ಸಾಧಕ ರೈತರೊಂದಿಗೆ ಕೃಷಿ ಸಂವಾದ ಕಾರ್ಯಕ್ರಮ

  ಸಾಧಕ ರೈತರೊಂದಿಗೆ ಕೃಷಿ ಸಂವಾದ ಕಾರ್ಯಕ್ರಮ Agricultural Interaction Programme with Successful Farmers

ಲೋಕದರ್ಶನ ವರದಿ 

ಧಾರವಾಡ 11 : ಧಾರವಾಡದ ಗಾಂಧಿನಗರದ ರುಡ್‌ಸೆಟ್ ಸಂಸ್ಥೆಯಲ್ಲಿ ಯುವ ಕೃಷಿಕರಿಗೆ ಹಮ್ಮಿಕೊಂಡ ಕೃಷಿ ಉದ್ಯಮ ತರಬೇತಿಯ ಶಿಬಿರಾರ್ಥಿಗಳಿಗೆ ವಿವಿಧ ಜಿಲ್ಲೆಗಳಲ್ಲಿ ಕೃಷಿಯಲ್ಲಿ ಸಾಧನೆ ಮಾಡಿದ ರೈತರೊಂದಿಗೆ ಸಂವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮವನ್ನು ಸ್ನೇಹ, ಪ್ರೀತಿ ನಿಮ್ಮೊಂದಿಗೆ ಹಾಗೂ ರುಡ್‌ಸೆಟ್ ಸಂಸ್ಥೆ, ಧಾರವಾಡದ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮವನ್ನು ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲ್ಲೂಕಿನ ಎರೆಹುಳ ಗೊಬ್ಬರ ತಯಾರಿಕೆಯಲ್ಲಿ ಸಾಧನೆ ಮಾಡಿದ ಗಂಗಮ್ಮ ಮೋದಿ ಅವರು ಸಸಿಗೆ ನೀರೆರೆಯುವುದರ ಮೂಲಕ ಉದ್ಘಾಟನೆ ಮಾಡಿದರು.

ಕಾರ್ಯಕ್ರಮ ಉದ್ಘಾಟನೆ ಮಾಡಿದ ಅವರು ಕೃಷಿಯಲ್ಲಿ ಸಾವಯವದ ಅಂಶ ಕಡಿಮೆಯಾಗಿದ್ದು ಜನರಿಗೆ ಗುಣಮಟ್ಟದ ಆಹಾರ ಸಿಗಬೇಕಾದರೆ ತಮ್ಮ ತಮ್ಮ ಕೃಷಿಗೆ ಎರೆಹುಳ ಗೊಬ್ಬರ ಬಳಸಿ ಮಣ್ಣಿನ ಸಂರಕ್ಷಣೆ ಮಾಡುವುದಲ್ಲದೆ ಆರೋಗ್ಯಕರ ಜೀವನಕ್ಕೆ ಎರೆಹುಳ ಗೊಬ್ಬರ ಬಳಸಿ ಎಂದು ಹೇಳಿ ತಾವು ಈ ಕ್ಷೇತ್ರದಲ್ಲಿ ಯಾವ ರೀತಿ ಯಶಸ್ಸು ಕಂಡರು ಎಂಬುದನ್ನು ಶಿಬಿರಾರ್ಥಿಗಳಿಗೆ ತಿಳಿಹೇಳಿದರು. 

ಕಾರ್ಯಕ್ರಮದಲ್ಲಿ ಆರ್ ಬಿ ಹಿರೇಮಠ, ನಿವೃತ್ತ ಸಹಾಯಕ ನಿರ್ದೇಶಕರು ಮಾತನಾಡಿ ಈ ರೈತರ ಸಂವಾದ ಕಾರ್ಯಕ್ರಮ ಕೃಷಿ ಉದ್ಯಮ ಮಾಡುವ ಶಿಬಿರಾರ್ಥಿಗಳಿಗೆ ಅತೀ ಉಪಯುಕ್ತವಾಗಿದ್ದು ಅದರ ಲಾಭವನ್ನು ಬಳಸಿಕೊಳ್ಳಿ ಎಂದು ಶಿಬಿರಾರ್ಥಿಗಳಿಗೆ ಕಿವಿಮಾತು ಹೇಳಿದರು.  ಕಾರ್ಯಕ್ರಮದಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಗಳಾಗಿ ಹಾಗೂ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಮಹೇಶ ಕೋಲೂರ, ಮಾರುತಿ ಮಾಯಣ್ಣವರ, ರಂಗಯ್ಯ ಕಸ್ತೂರಿ, ಜಗದೀಶ್ವರ ಬಿ.ಬಾಳಿಕಾಯಿ, ವೀರೇಶ ನೇಗಲಿ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ರೈತರೊಂದಿಗೆ ತಾವು ಕೃಷಿಯಲ್ಲಿ ಸಾಧನೆ ಮಾಡಿದ ಯಶೋಗಾಥೆ ಹಂಚಿಕೊಂಡು ರೈತರ ಪ್ರಶ್ನೋತ್ತರಗಳಿಗೆ ಉತ್ತರಿಸಿದರು.

ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನುವಹಿಸಿದ ರುಡ್‌ಸೆಟ್ ಸಂಸ್ಥೆಯ ನಿರ್ದೇಶಕರಾದ ಪೃಥ್ವಿರಾಜ ಜಿ ಪಿ ಅವರು ಶಿಬಿರಾರ್ಥಿಗಳನ್ನುದ್ಧೇಶಿಸಿ ಮಾತನಾಡಿ, ಸ್ನೇಹ ಪ್ರೀತಿ ನಿಮ್ಮೊಂದಿಗೆ ಈ ರೈತರ ಬಳಗವು ನಮ್ಮ ಸಂಸ್ಥೆಯಲ್ಲಿ ಜರುಗುವ ಕೃಷಿ ಉದ್ದಿಮೆ ರೈತ ಶಿಬಿರಾರ್ಥಿಗಳಿಗೆ ತಮ್ಮ ಕೃಷಿಯ ಅನುಭವವನ್ನು ಹಂಚಿಕೊಳ್ಳುತ್ತಿರುವುದು ಶ್ಲಾಘನೀಯ ಎಂದು ಹೇಳಿ ಶಿಬಿರಾರ್ಥಿಗಳು ಇದರ ಲಾಭವನ್ನು ತೆಗೆದುಕೊಳ್ಳಿ ಎಂದು ಹೇಳಿ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಬೇರೆ ಬೇರೆ ಜಿಲ್ಲೆಯ ರೈತ ಬಾಂಧವರು ಹಾಗೂ ರುಡ್‌ಸೆಟ್ ಸಂಸ್ಥೆಯ ಸಿಬ್ಬಂದಿ ವರ್ಗದವರು ಹಾಜರಿದ್ದರು.