‘ಮೌಲ್ಯಗಳೊಂದಿಗೆ ಬದುಕಲು ಸಂಕಲ್ಪಿಸಿ’

ಅಮ್ಮಿನಬಾವಿ ಪಂಚಗೃಹ ಹಿರೇಮಠದ ಶ್ರೀಅಭಿನವ ಶಾಂತಲಿಂಗ ಶಿವಾಚಾರ್ಯರ ನುಡಿ 

ಧಾರವಾಡ 17 : ದೇವಾಲಯ, ಮಠ, ಮಂದಿರಗಳನ್ನು ನಿರ್ಮಿಸಿ ಅಲ್ಲಿ ಅರ್ಚನೆ, ಆರಾಧನೆ, ಪ್ರಾರ್ಥನೆ, ಭಜನೆ, ವಿಭಿನ್ನ ನಾಮಸ್ಮರಣೆ ಮಾಡುವ ಜೊತೆಗೆ ನಿತ್ಯವೂ ದೇವರ ಸನ್ನಿಧಾನದಲ್ಲಿ ಮನುಷ್ಯ ಮೌಲ್ಯಗಳೊಂದಿಗೆ ಬದುಕಲು ಸಂಕಲ್ಪ ಮಾಡಬೇಕೆಂದು ತಾಲೂಕಿನ ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದ ಕಿರಿಯ ಶ್ರೀಗಳಾದ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಕರೆ ನೀಡಿದರು.  

ಅವರು ಬುಧವಾರ ರಾಮನವಮಿ ಪರ್ವಕಾಲದಲ್ಲಿ ಇಲ್ಲಿಯ ಗಾಂಧೀನಗರದ ವೀರಮಾರುತಿ ದೇವಸ್ಥಾನಕ್ಕೆ ನೂತನವಾಗಿ ನಿರ್ಮಾಣ ಮಾಡಿರುವ ಶಿಖರಕ್ಕೆ ಕಳಸಾರೋಹಣ ಮಾಡಿ ಮಾತನಾಡುತ್ತಿದ್ದರು. ವೀರ ಮಾರುತಿಯ ಸನ್ನಿಧಾನದಲ್ಲಿ ನಡೆಸುವ ಭಕ್ತಿಯ ಅನುಸಂಧಾನದಲ್ಲಿ ಸಜ್ಜನಿಕೆಯ ಸತ್ಯ ಶುದ್ಧ ಜೀವನ ವಿಧಾನದ ಒಂದೇ ಒಂದು ಸಂಕಲ್ಪದಿಂದ ಬದುಕಿನಲ್ಲಿ ಬಹಳಷ್ಟು ಬದಲಾವಣೆ ಕಾಣಲು ಸಾಧ್ಯವಾಗುತ್ತದೆ. ಇದಕ್ಕೆಲ್ಲ ಶ್ರೀವಿಷ್ಣುವಿನ ಅವತಾರವೇ ಆಗಿರುವ ಶ್ರೀರಾಮಚಂದ್ರನ ಆದರ್ಶ ನಮ್ಮ ಮುಂದಿದೆ ಎಂದೂ ಶ್ರೀಗಳು ನುಡಿದರು.  

ಶ್ರೀವೀರಮಾರುತಿ ಹಾಗೂ ನವಗ್ರಹ ದೇವಸ್ಥಾನ ವಿಶ್ವಸ್ಥ ಮಂಡಳಿ ಅಧ್ಯಕ್ಷ ಪ್ರಸನ್ನ ದೇಶಪಾಂಡೆ, ಪದಾಧಿಕಾರಿಗಳಾದ ವಿ.ವಿ.ಧಾರವಾಡ, ಶಿವಾನಂದ ಹುಣಶಿಮರದ, ಕೆ.ಜಿ.ದೇವರಮನಿ, ಪಿ.ಎ. ಜಂತ್ಲಿ, ಶಾಂತಾಬಾಯಿ ಇಟಗಿ, ಗೀತಾ ತುಂಬರಗುದ್ದಿ, ಸುರೇಖಾ ಆನೇಗುಂದಿ, ಜಿ. ಬಿ. ತುಂಬರಗುದ್ದಿ, ಶೀತಲ ಪಾಟೀಲ, ಸುನೀಲ ಕುಲಕರ್ಣಿ, ಈರಯ್ಯ ಹಿರೇಮಠ, ಬಸವರಾಜ ಹೂಗಾರ ಇದ್ದರು. ದೇವಸ್ಥಾನ ಟ್ರಸ್ಟ್‌ ವತಿಯಿಂದ ಶ್ರೀಗಳಿಗೆ ಗೌರವಾರೆ​‍್ಣ ನಡೆಯಿತು.  

ಸನ್ಮಾನ : ದೇವಾಲಯಕ್ಕೆ ವಿವಿಧ ಸೇವೆಗಳನ್ನು ಸಲ್ಲಿಸಿರುವ ಅಶೋಕ ಕೌಜಗೇರಿ, ಅಶ್ವಿನ ಗಾಂವಕರ, ಚಂದ್ರಿಕಾ ದೇಶಪಾಶಂಡೆ, ಆರ್‌.ಸಿ. ನೇಗಿನಹಾಳ, ರಾಜೇಶ ಖಾಮೋಜಿ, ಆಕಾಶ ಜಮಖಂಡಿ, ಶಾಂತಾಬಾಯಿ ಇಟಗಿ ಅವರನ್ನು ಶ್ರೀಗಳು ಸನ್ಮಾನಿಸಿ ಆಶೀರ್ವದಿಸಿದರು.