳರ, ರವೀಂದ್ರ ಮನಗುತ್ತಿ, ಮಂಜುಳಾ ಕುಲಕರ್ಣಿ, ಗ್ರಾಮದ ಹಿರಿಯರಾದ ಚನಬಸಯ್ಯ ಮಠದ, ಜನಕರಾಜ ಪಾಟೀಲ, ಬಾಳಪ್ಪ ನಾಗಣ್ಣವರ, ಸಂಭಾಜಿ ಸೂರ್ಯವಂಶಿ,

ಶ್ರೀಧರ ನಿಂಬಾಳಕರ, ಮಲ್ಲಪ್ಪ ಹೊಂಗಲ, ಶಿಕ್ಷಕರಾದ ಜಗದೀಶ ನರಿ, ಪ್ರವೀಣ ಗುರುನಗೌಡರ, ಹೇಮಲತಾ ಪುರಾಣಿಕ, ಶಿವಾನಂದ ಬಳಿಗಾರ, ಮಂಜುಳಾ ಕಾಳಿ, ಸಂತೋಷ ಸಾಳುಂಕೆ, ವೀರೇಂದ್ರ ಪಾಟೀಲ ಹಾಗೂ ಪಾಲಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಮೂಗಪ್ಪ ನಾಗಣ್ಣವರ ಪ್ರಾರ್ಥಿಸಿದರು. ಪಲ್ಲವಿ ಸೂರ್ಯವಂಶಿ ಸ್ವಾಗತಿಸಿದರು. ವಿದ್ಯಾ ಗರಗದ ನಿರೂಪಿಸಿದರು. ಚನಬಸಮ್ಮ ಸೊಗಲದ ವಂದಿಸಿದರು.