ಮಹಿಳೆ ತನ್ನ ಅಸ್ತಿತ್ವವನ್ನು ತಾನೇ ಕಂಡುಕೊಳ್ಳಬೇಕು -ಜಿ.ಪಂ.ಸಿಇಒ ರುಚಿ ಬಿಂದಲ್
ಹಾವೇರಿ 11: ಮಹಿಳೆ ತನ್ನ ಆಸ್ತಿತ್ವವನ್ನು ತಾನೇ ಕಂಡುಕೊಳ್ಳಬೇಕು. ಬೇರೆಯವರ ಮೇಲೆ ಅವಲಂಬಿತರಾಗದೆ ತನ್ನ ಹಕ್ಕು ಹಾಗೂ ಕರ್ತವ್ಯಗಳನ್ನು ಪಡೆದುಕೊಳ್ಳಲು ಜಾಗೃತರಾಗಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರುಚಿ ಬಿಂದಲ್ ಹೇಳಿದರು.
ನಗರದ ಶಿಶು ಅಭಿವೃದ್ಧಿ ಇಲಾಖೆ ಸಭಾಭವನದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಆಸಿಡ್ ದಾಳಿಗೆ ಒಳಗಾದ ಮಹಿಳೆಯರ ಕುರಿತು ಕಾನೂನು ಅರಿವು ಕಾರ್ಯಕ್ರಮವನ್ನು ಸಸಿಗೆ ನೀರು ಹಾಕುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಇಂದು ಮಹಿಳೆ ತನ್ನ ಜವಾಬ್ದಾರಿಯನ್ನು ಅರಿತು ಎಲ್ಲಾ ರಂಗದಲ್ಲೂ ತನ್ನ ಹಕ್ಕು ಚಲಾಯಿಸುತ್ತಿದ್ದಾಳೆ. ಎಲ್ಲ ರಂಗದಲ್ಲೂ ಪಾಲ್ಗೊಂಡು ತನ್ನ ಆಸ್ತಿತ್ವವನ್ನು ಕಾಯ್ದುಕೊಳ್ಳುತ್ತಿದ್ದಾಳೆ. ಇದು ಉತ್ತಮ ಬೆಳವಣಿಗೆಯಾಗಿದೆ. ಮಹಿಳೆ ತನ್ನನ್ನು ತಾನು ಅರಿಯಲು ಮತ್ತು ತನ್ನನ್ನು ತಾನು ತಿಳಿದುಕೊಳ್ಳಲು ಇಂದು ಮಹಿಳಾ ದಿನಾಚರಣೆ ಆಚರಿಸಲಾಗುತ್ತಿದೆ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಬಿ.ಆರ್.ಮುತಾಲಿಕದೇಸಾಯಿ ಮಾತನಾಡಿ, ಇಂದು ಸಮಾಜದಲ್ಲಿ ಮಹಿಳಾ ಪ್ರಾಶಸ್ತ್ಯವನ್ನು ಗುರುತಿಸುವುದು ತುಂಬಾನೇ ಮುಖ್ಯವಾಗಿದೆ. ಮಹಿಳೆ ಇಲ್ಲದೆ ಈ ಜಗತ್ತು ಹಾಗೂ ಸಮಾಜವನ್ನು ಕಲ್ಪನೆಮಾಡಿಕೊಳ್ಳುವುದು ಅಸಾಧ್ಯವಾಗಿದೆ. ಸಮಾಜ ಮತ್ತು ಕುಟುಂಬ ಸುವ್ಯವಸ್ಥಿತವಾಗಿ ನಡೆಯಬೇಕಾದರೆ ಮಹಿಳಾ ಸಹಾಭಾಗಿತ್ವ ತುಂಬಾ ಅವಶ್ಯಕವಾಗಿದೆ ಎಂದರು.
ಸಾಮಾನ್ಯವಾಗಿ ಮಹಿಳೆಯು ಸಂಕಷ್ಟಕ್ಕೆ ತುತ್ತಾಗುತ್ತಾರೆ, ಅವರುಗಳಿಗೆ ಕಾನೂನಿನ ಅರಿವು ಹಾಗೂ ಪರಿಹಾರ ಒದಗಿಸಲು ನಿರಂತರವಾಗಿ ಕಾನೂನು ಅರಿವು ಕಾರ್ಯಕ್ರಮಗಳನ್ನು ಮಾಡುತ್ತ ಬರಲಾಗುತ್ತಿದೆ. ಇಂದು ಮಹಿಳೆಗೆ ಕಾನೂನು ಅರಿವು ಮೂಡಿಸುವುದರ ಜೊತೆಗೆ ಅವರ ರಕ್ಷಣೆಗೆ ಕಾನೂನು ಸೇವೆಗಳ ಪ್ರಾಧಿಕಾರದಿಂದ ಸಹಾಯವಾಣಿ ಕೇಂದ್ರ ಆರಾಂಭಿಸಲಾಗಿದೆ. ಮಹಿಳೆ ಅನ್ಯಾಯಕ್ಕೆ ಒಳಗಾದಾಗ ತನ್ನನ್ನು ತಾನು ರಕ್ಷಿಸಿಕೊಳ್ಳಲ್ಲು ಕಾನೂನು ಸೇವಾ ಪ್ರಧಿಕಾರವು ಆರಂಭಿಸಿರುವ ಸಹಾಯವಾಣಿ ಸಂಖ್ಯೆ 15100 ಗೆ ಕರೆ ಮಾಡಿ ಕಾನೂನು ನೆರವು ಪಡೆಯಬಹುದು ಎಂದು ಹೇಳಿದರು.
ಅಪರ ಜಿಲ್ಲಾಧಿಕಾರಿ ಡಾ. ನಾಗರಾಜ್ ಎಲ್ ಅವರು ಮಾತನಾಡಿ, ಸಮಾಜದಲ್ಲಿ ಮಹಿಳೆ ಮಾಡದಿರುವ ಕೆಲಸಗಳಿಲ್ಲ. ಇಂದು ಮಹಿಳೆಯರು ಪುರುಷರಿಗೆ ಸರಿ ಸಮಾನರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅದಕ್ಕೆ ಉತ್ತಮ ಉದಾಹರಣೆ ಎಂದರೇ ನಮ್ಮ ಹಾವೇರಿ ಜಿಲ್ಲೆಯಲ್ಲಿ ಶೇ. 53 ರಷ್ಟು ಉದ್ಯೋಗಸ್ಥ ಮಹಿಳೆರಿರುವುದು ವಿಶೇಷವಾಗಿದೆ. ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರದಂತೆ ಎಂಬ ಗಾದೆ ಮಾತಿನಂತೆ ಇಂದು ಗ್ರಾಮೀಣ ಪ್ರದೇಶದಲ್ಲೂ ಹೆಣ್ಣುಮಕ್ಕಳು ಉತ್ತಮ ಶಿಕ್ಷಣ ಪಡೆದುಕೊಳ್ಳುತ್ತಿದ್ದಾರೆ. ಒಂದು ಹೆಣ್ಣು ಮಗು ಶಿಕ್ಷಣ ಪಡೆದರೆ ಇಡೀ ಕುಟುಂಬವೇ ಸುಶಿಕ್ಷತವಾದಂತೆ. ಹೀಗಾಗಿ ಮಹಿಳಾ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು. ಇದರಿಂದ ಸಮಾಜದ ಬೆಳವಣಿಗೆ ಹಾಗೂ ಕುಟುಂಬದ ಬೆಳವಣಿಗೆಗೆ ಸಹಾಯಕವಾಗುತ್ತದೆ ಎಂದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಪನೆಲ್ ವಕೀಲರಾದ ಕುಮಾರಿ ಆರ್.ಐ.ಚನ್ನಪಟ್ಟಣ ಅವರು ಆಶಿಡ್ ದಾಳಿಗೆ ಒಳಗಾದ ಮಹಿಳೆಯರ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿದೇಶಕಿ ಮಮತಾ ಹೊಸಗೌಡ್ರ, ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಸ್.ಎಚ್.ಜತ್ತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಶ್ರೀನಿವಾಸ ಆಲದರ್ತಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕಿ ಭಾರತಿ ಎಚ್., ಜಿಲ್ಲಾ ನ್ಯಾಯವಾದಿಗಳ ಸಂಘದ ಕಾರ್ಯದರ್ಶಿ ಪಿ.ಎಸ್.ಹೆಬ್ಬಾಳ ಹಾಗೂ ಇತರರು ಉಪಸ್ಥಿತರಿದ್ದರು.