ಹುಬ್ಬಳ್ಳಿಯಲ್ಲಿ ಆಗಸ್ಟ್‌ 16ರಿಂದ ಸೆಪ್ಟೆಂಬರ್ 13ರವರೆಗೆ ‘ವಚನ ಶ್ರಾವಣ’

ಹುಬ್ಬಳ್ಳಿಯಲ್ಲಿ ಆಗಸ್ಟ್‌ 16ರಿಂದ ಸೆಪ್ಟೆಂಬರ್ 13ರವರೆಗೆ ‘ವಚನ ಶ್ರಾವಣ’  'Vachana Shravana' in Hubballi from August 16 to September 13

ಲೋಕದರ್ಶನ ವರದಿ 

ಹುಬ್ಬಳ್ಳಿ 14 :  ಬಸವ ಕೇಂದ್ರದ ವತಿಯಿಂದ ಪ್ರತಿವರ್ಷ ಶ್ರಾವಣ ಮಾಸದಲ್ಲಿ ನಡೆಯುವ ‘ವಚನ ಶ್ರಾವಣ’ ಕಾರ್ಯಕ್ರಮವು ಈ ಬಾರಿ ಆಗಸ್ಟ್‌ 16ರಿಂದ ಸೆಪ್ಟೆಂಬರ್ 13ರವರೆಗೆ ಹುಬ್ಬಳ್ಳಿ ನಗರದ ವಿವಿಧ ಬಡಾವಣೆಗಳು ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ನಡೆಯಲಿದೆ.  

ಸುಮಾರು 29 ದಿನಗಳ ಕಾಲ 34 ಸ್ಥಳಗಳಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಬಸವಾದಿ ಶಿವಶರಣರ ವಚನಗಳ ಕುರಿತು ಅನುಭಾವಿಗಳು ವಿಶ್ಲೇಷಣೆ ಹಾಗೂ ಉಪನ್ಯಾಸ ನೀಡಲಿದ್ದಾರೆ. ಬಸವಾಭಿಮಾನಿಗಳು ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ್ಯದರ್ಶಿ ಹಾಗೂ ಗ್ರಂಥಪಾಲಕ ಡಾ. ಸುರೇಶ ಡಿ. ಹೊರಕೇರಿ ಮನವಿ ಮಾಡಿದ್ದಾರೆ.  

ವಚನ ಸುನಾದ ಸಂಗೀತ ಬಳಗದಿಂದ ವಚನ ಗಾಯನ ಹಾಗೂ ಮಹಾದಾಸೋಹಿ ನೀಲಾಂಬಿಕಾ ತಾಯಿ ಬಳಗದ ಶರಣೆಯರಿಂದ ಮಹಾದೇವಿ ಅಕ್ಕಗಳ ಯೋಗಾಂಗ ತ್ರಿವಿಧಿ ಪಾರಾಯಣ ನಡೆಯಲಿದೆ.  

ಕಾರ್ಯಕ್ರಮದ ಸಮಾರೋಪವು ಸೆಪ್ಟೆಂಬರ್ 13ರಂದು ಮುರಾರ್ಜಿ ನಗರದಲ್ಲಿರುವ ಬಸವಕೇಂದ್ರದ ವಿ.ಎಂ. ಕೋಟಗಿ ಬಸವ ಸಂಸ್ಕೃತಿ ಶಾಲೆಯ ಸಭಾಭವನದಲ್ಲಿ ನಡೆಯಲಿದೆ. ಇಲಕಲ್ ಶ್ರೀ ವಿಜಯಮಹಾಂತೇಶ್ವರ ಸಂಸ್ಥಾನ ಮಠದ ಪರಮಪೂಜ್ಯ ಡಾ. ಗುರುಮಹಾಂತ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ.  

ಈ ಸಂದರ್ಭದಲ್ಲಿ ಅಣ್ಣಿಗೇರಿಯ ನಿಂಗಮ್ಮ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಪ್ರೊ. ಎಸ್‌.ಎಸ್‌. ಹಲ್ಯಾಪುರ ಅವರು ‘ಬಸವಣ್ಣನವರ ಉಪಮಿಸಬಾರದ ಉಪಮಾತೀತರು...’ ವಚನ ಕುರಿತು ಅನುಭಾವ ನೀಡಲಿದ್ದಾರೆ. ಶಾಸಕ ಅರವಿಂದ ಬೆಲ್ಲದ ಅತಿಥಿಗಳಾಗಿ ಭಾಗವಹಿಸಲಿದ್ದು, ಪ್ರೊ. ಜಿ.ಬಿ. ಹಳ್ಯಾಳ ಅಧ್ಯಕ್ಷತೆ ವಹಿಸಲಿದ್ದಾರೆ.  

ಶ್ರಾವಣ ಮಾಸದಲ್ಲಿ ವಚನಗಳನ್ನು ಓದಿ, ಕೇಳಿ ಅವುಗಳ ಸಂದೇಶವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ ಉತ್ತಮ ಜೀವನಕ್ಕೆ ಸಹಕಾರಿಯಾಗುತ್ತದೆ. ಬಸವಣ್ಣನವರ ತತ್ವಗಳು, ಸರಳತೆ, ಅಸಂಗ್ರಹ ಮತ್ತು ಮಾನವೀಯ ಮೌಲ್ಯಗಳು ಇಂದಿನ ಜೀವನದಲ್ಲಿಯೂ ಅತ್ಯಂತ ಪ್ರಸ್ತುತವಾಗಿವೆ ಎಂದು ಡಾ. ಸುರೇಶ ಡಿ. ಹೊರಕೇರಿ ತಿಳಿಸಿದ್ದಾರೆ.