ಮಹಿಳೆಯರು ಸ್ವಾವಲಂಬಿ ಜೀವನ ಹೊಂದಬೇಕು: ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ

Women should have a self-reliant life: Deputy Commissioner Prashant Kumar Mishra

ಬಳ್ಳಾರಿ 28: ಮಹಿಳೆಯರು ಸ್ವ-ಸಹಾಯ ಗುಂಪುಗಳ ಮೂಲಕ ಕಿರು ಉದ್ಯಮಗಳನ್ನು ಆರಂಭಿಸಿ ಸ್ವಾವಲಂಬಿ ಜೀವನ ಕಟ್ಟಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಹೇಳಿದರು. 

ಜಿಲ್ಲಾ ಪಂಚಾಯತ್, ಕೌಶಲ್ಯಾಭಿವೃದ್ದಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಸಂಜೀವಿನಿಹಿಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಅಭಿಯಾನ ಮತ್ತು ಲಿಂಗತ್ವ ಪರಿವರ್ತಾನ ಅಭಿಯಾನ ಅಂಗವಾಗಿ ನಗರದ ಜಿಪಂ ನ ನಜೀರ್ ಸಾಬ್ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. 

ಸರ್ಕಾರವು ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಿದೆ. ಸರ್ಕಾರದಿಂದ ದೊರೆಯುವ ಸೌಲಭ್ಯಗಳ ಸದುಪಯೋಗ ಪಡೆದುಕೊಂಡು ಅಭಿವೃದ್ಧಿ ಹೊಂದಬೇಕು ಎಂದು ತಿಳಿಸಿದರು.ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ್ ಹ್ಯಾರೀಸ್ ಸುಮೈರ್ ಅವರು ಮಾತನಾಡಿ, 2025-26 ನೇ ಸಾಲಿನ ಆರ್ಥಿಕ ವರ್ಷದಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಸಮುದಾಯಿತ ಕಾಮಗಾರಿಗಳು ಪ್ರಾರಂಭ ಆಗುತ್ತಿದ್ದು, ಉದ್ಯೋಗ ಚೀಟಿ ಹೊಂದಿದ ಕುಟುಂಬಗಳು ಮತ್ತು ವಿಶೇಷವಾಗಿ ಮಹಿಳೆಯರು ಬೇರೆ ಕಡೆ ಪಟ್ಟಣ, ನಗರ ಪ್ರದೇಶಗಳಿಗೆ ವಲಸೆ ಹೋಗದೆ ನಿಮ್ಮ ಗ್ರಾಮದಲ್ಲೇ ಪ್ರತಿ ಕುಟುಂಬವು 100  ದಿನಗಳ ವರೆಗೆ ನರೇಗಾ ಕೆಲಸದಲ್ಲಿ ತೊಡಗಿಸಿಕೊಳ್ಳಬೇಕು ಎಂದು ತಿಳಿಸಿದರು.  

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೋಭಾರಾಣಿ ವಿ.ಜೆ ಅವರು ಮಾತನಾಡಿ, ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿ ತೊಡಗಿದ್ದಾರೆ. ಸಾಧಿಸುವ ಛಲ ಹೊಂದಬೇಕು. ಯಾವುದೇ ಸಮಯದಲ್ಲಿ ಆತ್ಮಸ್ಥೈರ್ಯ ಕಳೆದುಕೊಳ್ಳಬಾರದು ಎಂದು ಸಲಹೆ ನೀಡಿದರು.ಬಳಿಕ ಆಯುಷ್ ಇಲಾಖೆ ವೈದ್ಯರಾದ ಡಾ.ಮುಕ್ಕಣ್ಣ ಅವರು ಮಹಿಳೆಯರ ಆರೋಗ್ಯ, ಶುಚಿತ್ವ ಮತ್ತು ನೈರ್ಮಲ್ಯ ಕುರಿತು ವಿಶೇಷ ಉಪನ್ಯಾಸ ನೀಡಿದರು.ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದಡಿ ರಚಿಸಿ ಉತ್ತಮ ಮತ್ತು ವಿಶೇಷವಾಗಿ ಕೆಲಸ ನಿರ್ವಹಿಸುತ್ತಿರುವ ವಿವಿಧ ತಾಲ್ಲೂಕುಗಳಿಗೆ ಮೂರು ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟಗಳು ಮತ್ತು ಮೂರು ಸ್ವ ಸಹಾಯ ಗುಂಪುಗಳಿಗೆ ಅವರು ನಿರ್ವಹಿಸುತ್ತಿರುವ ವಿವಿಧ ಚಟುವಟಿಕೆ, ಪ್ರಗತಿ ಸಾಧಿಸಿದ ಆಧಾರದ ಮೇರೆಗೆ ಪುರಸ್ಕಾರ, ಪ್ರಮಾಣ ಪತ್ರ ಮತ್ತು ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. 

ಸಂಡೂರು ತಾಲ್ಲೂಕಿನ ದರೋಜಿ ಗ್ರಾಮದ ಅಕ್ಕಮಹಾದೇವಿ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ- ಪ್ರಥಮ ಸ್ಥಾನ.ಕಂಪ್ಲಿ ತಾಲ್ಲೂಕಿನ ಮೆಟ್ರಿ ಗ್ರಾಮದ ಮೆಟ್ರಿ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ- ದ್ವಿತೀಯ ಸ್ಥಾನ.ಕುರುಗೋಡು ತಾಲ್ಲೂಕಿನ ಸೋಮಸಮುದ್ರ ಗ್ರಾಮದ ಕೊಟ್ಟೂರೇಶ್ವರ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ- ತೃತೀಯ ಸ್ಥಾನ.ಆಯುಷ್ ಇಲಾಖೆಯ ವೈದ್ಯರಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು.ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಲೆಕ್ಕಾಧಿಕಾರಿ ವೈ.ಪರಿಮಳ, ಉಪಕಾರ್ಯದರ್ಶಿ ಗಿರಿಜಾ ಶಂಕರ್, ಮುಖ್ಯ ಯೋಜನಾಧಿಕಾರಿ ವಾಗೀಶ್ ಶಿವಾಚಾರ್ಯ, ಯೋಜನಾ ನಿರ್ದೇಶಕ ವಿನೋದ್ ಕುಮಾರ್, ಸಹಾಯಕ ನಿರ್ದೇಶಕ ಬಸವರಾಜ್ ಹಿರೇಮಠ್, ಕುರುಗೋಡು ತಾಪಂ ಇಒ ನಿರ್ಮಲಾ, ಸಂಡೂರು ತಾಪಂ ಇಒ ರೇಣುಕಾಚಾರ್ಯ, ಬಿಸಿ ಊಟ ಯೋಜನೆ ಇಒ ಕಸ್ತೂರಿ, ಎನ್‌ಆರ್‌ಎಲ್‌ಎಂ ಯೋಜನೆಯ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ರಾಜೇಂದ್ರ.ಎಂ ಸೇರಿದಂತೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಸಿಬ್ಬಂದಿಗಳು, ತಾಲ್ಲೂಕು ಮತ್ತು ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದ ಮಹಿಳೆಯರು, ಸ್ವ ಸಹಾಯ ಗುಂಪಿನ ಮಹಿಳೆಯರು, ವಿವಿಧ ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಿದ್ದರು.