‘ಬಾ ಹತ್ತರ’ ರಾಜ್ಯಮಟ್ಟದ ಕವಿಗೋಷ್ಠಿ: ಬದುಕಿನ ಅನುಭವವೇ ಸೃಜನಶೀಲ ಕಾವ್ಯದ ಮೂಲ : ಜಿ.ಪಿ. ಬಸವರಾಜ
'Baa Hattara' State-Level Poets' Meet: Life Experience is the Source of Creative Poetry – G.P. Basav
ಲೋಕದರ್ಶನ ವರದಿ
ಧಾರವಾಡ 06: ಕವಿ ತನ್ನ ಸುತ್ತಲಿನ ಬದುಕನ್ನು ಸೂಕ್ಷ್ಮವಾಗಿ ಗಮನಿಸಿ, ಸಮಾಜದ ಸಮಸ್ಯೆಗಳಿಗೆ ಸ್ಪಂದಿಸುತ್ತಾ ಸೃಜನಾತ್ಮಕವಾಗಿ ಪ್ರತಿಕ್ರಿಯಿಸಿದಾಗ ಮಾತ್ರ ಉತ್ತಮ ಸಾಹಿತ್ಯ ಸೃಷ್ಟಿಯಾಗುತ್ತದೆ ಎಂದು ಹಿರಿಯ ಕವಿ ಜಿ.ಪಿ. ಬಸವರಾಜ ಅಭಿಪ್ರಾಯಪಟ್ಟರು. ನಗರದ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಶ್ರೀ ಕುಮಾರೇಶ್ವರ ಕಲ್ಚರಲ್ ಸೊಸೈಟಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ‘ಬಾ ಹತ್ತರ’ ರಾಜ್ಯಮಟ್ಟದ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು.
ಹೊಸ ತಲೆಮಾರಿನ ಕವಿಗಳು ತಮ್ಮ ಕಾಲದ ಸಾಮಾಜಿಕ ಬದಲಾವಣೆಗಳನ್ನು ಸೂಕ್ಷ್ಮವಾಗಿ ಗ್ರಹಿಸಿ, ಹೊಸ ಅನುಭವಗಳನ್ನು ಸಾಹಿತ್ಯದಲ್ಲಿ ದಾಖಲಿಸಬೇಕು. ಜನಜೀವನದಿಂದಲೇ ಭಾಷೆಯ ಸೊಗಡನ್ನು ಅಳವಡಿಸಿಕೊಂಡು ಕೃತಿ ರಚಿಸಿದರೆ ಕನ್ನಡ ಭಾಷೆಯ ಶ್ರೀಮಂತಿಕೆ ಮತ್ತಷ್ಟು ವಿಸ್ತರಿಸುತ್ತದೆ ಎಂದು ಹೇಳಿದರು. 12ನೇ ಶತಮಾನದ ವಚನಕಾರರು ವರ್ಣವ್ಯವಸ್ಥೆ, ವರ್ಗ ಅಸಮಾನತೆ ಹಾಗೂ ಲಿಂಗತಾರತಮ್ಯದ ವಿರುದ್ಧ ಧ್ವನಿಯೆತ್ತಿದ ಕ್ರಾಂತಿಕಾರರು. ಅವರ ವಚನಗಳು ಸಮಾನತೆ ಮತ್ತು ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸಿದ್ದು, ಕನ್ನಡ ಸಾಹಿತ್ಯಕ್ಕೆ ವಿಶಿಷ್ಟ ಅನುಭವಸಂಪತ್ತನ್ನು ನೀಡಿವೆ. ವಚನ ಸಾಹಿತ್ಯದ ಸರಳ ಭಾಷೆಯೇ ಅದರ ಶಾಶ್ವತ ಶಕ್ತಿಯಾಗಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಡಾ. ಲಿಂಗರಾಜ ಅಂಗಡಿ ಮಾತನಾಡಿ, ಇಂತಹ ಸಾಹಿತ್ಯಿಕ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು. ಇದರಿಂದ ಹೊಸ ತಲೆಮಾರಿನ ಲೇಖಕರಿಗೆ ಉತ್ತಮ ವೇದಿಕೆ ದೊರೆಯಲಿದೆ ಎಂದು ತಿಳಿಸಿದರು. ಶ್ರೀ ಕುಮಾರೇಶ್ವರ ಕಲ್ಚರಲ್ ಸೊಸೈಟಿಯ ಸಾಹಿತ್ಯ ಸೇವೆಯನ್ನು ಅವರು ಶ್ಲಾಘಿಸಿದರು. ವಿದ್ಯಾರಣ್ಯ ಪಿ.ಪೂ. ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ. ಶರಣಮ್ಮ ಗೊರೆಬಾಳ ಮಾತನಾಡಿ, ಕಾವ್ಯ ರಚನೆಗೆ ಜೀವನಾನುಭವದ ಜೊತೆಗೆ ಭಾಷೆಯ ಮೇಲಿನ ಹಿಡಿತ ಮತ್ತು ಶಬ್ದಸಂಪತ್ತೂ ಅತ್ಯಗತ್ಯ ಎಂದು ಹೇಳಿದರು. ಕವಿಗೋಷ್ಠಿಯಲ್ಲಿ ವಿವಿಧ ಜಿಲ್ಲೆಗಳ ಕವಿಗಳು ತಮ್ಮ ಕವನಗಳನ್ನು ವಾಚಿಸಿ, ಕಾವ್ಯ ರಚನೆಯ ಅನುಭವಗಳನ್ನು ಹಂಚಿಕೊಂಡರು.
ಕಾರ್ಯಕ್ರಮದ ಆರಂಭದಲ್ಲಿ ಕು. ಭಾಗ್ಯಶ್ರೀ ಎಚ್.ಎಲ್. ಹಾಗೂ ಶ್ರೀಧರ ಗಸ್ತಿ ಅವರು ಭಾವಗೀತೆಗಳನ್ನು ಪ್ರಸ್ತುತಪಡಿಸಿದರು. ಹೇಮಂತ ಲಮಾಣಿ ಹಾರ್ಮೋನಿಯಂ ಹಾಗೂ ಡಾ. ಅನಿಲ್ ಮೇತ್ರಿ ತಬಲಾದಲ್ಲಿ ಸಂಗತ ನೀಡಿದರು. ಕೇಂದ್ರ ಸಾಹಿತ್ಯ ಅಕಾಡೆಮಿ ಕನ್ನಡ ಸಲಹಾ ಮಂಡಳಿ ಸದಸ್ಯ ಚನ್ನಪ್ಪ ಅಂಗಡಿ ಕಾರ್ಯಕ್ರಮದ ಸಂಯೋಜನೆ ವಹಿಸಿದ್ದರು. ಶ್ರೀ ಕುಮಾರೇಶ್ವರ ಕಲ್ಚರಲ್ ಸೊಸೈಟಿಯ ಕಾರ್ಯದರ್ಶಿ ಪ್ರಕಾಶ ಬಾಳಿಕಾಯಿ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಸಾಹಿತ್ಯಾಸಕ್ತರು, ಕವಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.
ಹಿಡಕಲ್ ಜಲಾಶಯದ ನೀರಿನಲ್ಲಿ ವೃದ್ದೆಯ ಶವ ಪತ್ತೆ : ಹಳೇಗುಡನಟ್ಟಿ ಬಳಿ ಘಟನೆ
ಡ್ರಗ್ ಅವೇರ್ನೆಸ್ ವೀಕ್: ಆಚರಣೆ, ಕಾರ್ಯಾಚರಣೆ 12.38 ಲಕ್ಷ ಮಾಕದ ವಶ, 16 ಪ್ರಕರಣ ದಾಖಲು, 4 ಬಂಧನ
ರಾಜ್ಯ ನೇಕಾರರ ಸಂಘದಿಂದ ನಾಳೆ ಬೆಳಗಾವಿ ಚಲೋ ಕಾರ್ಯಕ್ರಮ : ಸಿಎಂ ಮುಂದೆ ಬೇಡಿಕೆಗಳ ಪಟ್ಟಿ
ಕ್ರಿಕೇಟಿಗ್ ಧೋನಿ ಬೆಳಗಾವಿಗೆ ಕರೆಸಿ : ವಿದ್ಯಾರ್ಥಿಗಳಿಂದ ಡಿಸಿಗೆ ವಿಭಿನ್ನ ಮನವಿ
ಮಳೆಯಿಂದ ಕಾರಲಗಾ ಗ್ರಾಮ ಜಲಾವೃತ; ವಿದ್ಯಾರ್ಥಿಗಳ ಪರದಾಟ : ಶಾಲಾ ಕಾಲೇಜುಗಳಿಗೆ ರಜೆ
ಆಲಂದಿಯಲ್ಲಿ ಪ್ರವಾಹ: ಭಾರೀ ಮಳೆಯಿಂದ ಇಂದ್ರಾಯಣಿ ನದಿ ಉಕ್ಕಿ ಹರಿದು ಸೇತುವೆಗಳು ಮುಚ್ಚಲ್ಪಟ್ಟವು; ನದಿತೀರ ಪ್ರದೇಶಗಳು ಜಲಾವೃತ 