ಅಂಧ ಮಕ್ಕಳಿಗೆ ಸೇವೆ ಸಲ್ಲಿಸುತ್ತಿರುವ ಸಂಗೀತ ಶಿಕ್ಷಕ ಮಂಜುನಾಥ್ ಕಮಾರ್ಗೆ ಉತ್ತಮ ಶಿಕ್ಷಕ ಪ್ರಶಸ್ತಿ

 ಅಂಧ ಮಕ್ಕಳಿಗೆ ಸೇವೆ ಸಲ್ಲಿಸುತ್ತಿರುವ ಸಂಗೀತ ಶಿಕ್ಷಕ ಮಂಜುನಾಥ್ ಕಮಾರ್ಗೆ ಉತ್ತಮ ಶಿಕ್ಷಕ ಪ್ರಶಸ್ತಿ  'Best Teacher' award for music teacher Manjunath Kamar, who serves visually impaired children

ಲೋಕದರ್ಶನ ವರದಿ 

ಹಾವೇರಿ, ಸೆ. 07: ನಗರದ ವಿನಾಯಕ ನಗರದಲ್ಲಿರುವ ಜ್ಞಾನ ಜ್ಯೋತಿ ಶಾಲೆಯಲ್ಲಿ ಹಾವನೂರು ಪ್ರತಿಷ್ಠಾನದ ವತಿಯಿಂದ ಪ್ರತಿವರ್ಷ ಶಿಕ್ಷಕರ ದಿನಾಚರಣೆ ಅಂಗವಾಗಿ ನೀಡಲಾಗುವ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ’**ಯನ್ನು ಅಂಧ ಮಕ್ಕಳ ವಸತಿಯುತ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಸಂಗೀತ ಶಿಕ್ಷಕ ಮಂಜುನಾಥ್ ಎಸ್‌. ಕಮಾರ್ ಅವರಿಗೆ ನೀಡಿ ಗೌರವಿಸಲಾಯಿತು.  

ಈ ಸಂದರ್ಭದಲ್ಲಿ ಹಿರಿಯ ಸಾಹಿತಿ ಹನುಮಂತಗೌಡ ಗೊಲ್ಲರ್ ಮಾತನಾಡಿ, ದೈಹಿಕವಾಗಿ ಎಲ್ಲವನ್ನೂ ಪಡೆದವರಿಗಿಂತ ವಿಕಲಚೇತನರಿಗೆ ಪ್ರಶಸ್ತಿ ನೀಡುವುದು ಸಾಮಾಜಿಕವಾಗಿ ಉತ್ತಮ ಕಾರ್ಯವಾಗಿದೆ.

ಅಂಧರಾದರೂ ಸಂಗೀತ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಮಂಜುನಾಥ್ ಅವರು ನೂರಾರು ಮಕ್ಕಳಿಗೆ ತಮ್ಮ ಪ್ರತಿಭೆಯನ್ನು ಧಾರೆ ಎರೆದಿದ್ದಾರೆ. ಇಂತಹ ಪ್ರತಿಭಾವಂತರನ್ನು ಗುರುತಿಸಿ ಹಾವನೂರು ಪ್ರತಿಷ್ಠಾನ ಸನ್ಮಾನಿಸುತ್ತಿರುವುದು ಮಾದರಿ ಕಾರ್ಯವಾಗಿದೆ ಎಂದು ಹೇಳಿದರು.  

ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವೈ.ಬಿ. ಆಲದಕಟ್ಟಿ ಮಾತನಾಡಿ, ಸಮಾಜದಲ್ಲಿ ಅಲಕ್ಷ್ಯಕ್ಕೆ ಹಾಗೂ ಉಪೇಕ್ಷೆಗೆ ಒಳಗಾದವರನ್ನು ಗುರುತಿಸಿ ಗೌರವಿಸುವ ಕಾರ್ಯ ನಡೆಯಬೇಕು. ಕಳೆದ ಮೂರು ದಶಕಗಳಿಂದ ಹಾವನೂರು ಪ್ರತಿಷ್ಠಾನ ಇಂತಹ ಸಮಾಜಮುಖಿ ಕಾರ್ಯಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ ಎಂದರು.  

ಪ್ರಶಸ್ತಿ ಪುರಸ್ಕೃತ ಮಂಜುನಾಥ್ ಕಮಾರ್ ಹಾಗೂ ಅವರ ಪತ್ನಿ ಶ್ರೀಮತಿ ಕವಿತಾ ಅವರನ್ನು ಪ್ರತಿಷ್ಠಾನದ ಅಧ್ಯಕ್ಷ ವಿರೂಪಾಕ್ಷ ಹಾವನೂರು ಹಾಗೂ ವೇದಿಕೆಯ ಗಣ್ಯರು ಪ್ರಶಸ್ತಿ ಫಲಕ ನೀಡಿ ಸನ್ಮಾನಿಸಿದರು.  

ಹಿರಿಯ ನ್ಯಾಯವಾದಿ ಕೆ.ಸಿ. ಪಾವಲಿ, ಮುಖ್ಯೋಪಾಧ್ಯಾಯರಾದ ವಸಂತ ಮಾಘಣಿನವರ, ಗುರುಪಾದಗೌಡ ಪಾಟೀಲ್, ಸುಭಾಷ್ ಹುಲ್ಯಾಳದ, ಹಿರಿಯ ಸಾಹಿತಿ ಸತೀಶ್ ಕುಲಕರ್ಣಿ ಸೇರಿದಂತೆ ಗಣ್ಯರು ಮಾತನಾಡಿದರು.  

ಕಾರ್ಯಕ್ರಮದಲ್ಲಿ ಈರಣ್ಣ ಬೆಳವಡಿ, ಮನೋಹರ ಅರ್ಕಸಾಳಿ, ಜಗದೀಶ್ ಚೌಳಗಿ, ಚಂದ್ರಶೇಖರ ಮಾಳಗಿ, ಎನ್‌.ಬಿ. ಕಾಳೆ, ಎಸ್‌.ಆರ್‌. ಹಿರೇಮಠ, ಶ್ರೀದೇವಿ ಹಾವನೂರು, ಶಿಕ್ಷಕಿ ಲಿಂಗಾವಾಣಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.