‘ಯುವ ಪ್ರತಿಭೆಗಳ ಬೆಳೆಸಲು ಕ್ರೀಡಾ ಸಾಮಗ್ರಿ ದಾನ’

‘ಯುವ ಪ್ರತಿಭೆಗಳ ಬೆಳೆಸಲು ಕ್ರೀಡಾ ಸಾಮಗ್ರಿ ದಾನ’ 'Donation of sports equipment to develop young talents'

ಲೋಕದರ್ಶನ ವರದಿ 

ಗದಗ 22: ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಯಲ್ಲಿ ಕ್ರೀಡೆಗೆ ಮಹತ್ವದ ಪಾತ್ರವಿದ್ದು, ಇದು ದೈಹಿಕ ಆರೋಗ್ಯದ ಜೊತೆಗೆ ಶಿಸ್ತು, ನಾಯಕತ್ವ ಮತ್ತು ತಂಡ ಮನೋಭಾವವನ್ನು ಬೆಳೆಸುತ್ತದೆ ಎಂದು ಕೆಎಸ್‌ಎಸ್ ಪದವಿ ಕಾಲೇಜಿನ ನಿವೃತ್ತ ಗಣಿತಶಾಸ್ತ್ರ ಪ್ರಾಧ್ಯಾಪಕ ಮತ್ತು ಬೆಂಗಳೂರಿನ ಆರ್ಟ್‌ ಆಫ್ ಗಿವಿಂಗ್ ಫೌಂಡೇಶನ್‌ದ ಗದಗ ಜಿಲ್ಲೆಯ ಸಂಯೋಜಕ ಪ್ರೊ. ವ್ಹಿ.ಎಚ್‌. ಕೊಳ್ಳಿ ಹೇಳಿದರು.  

ಅವರು ಫೌಂಡೇಶನ್‌ವು ಹುಲಕೋಟಿಯ ಕೆ.ಎಚ್‌. ಪಾಟೀಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ದಾನ ಮಾಡಿದ ವಾಲಿಬಾಲ್ ಕಿಟ್‌ನ್ನು ಕಾಲೇಜಿನ ಪ್ರಾಂಶುಪಾಲರಿಗೆ ಹಸ್ತಾಂತರಿಸಿ ಮಾತನಾಡುತ್ತ ಪ್ರಸ್ತುತ ಫೌಂಡೇಶನ್‌ವು ಯುವ ವಿದ್ಯಾರ್ಥಿಗಳ ಬೌದ್ಧಿಕ ಮತ್ತು ಭೌತಿಕ ಬೆಳವಣಿಗೆಗೆ ಉಪಯುಕ್ತವಾದ ಹಲವು ಯೋಜನೆಗಳನ್ನು ರೂಪಿಸಿದ್ದು, ಅವುಗಳಲ್ಲಿ ಕ್ರೀಡಾ ಸಾಮಗ್ರಿಗಳ ದಾನವೂ ಒಂದಾಗಿದ್ದು, ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಂಡು ಸಂಸ್ಥೆಗೆ ಆಭಾರಿಯಾಗುವುದರ ಜೊತೆಗೆ ಕಾಲೇಜಿನ ಕೀರ್ತಿ ಹೆಚ್ಚಿಸಬೇಕೆಂದು ಹೇಳಿದರು.

ಕಾರ್ಯಕ್ರಮದ ಸಂಯೋಜಕ ಡಾ. ಅಪ್ಪಣ್ಣ ಹಂಜೆ ಪ್ರಾಸ್ತಾವಿಕವಾಗಿ ಮಾತನಾಡುತ್ತ ಡಾ. ಅಚ್ಯುತ ಸಮಂತ ಅವರು 2013ರ ಮೇ 17ರಂದು ಸ್ಥಾಪಿಸಿರುವ ಆರ್ಟ್‌ ಆಫ್ ಗಿವಿಂಗ್ ಫೌಂಡೇಶನವು ಸಮಾಜದಲ್ಲಿ ಪ್ರೀತಿ, ಕರುಣೆ, ದಯೆ, ಸಹಾನುಭೂತಿ, ಶಾಂತಿ, ಸಂತೋಷವನ್ನು ಉತ್ತೇಜಿಸುವತ್ತ ಗಮನಹರಿಸಿ ಸ್ಥಳೀಯ ಸ್ವಯಂ ಸೇವಕರು, ಎನ್‌ಜಿಒಗಳ ಮೂಲಕ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡು ಪರಸ್ಪರೋಪಗ್ರಹೋ ಜೀವಾನಂ ಮೌಲ್ಯದ ಹಿರಿಮೆಗೆ ಪಾತ್ರವಾಗಿದ್ದು, ಫೌಂಡೇಶನದ ಸಹಾಯವನ್ನು ನಾವು ಸದಾಕಾಲ ಸ್ಮರಿಸುತ್ತೇವೆ ಮತ್ತು ಅದರ ಚಟುವಟಿಕೆಗಳಿಗೆ ನಾವೂ ಕೈಜೋಡಿಸುತ್ತೇವೆ ಎಂದು ಹೇಳಿದರು. 

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯೆ ಡಾ. ಸುಧಾ ಕೌಜಗೇರಿ ಅವರು ಫೌಂಡೇಶನ್‌ದ ಕಾರ್ಯಚಟುವಟಿಕೆಗಳನ್ನು ಸ್ಮರಿಸುತ್ತ ಸಾರ್ವಕಾಲಿಕ ಜೀವನ ಮೌಲ್ಯವಾದ ದಾನವು ಭಾರತೀಯ ಇತಿಹಾಸ ಮತ್ತು ಸಂಸ್ಕೃತಿಯೊಂದಿಗೆ ಹಾಸುಹೊಕ್ಕಾಗಿ ಬೆಳೆದು ಬಂದಿದ್ದು, ಇದರಿಂದ ಬಹುತ್ವ ಸಮಾಜದಲ್ಲಿ ಏಕತೆ, ಸಾಮರಸ್ಯ, ಭಾವೈಕ್ಯತೆ ಮತ್ತು ಸಮತೋಲನ ಕಾಪಾಡಲು ಸಾಧ್ಯವಾಗಿದೆ.   ಫೌಂಡೇಶನ್‌ದ ಪದಾಧಿಕಾರಿಗಳು, ಸ್ವಯಂ ಸೇವಕರು ಮತ್ತು ಪ್ರೊ. ಕೊಳ್ಳಿ ಅವರು ಕಾಲೇಜಿನ ಅಭಿನಂದನೆಗೆ ಪಾತ್ರರಾಗಿದ್ದಾರೆ ಎಂದು ಹೇಳಿದರು. ಕುಮಾರಿ ದಾನೇಶ್ವರಿ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ವಿಭಾಗದ ಸಂಯೋಜಕ ರಮೇಶ ಹುಲಕುಂದ ಗಣ್ಯಮಾನ್ಯರನ್ನು ಸ್ವಾಗತಿಸಿದರು.  

ಮಹಿಳಾ ವೇದಿಕೆ ಸಂಯೋಜಕಿ ಡಾ. ಸಾರಿಕಾ ಪಾಟೀಲ ಪ್ರೊ. ವ್ಹಿ.ಎಚ್‌. ಕೊಳ್ಳಿ ಅವರ ಸಮಾಜಮುಖಿ ಕಾರ್ಯಗಳನ್ನು ಪರಿಚಯಿಸಿದರು. ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಲಕ್ಷ್ಮಣ ಮುಳಗುಂದ ವಂದನಾರೆ​‍್ಣಗೈದರು. ಕನ್ನಡ ಪ್ರಾಧ್ಯಾಪಕ ಭೀಮೇಶ ಕಾರ್ಯಕ್ರಮ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.