ಲಕ್ಷ್ಮೇಶ್ವರದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ 112ನೇ ಸಂಸ್ಥಾಪನಾ ದಿನಾಚರಣೆ
112th Foundation Day of Kannada Sahitya Parishad celebrated in Lakshmeshwaram
ಲಕ್ಷ್ಮೇಶ್ವರ 05: ಕನ್ನಡ ನಾಡಿನ ಅಸ್ಮಿತೆಯ ಪ್ರತೀಕವೇ ಕನ್ನಡ ಸಾಹಿತ್ಯ ಪರಿಷತ್ತು. ಕನ್ನಡ ನಾಡು- ನುಡಿಯ ಸಂರಕ್ಷಣೆ ಮತ್ತು ಕನ್ನಡ ಭಾಷೆಗಾಗಿ ಶ್ರಮಿಸಲು ಕಟ್ಟಲಾಗಿರುವ ಸಮಸ್ತ ಕನ್ನಡಿಗರ ಏಕೈಕ ಪ್ರಾತಿನಿಧಿಕ ಸಂಸ್ಥೆಯಾಗಿದೆ" ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎನ್. ನಾಯ್ಕ ಅಭಿಪ್ರಾಯಪಟ್ಟರು. ಅವರು ಲಕ್ಷ್ಮೇಶ್ವರದ ಸಕ್ಸಸ್ ಕ್ಲಾಸಸ್ ನಲ್ಲಿ ಲಕ್ಷ್ಮೇಶ್ವರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡ ಕನ್ನಡ ಸಾಹಿತ್ಯ ಪರಿಷತ್ತಿನ 112ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಉಪನ್ಯಾಸಕರಾಗಿ ಭಾಗವಹಿಸಿ ಮಾತನಾಡಿದ ಕ.ಸಾ.ಪ ಲಕ್ಷ್ಮೇಶ್ವರ ತಾಲೂಕಾ ಘಟಕದ ಸಂಘಟನಾ ಕಾರ್ಯದರ್ಶಿ,ಸಾಹಿತಿ ನಾಗರಾಜ ಮಜ್ಜಿಗುಡ್ಡ "ಕನ್ನಡ ಸಾಹಿತ್ಯ ಪರಿಷತ್ 1915 ಮೇ 5ರಂದು ಕೃಷ್ಣರಾಜ ಪರಿಷನ್ಮಂದಿರದಲ್ಲಿ ಆಗಿನ ಮೈಸೂರು ಅರಸರಾಗಿದ್ದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಂದ ಸ್ಥಾಪಿಸಲ್ಪಟ್ಟಿತ್ತು. ಆರಂಭವಾಗುವಾಗ ’ಕರ್ನಾಟಕ ಸಾಹಿತ್ಯ ಪರಿಷತ್’ ಎಂದು ನಾಮಕರಣಗೊಂಡರೂ ಮುಂದೆ 1935ರಲ್ಲಿ ಕನ್ನಡ ಸಾಹಿತ್ಯ ಪರಿಷತ್ ಎಂದು ಮರು ನಾಮಕರಣಗೊಂಡಿತು" ಎಂದು ತಿಳಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಲಕ್ಷ್ಮೇಶ್ವರ ಪೌರಸೇವಾ ಸಾಧಕ ಬಸವಣ್ಣೆಪ್ಪ ನಂದೆಣ್ಣವರ "ಯಾವುದೇ ಪ್ರಶಸ್ತಿ, ಗೌರವ ಬಯಸದೇ ನಾಲ್ಕು ದಶಕಗಳ ಕಾಲ ಲಕ್ಷ್ಮೇಶ್ವರದ ಪೌರ ಸೇವೆ ಮಾಡಿದ ನಮ್ಮಂತವರನ್ನು ಗುರುತಿಸಿ ಗೌರವಿಸಿದ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯ ಸ್ತುತ್ಯಾರ್ಹ" ಎಂದರು. ಭಾಗವಹಿಸಿ ಮಾತನಾಡಿದ ಹಿರಿಯ ಸಾಹಿತಿ ಎಸ್.ಎಫ್.ಆದಿ " ಕನ್ನಡ ಸಾಹಿತ್ಯ ಪರಿಷತ್ತು ಕನ್ನಡದ ಶ್ರೀಮಂತ ಪರಂಪರೆಯನ್ನು ಮತ್ತಷ್ಟು ಸಮೃದ್ಧಗೊಳಿಸುತ್ತಿದೆ. ಅದರಲ್ಲೂ ಗದಗ ಜಿಲ್ಲಾ ಘಟಕ ಹಾಗೂ ಲಕ್ಷ್ಮೇಶ್ವರ ತಾಲೂಕ ಘಟಕಗಳು ರಚನಾತ್ಮಕ ಕಾರ್ಯಕ್ರಮಗಳ ಮೂಲಕ ಅತ್ಯಂತ ಕ್ರಿಯಾಶೀಲವಾಗಿವೆ" ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಲಕ್ಷ್ಮೇಶ್ವರ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಈಶ್ವರ ಮೆಡ್ಲೇರಿ "ತಿರುಳ್ಗನ್ನಡ ನೆಲವಾದ ಪುಲಿಗೆರೆ ಅಂದರೆ ಈಗಿನ ಲಕ್ಷ್ಮೇಶ್ವರ ಪ್ರಾಚೀನ ಕಾಲದಿಂದಲೂ ಕನ್ನಡ,ಕನ್ನಡತನದ ಜಾಗೃತಿಯ ನಾಡು. ಹಾಗಾಗಿ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು ರಚನಾತ್ಮಕವಾದ ಕಾರ್ಯಕ್ರಮಗಳನ್ನು ನಿರಂತರವಾಗಿ ಸಂಘಟಿಸಲು ಸಾಧ್ಯವಾಗುತ್ತಿದೆ" ಎಂದರು.ಖ್ಯಾತ ಗಾಯಕ ಮಂಜುನಾಥ ಉಮಚಗಿ ಕನ್ನಡ ಗೀತ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು. ಕನ್ನಡ ಭಾಷಾಭಿಮಾನದ ಹಲವಾರು ಗೀತೆಗಳನ್ನು ಹಾಡಿ ರಂಜಿಸಿದರು.
ಶಿಕ್ಷಕರಾದ ರಾಜೇಶ ಶೆಟ್ಟರ, ನಾಗರಾಜ ಶರಣಾರ್ಥಿ ಮುಖ್ಯ ಅತಿಥಿಗಳಾಗಿ ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಸಾಧಕರು,ಉದ್ಘಾಟಕರು ಉಪನ್ಯಾಸಕರು, ಆತಿಥೇಯರು, ಗಾಯಕರನ್ನು ಸನ್ಮಾನಿಸಲಾಯಿತು.ಕ.ಸಾ.ಪ ತಾಲೂಕ ಘಟಕದ ಎಸ್.ಬಿ.ಅಣ್ಣಿಗೇರಿ ಸ್ವಾಗತಿಸಿದರು. ಶಂಕರ ಶಿಳ್ಳಿನ ವಂದಿಸಿದರು. ಶಿಕ್ಷಕ ಪ್ರಕಾಶ ಜ್ಯೋತಿ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಶಿಕ್ಷಕರಾದ ಪ್ರಭು ಹಾಲಗುಂಡಿ, ಆರ್.ಎಸ್.ಪಾಟೀಲ, ವೈ.ಎಂ.ಶಿರೂರು ಉಪಸ್ಥಿತರಿದ್ದರು. ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 