ಕಾಯಕಯೋಗಿ ನೂಲಿ ಚಂದಯ್ಯನವರ 866ನೇ ಜಯಂತಿ

 ಕಾಯಕಯೋಗಿ ನೂಲಿ ಚಂದಯ್ಯನವರ 866ನೇ ಜಯಂತಿ  866th birth anniversary of Kayakayogi Nooli Chandayya

 ಕಾಯಕಯೋಗಿ ನೂಲಿ ಚಂದಯ್ಯನವರ 866ನೇ ಜಯಂತಿ  

  

ವಚನಕಾರ ನುಲಿಯ ಚಂದಯ್ಯನ ಜಯಂತಿಯನ್ನು ನೂಲು ಹುಣ್ಣಿಮೆ ದಿನದಂದು ಆಚರಿಸಲಾಗುತ್ತಿದೆ. ಮುಖ್ಯವಾಗಿ ನೂಲನ್ನು (ಹಗ್ಗ) ನೂಲುವ ವೃತ್ತಿಯನ್ನು ಮಾಡುತ್ತಿದ್ದ. ಚಂದಯ್ಯನನ್ನು ಕರ್ನಾಟಕದಲ್ಲಿ ನೆಲೆಸಿದ ಕೊರವ, ಭಜಂತ್ರಿ ಸಮುದಾಯ ತನ್ನ ಮೂಲಪುರುಷನೆಂದು ಗುರುತಿಸಿಕೊಂಡಿದೆ. ಚಂದಯ್ಯನು ಕಲ್ಯಾಣದಲ್ಲಿ ಮೆದುಹುಲ್ಲಿನಿಂದ ಮಾಡಿದ ನುಲಿಯನ್ನು ಹೊಸೆದು ಹಗ್ಗದ ಕಣ್ಣಿ ಮಾಡಿ ಮಾರಿ ಬದುಕುವ ಕಾಯಕಜೀವಿಯಾಗಿದ್ದ ಬಗ್ಗೆ ವಚನದಲ್ಲಿ ಉಲ್ಲೇಖಗಳಿವೆ.ಕಂದಿಸಿ ಕುಂದಿಸಿ ಬಂಧಿಸಿ ಕಂಡವರ ಬೇಡಿತಂದುಜಂಗಮಕ್ಕೆ ಮಾಡಿದೆನೆಂಬ ದಂದುಗದೋಗರ ಲಿಂಗಕ್ಕೆನೈವೇದ್ಯ ಸಲ್ಲ.ತನು ಕರಗಿ ಮನ ಬಳಲಿ ಬಂದ ಚರದ ಅನುವರಿತುಸಂದಿಲ್ಲದೆ ಸಂಶಯವಿಲ್ಲದೆ ಜಂಗಮಲಿಂಗಕ್ಕೆದಾಸೋಹವ ಮಾಡುವುದೆ ಮಾಟ.ಕಾಶಿಯಕಾಯಿ ಕಾಡಿನ ಸೊಪ್ಪಾಯಿತ್ತಾದಡೂಕಾಯಕದಿಂದ ಬಂದುದು ಲಿಂಗಾರ​‍್ಿತ. ಚನ್ನಬಸವಣ್ಣಪ್ರಿಯ ಚಂದೇಶ್ವರಲಿಂಗಕ್ಕೆ ನೈವೇದ್ಯಸಂದಿತ್ತು.ಕಾಯದಿಂದ ಕಾಬುದು ಕುರುಹಿನ ಮೂರ್ತಿಯ.ಆತ್ಮದಿಂದ ಕಾಬುದು ಅರಿವಿನ ಮೂರ್ತಿಯ.ಅರಿವ ಕುರುಹ ಮರೆದಲ್ಲಿಪರಮ ದಾಸೋಹದಿಂದ ಪರಶಿವಮೂರ್ತಿಯ ಕಾಣಬಂದಿತ್ತು.ಚನ್ನಬಸವಣ್ಣಪ್ರಿಯ ಚಂದೇಶ್ವರ ನೀನೆ ಬಲ್ಲೆ.ಕಾಯವಿಡಿದು ಕಾಬುದೆಲ್ಲವು ಗುರುವಿನ ಭೇದ.ಜೀವವಿಡಿದು ಕಾಬುದೆಲ್ಲವು ಲಿಂಗದ ಭೇದ.ಜ್ಞಾನವಿಡಿದು ಕಾಬುದೆಲ್ಲವು ಜಂಗಮದ ಭೇದಮೂರನರಿತು ಬೇರೊಂದ ಕಾಬುದೆಲ್ಲವು ಮಹಾಪ್ರಕಾಶಚನ್ನಬಸವಣ್ಣಪ್ರಿಯ ಚಂದೇಶ್ವರಲಿಂಗಕ್ಕೆ ಶಬ್ದಮುಗ್ಧವಾದ ಭೇದ.  

ಕೈದ ಹಿಡಿದಾಡುವರೆಲ್ಲರು ಇರಿಯಬಲ್ಲರೆ? ಸಾಧನೆಯ ಮಾಡುವ ಬಾಲರೆಲ್ಲರೂ ಕಾದಬಲ್ಲರೆ? ಅರ್ತಿಗೆ ಮಾಡುವ ಕೃತ್ಯವಂತರೆಲ್ಲರೂ ಸದ್ಭಕ್ತರ​‍್ಪರೆ?ಅದು ಚಂದೇಶ್ವರಲಿಂಗಕ್ಕೆ ಸಲ್ಲದ ಮಾಟ.ಗುರು ಇಷ್ಟವ ಕೊಟ್ಟು ಕೂಲಿಗೆ ಕಟ್ಟಿದ ಲಿಂಗವೃಷ್ಟವ ತೋರಿ ತನ್ನ ರಜತದ ಬೆಟ್ಟದ ಮೇಲಿರಿಸಿದ.ಇಂತು ಗುರುಲಿಂಗಕ್ಕೆ ಮಾಡಿಹಿಂದಣ ಮುಂದಣ ಸಂದೇಹಕ್ಕೀಡಾದೆ.ಪ್ರಸಿದ್ಧವಪ್ಪ ಜಂಗಮಲಿಂಗಕ್ಕೆ ಸಂದೇಹವಿಲ್ಲದೆಮನಸಂದು ಮಾಡಲಾಗಿಚಂದೇಶ್ವರಲಿಂಗಕ್ಕೆ ಹಿಂದುಮುಂದೆಂಬುದಿಲ್ಲ.ಶರಣರಲ್ಲಿ ’ಕಾಯವೇ ಕೈಲಾಸ’  ಅಂತ ಪ್ರತಿಪಾದಿಸಿ, ನಂಬಿ ಬದುಕಿದ ಜನರಿಗೆ ಎಷ್ಟು ಮಹತ್ವ ವಿದೆಯೋ ಅಷ್ಟೇ ಮಹತ್ವ ’ಕಾಯಕವೇ ಕೈಲಾಸ’ ಅಂತ ನಂಬಿ ಬದುಕಿದವರಿಗಿದೆ. "ಕಾಯಕವೇ ಕೈಲಾಸವಾದಕಾರಣ ಅಮರೇಶ್ವರ ಲಿಂಗವಾಯಿತ್ತಾದರೂ ಕಾಯಕದೊಳಗೆ" ಅಂದು ನಂಬಿ ಬದುಕಿದ ಆಯ್ದಕ್ಕಿ ಮಾರಯ್ಯ ನವರದ್ದು ಒಂದು ಎತ್ತರವಾದರೆ, "ಕಾಡಿನ ಸೊಪ್ಪಾಯಿತ್ತಾದಡೂ ಕಾಯಕದಿಂದ ಬಂದುದು ಲಿಂಗಾರ​‍್ಿತ" ಎಂದು ಬಾಳಿ ಬದುಕಿ ದಾರಿ ತೋರಿದ ನುಲಿಯಚಂದಯ್ಯನವರದ್ದು ಇನ್ನೊಂದು ಎತ್ತರ.ಕೆಲವು ವರ್ಷಗಳಿಂದ ಜನಸಮುದಾಯಗಳು 12ನೇ ಶತಮಾನದ ವಚನ ಚಳವಳಿಯಲ್ಲಿ ಭಾಗಿಯಾದ 770 ಅಮರಗಣದಲ್ಲಿ (ಅನುಭವ ಮಂಟಪದ ಸದಸ್ಯರು) ತಮ್ಮ ಕುಲದ ಪೂರ್ವಜರನ್ನು ಗುರುತಿಸಿಕೊಳ್ಳುತ್ತಿವೆ. ಇದೊಂದು ಮಹತ್ವದ ಬೆಳವಣಿಗೆ. ವಚನಕಾರರ ಕಾಲದ ಕಾಯಕಜೀವಿಗಳ ಬಗ್ಗೆ ಮತ್ತಷ್ಟು ಅಧ್ಯಯನ ಮಾಡಲು, ಆಯಾ ವಚನಕಾರರ ಬಗ್ಗೆ ಮತ್ತಷ್ಟು ತಿಳಿಯಲು ಇದು ನೆರವಾಗಿದೆ. ಅಂತೆಯೇ 770 ಅಮರಗಣದಲ್ಲಿ ಯಾವ ಸಮುದಾಯವೂ ನಮ್ಮವರೆಂದು ಗುರುತಿಸಿಕೊಳ್ಳಲಾಗದ ವಚನಕಾರರೂ ಇದ್ದಾರೆ.ಈತ ಬಸವಣ್ಣನ ಸಮಕಾಲೀನ. ಚಂದಯ್ಯ ಕಟ್ಟಿಕೊಂಡಿದ್ದ ಲಿಂಗವು ಆತ ಒಮ್ಮೆ ಹುಲ್ಲು ಕೊಯ್ಯುವಾಗ ನೀರಲ್ಲಿ ಬೀಳುತ್ತದೆ. ಆದರೂ ಅವನು ಅದನ್ನು ಎತ್ತಿಕೊಳ್ಳದೆ ಹುಲ್ಲಿನ ಹೊರೆ ಹೊತ್ತು ನಡೆದುಬಿಡುತ್ತಾನೆ. ಕಾಯಕದಲ್ಲಿ ದೇವರನ್ನು ಕಾಣುವ ಚಂದಯ್ಯನಿಗೆ ತಾನು ಕಟ್ಟಿಕೊಂಡಿದ್ದ ಲಿಂಗ ಸಂಕೇತವಷ್ಟೆ. ಯುದ್ಧಕ್ಕೆ ಹೊರಟ ಸೈನಿಕ ಮನೆಯ ಹಂಗು ತೊರೆದಂತೆ, ದೇವರ ಮೇಲೆ ಭಕ್ತಿ ಇಟ್ಟವ ವ್ಯಕ್ತಿಗತ ಸುಖ, ಸಂಪತ್ತನ್ನು ತೊರೆಯಬೇಕು. ಹೀಗೆ ತೊರೆಯದವರನ್ನು ‘ಚಂದೇಶ್ವರ’ ಮೆಚ್ಚಲಾರ ಎಂದು ಚಂದಯ್ಯ ವಚನ ಕಟ್ಟಿದ್ದಾನೆ.ಚಂದಯ್ಯನವರು 1160 ರಲ್ಲಿ  ವಿಜಯಪುರದ ಸಮೀಪದ ಶಿವಣಗಿ ಎಂಬ ಗ್ರಾಮದಲ್ಲಿ ಜನಿಸುತ್ತಾರೆ. ಚಂದಯ್ಯನ ಕಾಯಕವನ್ನು ಆಧರಿಸಿ ನೋಡಿದರೆ ಈತ ಕೊರವ ಸಮುದಾಯಕ್ಕೆ ಸೇರಿದಾತ. ವೃತ್ತಿಗೆ ಅನುಸಾರವಾಗಿ ಪ್ರಾದೇಶಿಕವಾಗಿ ಈ ಸಮುದಾಯವನ್ನು ಕೊರವ, ಕೊರಚ, ಕುಂಚಿಕೊರವ,ಭಂಜತ್ರಿ ಎಂದೆಲ್ಲ ಕರೆಯಲಾಗುತ್ತದೆ. ಈ ಸಮುದಾಯಗಳಿಗೆ ಸೇರಿದವರು ದ್ರಾವಿಡ ಭಾಷೆಯಾದ ತಮಿಳಿಗೆ ಹತ್ತಿರದ ಕುಳವ (ಕುಳಿರ್) ಭಾಷೆ ಆಡುತ್ತಾರೆ. ಈ ನೆಲೆಯಲ್ಲಿ ಈ ಸಮುದಾಯವನ್ನು ಕುಳವ ಸಮುದಾಯ ಎನ್ನಬಹುದೆಂದು ಭಾಷಾ ತಜ್ಞರು ಗುರುತಿಸುತ್ತಾರೆ.ಸಮಗಾರ ಹರಳಯ್ಯನ ಮಗ ಶೀಲವಂತ ಮತ್ತು ಬ್ರಾಹ್ಮಣ ಮಧುವರಸನ ಮಗಳು ಲಾವಣ್ಯಳ ಅಂತರ್ಜಾತಿ ವಿವಾಹದ ನಂತರ ಕಲ್ಯಾಣದಲ್ಲಿ ಸನಾತನಿಗಳು ದೊಡ್ಡ ಗಲಭೆ ಎಬ್ಬಿಸುತ್ತಾರೆ.  

ಪರಿಣಾಮವಾಗಿ, ಬಸವಣ್ಣ ಗಡಿಪಾರಾಗಿ ಮಂತ್ರಿ ಪದವಿಗೆ ರಾಜೀನಾಮೆ ನೀಡಿ ಕೂಡಲಸಂಗಮದತ್ತ ತೆರಳಿ ಕೊನೆಯುಸಿರೆಳೆಯುತ್ತಾನೆ. ಶರಣರ ಕಗ್ಗೊಲೆಗಳು ನಡೆಯುತ್ತವೆ. ಉಳಿದ ಶರಣರು ವಚನದ ಕಟ್ಟುಗಳ ಜತೆ ಉಳವಿಯ ಕಡೆ ಧಾವಿಸುತ್ತಾರೆ. ಉಳವಿಯಲ್ಲಿ ಚನ್ನಬಸವಣ್ಣ ಉಸಿರೆಳೆದ ನಂತರ ನುಲಿಯ ಚಂದಯ್ಯ, ಅಕ್ಕ ನಾಗಮ್ಮ, ಹಿಪ್ಪರಗಿ ಮಲ್ಲಿಕಾರ್ಜುನ, ರುದ್ರಮುನಿ ಅವರಂತಹ ಶರಣರು ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕಿನ ಗೋಣಿಬೀಡಿಗೆ ಬರುತ್ತಾರೆ. ಹೀಗೆ ಕಲ್ಯಾಣದ ಹತ್ಯಾಕಾಂಡದ ನಂತರ ವಚನದ ಕಟ್ಟುಗಳ ರಕ್ಷಣೆಯಲ್ಲಿ ಚಂದಯ್ಯನ ಪಾತ್ರ ಇರುವುದು ಗಮನಾರ್ಹ.ಕಲ್ಯಾಣ ಕ್ರಾಂತಿಯ ನಂತರ ಚೆನ್ನಬಸವಣ್ಣರೊಡನೆ ನುಲಿಯ ಚಂದಯ್ಯ ಉಳಿವಿಗೆ ಬರುತ್ತಾರೆ. ಚೆನ್ನಬಸವಣ್ಣ ಶಿವೈಕ್ಯರಾದ ನಂತರ ಅನೇಕ ಶಿವಶರಣರು ವಿವಿಧೆಡೆಗೆ ಹಂಚಿಹೋಗುತ್ತಾರೆ. ಆಗ ಬಸವಣ್ಣನವರ ಸಹೋದರಿ ಅಕ್ಕ ನಾಗಮ್ಮರೊಂದಿಗೆ ಚಂದಯ್ಯನವರು ಕಾಯಕ ಧರ್ಮ ಪ್ರಚಾರ ಮಾಡುತ್ತಾ ಉಳವಿ, ಶಿವಮೊಗ್ಗ, ಎಣ್ಣೆಹೊಳೆ, ನಂದಿಗ್ರಾಮ, ಶಾಂತಿಸಾಗರ, ಬೆಂಕಿಕೆರೆ, ಇತರೆಡೆಗಳಲ್ಲಿ ಸಂಚರಿಸಿ ಹೊಳಲ್ಕೆರೆ ತಾಲ್ಲೂಕು ದುಮ್ಮಿ ಗ್ರಾಮಕ್ಕೆ ಬರುತ್ತಾರೆ. ಈ ಮದ್ಯದಲ್ಲಿ ಎತ್ತಿನ ಹೊಳೆತೀರದಲ್ಲಿ  ಅಕ್ಕ ನಾಗಮ್ಮ ಲಿಂಗೈಕ್ಯಳಾಗುತ್ತಾರೆ. ದುಮ್ಮಿ ಗ್ರಾಮದ  ದುಮ್ಮಣ್ಣ ನಾಯಕನ ಪತ್ನಿ ಪದ್ಮಾವತಿಯು ಚಂದಯ್ಯನವರ ವಿಚಾರಧಾರೆಯನ್ನು ಮೆಚ್ಚಿ ಲಿಂಗದೀಕ್ಷೆ ಪಡೆಯುತ್ತಾಳೆ. ಅರಮನೆಯಲ್ಲಿ ಆಶ್ರಯ ನೀಡುತ್ತಾಳೆ. ಆದರೆ ನುಲಿಯ ಚಂದಯ್ಯ ಅರಮನೆ ವಾತಾವರಣ ತನ್ನ ಕಾಯಕ ಧರ್ಮಕ್ಕೆ ಒಗ್ಗದ ಕಾರಣ ಆ ಆಶ್ರಯವನ್ನು ನಿರಾಕರಿಸುತ್ತಾರೆ. ನಂತರ ಆಕೆ ತನ್ನ ತವರೂರು ಪದ್ಮಾವತಿ ಪಟ್ಟಣದ ಕೆರೆಯ ದಡದಲ್ಲಿ  (ಈಗಿನ ಆರ್‌. ನುಲೇನೂರು ಗ್ರಾಮ ) ಶಿಲಾ ಮಂಟಪ ನಿರ್ಮಿಸಿ ನಿತ್ಯ ಕಾಯಕ  ಮತ್ತು ದಾಸೋಹ ಮಾಡಲು ಕೇಳಿಕೊಳ್ಳುತ್ತಾಳೆ.  ಕೆರೆಯ ನೀರಿನ ಬಳಕೆಯ ವಿಷಯದಲ್ಲಿ ಕೆಲವರು ವಿರೋಧವನ್ನು ಮಾಡುತ್ತಾರೆ. ಆಗ ನುಲಿಯ ಚಂದಯ್ಯ ತನ್ನ ಊರುಗೋಲಿನಿಂದ ನೆಲವನ್ನು ಕುಕ್ಕುತ್ತಾರೆ. ಅಲ್ಲಿ ನೀರಿನ ಚಿಲುಮೆ ಏಳುತ್ತದೆ. ಅಲ್ಲಿ ಒಂದು ಬಾವಿಯನ್ನು ನಿರ್ಮಿಸಿ ಅದನ್ನು ತನ್ನ ಕಾಯಕಕ್ಕೆ ಬಳಸಿಕೊಳ್ಳುತ್ತಾರೆ. ಇದನ್ನು "ಚಂದಯ್ಯನ ಬಾವಿ" ಎಂದು ಕರೆಯುತ್ತಾರೆ. ಈ ಬಾವಿ ಈಗಲೂ ಆ ಗ್ರಾಮದಲ್ಲಿದೆ.ಚಂದಯ್ಯ ‘ಚಂದೇಶ್ವರ ಲಿಂಗ’ ಎನ್ನುವ ಅಂಕಿತದಲ್ಲಿ ರಚಿಸಿದ 49 ವಚನಗಳು ಲಭ್ಯವಾಗಿವೆ. ಈ ಎಲ್ಲಾ ವಚನಗಳಲ್ಲಿ ಕಾಯಕ ಮತ್ತು ದಾಸೋಹದ ಮಹತ್ವವನ್ನು ಬೇರೆ ಬೇರೆ ನೆಲೆಗಳಲ್ಲಿ ಎದುರುಗೊಳ್ಳಲಾಗಿದೆ. ನಿಜದ ಭಕ್ತಿಯ ಬಗ್ಗೆ, ಕಾಯಕ ಶುದ್ಧಿಯ ಬಗ್ಗೆ ಚಂದಯ್ಯ ಮತ್ತೆ ಮತ್ತೆ ಮಾತನಾಡುತ್ತಾನೆ. ಅಪ್ರಾಮಾಣಿಕತೆ, ಆಡಂಬರದ ಭಕ್ತಿ, ನಡೆ ನುಡಿಯಲ್ಲಿನ ವ್ಯತ್ಯಾಸದ ಬಗ್ಗೆ ಕಟುವಾಗಿ ಟೀಕಿಸಿದ್ದಾನೆ. ಸಹ ವಚನಕಾರರು ಚಂದಯ್ಯನ ಬಗ್ಗೆ ವಚನ ಕಟ್ಟಿದ್ದಾರೆ. ಮುಂದೆ ಜನಪದ ಸಮುದಾಯಗಳು ಚಂದಯ್ಯನ ಬಗ್ಗೆ ಪದ ಕಟ್ಟಿ ಹಾಡುವ ಮೂಲಕ ಆತನನ್ನು ಉಳಿಸಿಕೊಂಡಿವೆ.ಚಂದಯ್ಯನವರದ್ದು ಬಹುಮುಖ ವ್ಯಕ್ತಿತ್ವ. ಇವರ ನಡೆ ನುಡಿ ಕಾಯಕನಿಷ್ಟೆ ಪುರಾಣ ಕಥೆಗಳಲ್ಲಿ ವರ್ಣಿತವಾಗಿವೆ. ಹನ್ನೆರಡನೆಯ ಶತಮಾನದ ಶಿವಶರಣರಲ್ಲಿ ಇವರನ್ನು ಹಟಯೋಗಿ ಎಂದೂ ಕರೆಯುತ್ತಾರೆ.  

ಈ ಬಗ್ಗೆ ಒಂದು ಕತೆ ಪ್ರಚಲಿತದಲ್ಲಿದೆ. ಹುಲ್ಲನ್ನು ಕೊಯ್ದು, ಅದರಿಂದ ನಾರು ತೆಗೆದು,  ನಾರನ್ನು ನುಲಿದು,  ಹಗ್ಗಮಾಡಿ,  ಅದನ್ನು ಮಾರಿ ಬಂದ ಹಣದಲ್ಲಿ ಜೀವನ ನಡೆಸುತ್ತಿದ್ದ ಇವರು ಮೊದಲು ಜಂಗಮಕ್ಕೆ ಪ್ರಸಾದ ಅರ​‍್ಿಸಿ ನಂತರವೇ ತಾನು ಪ್ರಸಾದ ಸ್ವೀಕರಿಸುತ್ತಿದ್ದರು. ಹೀಗೆಯೇ ಒಮ್ಮೆ ಹುಲ್ಲು ಕೊಯ್ಯುವಾಗ ಅವರ ಕೊರಳಲ್ಲಿದ್ದ ಲಿಂಗವು ಕಳಚಿ ಬೀಳುತ್ತದೆ. ತಾನು ಕಾಯಕ ಮಾಡುವಾಗ ತಾನಾಗಿ ಕಳಚಿಬಿದ್ದ ಲಿಂಗವನ್ನು  ಲೆಕ್ಕಿಸದೇ ತನ್ನ ಕಾಯಕದಲ್ಲಿ ಮಗ್ನನಾಗುತ್ತಾರೆ. ಆ ಲಿಂಗವನ್ನು ಎತ್ತಿಕೊಳ್ಳುವುದಿಲ್ಲ. ಕೊನೆಗೆ ಲಿಂಗವೇ ಅವರ ಬೆನ್ನು ಹತ್ತಿ ಹೋಯಿತು ಎಂಬಂಥಹ ಕಥೆ ಸ್ವಾರಸ್ಯಕರವಾಗಿದೆ.  ಕಾಯಕದಲ್ಲಿ ಕೈಲಾಸ ಕಂಡಂಥಹ ಶರಣ ಈ ನುಲಿಯ ಚಂದಯ್ಯ.ನುಲಿಯ ಚಂದಯ್ಯ ತನ್ನ ಜೀವನದ ಕೊನೆಯ ದಿನಗಳವರೆಗೂ ಈ ಊರಲ್ಲೇ ನೆಲೆಸುತ್ತಾರೆ. ನುಲಿಯ ಚಂದಯ್ಯ ಬಾಳಿ ಬದುಕಿ ಲಿಂಗೈಕ್ಯರಾದ್ದರಿಂದ ಪದ್ಮಾವತಿ ಪಟ್ಟಣವಾಗಿದ್ದ ಊರು ಜನರ ಬಾಯಲ್ಲಿ "ನುಲಿಯಯ್ಯನೂರು" ಆಗಿ ಬಾಯಿಂದ ಬಾಯಿಗೆ ಬದಲಾಗುತ್ತಾ ಈಗ "ನುಲೇನೂರು" ಎಂದು ಕರೆಯಲಾಗುತ್ತಿದೆ.   ರಾಮಗಿರಿ ಹತ್ತಿರವಿರುವ ಕಾರಣ ಆರ್‌. ನುಲೇನೂರು ಎಂದು ಕರೆಯಲಾಗುತ್ತಿದೆ. (ಹೊಳೆಲ್ಕೆರೆ ತಾಲೂಕಿನಲ್ಲೇ ಟಿ. ನುಲೆನೂರು ಎಂಬ ಇನ್ನೊಂದು ಹಳ್ಳಿಇದೆ)  ಆರ್‌.ನುಲೇನೂರಿನಲ್ಲಿ ನುಲಿಯ ಚಂದಯ್ಯನವರ  ಸಮಾಧಿಯಿದೆ. ಈ ಸಮಾಧಿಗೆ ಒಂದು ಗುಡಿ ಕಟ್ಟಲಾಗಿದೆ.ತನ್ನ ಇಷ್ಟಲಿಂಗದ ಕೈಯಲ್ಲೇ  ಹಗ್ಗ ಮಾರುವ ಕಾಯಕ ಮಾಡಿಸಿದವರೀತ ಎಂದು ಹೆಂಡದ ಮಾರಯ್ಯ ತನ್ನೊಂದು ವಚನದಲ್ಲಿ ಈತನ ಘನ ವ್ಯಕ್ತಿತ್ವವನ್ನು ನಾಟಕೀಯವಾಗಿ ನಿರೂಪಿಸಿದ್ದಾರೆ.  

ಈ  ಎಲ್ಲಾ ಕಾರಣಗಳಿಂದ ಈತನನ್ನು ಹಠಯೋಗಿ ಎಂದು ಕರೆಯಲ್ಪಟ್ಟಿದ್ದಾನೆ.  ಇದಿರ ಭೂತಹಿತಕ್ಕಾಗಿ ಗುರುಭಕ್ತಿಯ ಮಾಡಲಿಲ್ಲ.ಅರ್ತಿಗಾರಿಕೆಗಾಗಿ ಲಿಂಗವ ಬಿಟ್ಟು ಪೂಜಿಸಲಿಲ್ಲ.ರಾಜ ಚೋರರ ಭಯಕ್ಕಂಜಿ ಜಂಗಮ ದಾಸೋಹವಮಾಡಲಿಲ್ಲ.ಆವ ಕೃಪೆಯಾದಡೂ ಭಾವ ಶುದ್ಧವಾಗಿರಬೇಕು,ಚನ್ನಬಸವಣ್ಣಪ್ರಿಯ ಚಂದೇಶ್ವರಲಿಂಗವನರಿಯ ಬಲ್ಲಡೆ. ಈ  ಮಹಾನ ಕಾಯಕಯೋಗಿ ನೂಲಿ ಚಂದಯ್ಯ ನವರ ವಚನಗಳು ಕಾಯಕ ನಿಷ್ಠೆ ಬಗ್ಗೆ ಸದಾಕಾಲವೂ ಬೆಳಕು ಚೆಲ್ಲುತ್ತಿವೆ. ಶರಣರು  ಆದರ್ಶಗಳನ್ನು ಜೀವನದಲ್ಲಿ ಮೈಗೂಡಿಸಿಕೊಂಡರೆ ಅವರ ಜಯಂತಿ ಆಚರಣೆ ಸಾರ್ಥಕವಾಗುತ್ತದೆ..ಲೇಖಕರು ರಾಘವೇಂದ್ರ ನೀಲನ್ನವರ ಯೋಗ ಶಿಕ್ಷಕ,ಉಪನ್ಯಾಸಕರು ರನ್ನ ಬೆಳಗಲಿ