ನೇಕಾರರೂ ಕಲಾವಂತರು : ಚಿತ್ರ ನಿರ್ದೇಶಕ ನಾಗೇಂದ್ರ ಪ್ರಸಾದ್

ಗುಳೇದಗುಡ್ಡ 26: ನೇಕಾರ ಕುಲಕಸಬು ಇರುವ ಪ್ರತಿಯೊಬ್ಬರಲ್ಲಿಯೂ ಪ್ರತಿಭಾ ಲಕ್ಷಣ ಇದ್ದೇ ಇದೆ. ನೇಕಾರ ಕುಲಕ್ಕೆ ಧಾರ್ಮಿಕ ಹಾಗೂ ಐತಿಹಾಸಿಕ ಪರಂಪರೆ ಇದೆ. ಕಲೆ ಒಂದು ಸಮುದಾಯದ ಸೊತ್ತಲ್ಲ. ಅದಕ್ಕೆ ನೇಕಾರರೂ ಹೊರತಾಗಿಲ್ಲ. ಅವರೂ ಕಲಾವಂತರು  ಎಂದು ಬೆಂಗಳೂರಿನ ಚಲನಚಿತ್ರ ಸಾಹಿತಿ, ನಿರ್ದೇಶಕ ಕವಿರತ್ನ ಡಾ. ವಿ. ನಾಗೇಂದ್ರ ಪ್ರಸಾದ್ ಹೇಳಿದರು. 

ಅವರು ಶನಿವಾರ ಪಟ್ಟಣದ ಶ್ರೀಜಗದ್ಗುರು ಗುರುಸಿದ್ದ ಪಟ್ಟದಾರ್ಯ ಶ್ರೀಗಳ 36 ನೇ ವಾರ್ಷಿಕ ಪುಣ್ಯಾರಾಧನೆಯ ಶರಣ ಸಂಗಮ ಸಮಾರಂಭದ 6ನೇ ದಿನದ ವಿಶೇಷ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿ, ನೇಕಾರಿಕೆ ಒಂದು ಕಲೆ. ಅದರ ಜೊತೆಗೆ ಇನ್ನಿತರ ವಿಶೇಷವಾದ ಕಲೆಗಳೂ ಇವೆ. ನೇಕಾರ ಕುಟುಂಬದಲ್ಲಿ ಜನಿಸಿದ ನಾನೂ ಒಬ್ಬ ಚಲನಚಿತ್ರ ಕಲಾವಿದ. ನನ್ನಂತೆ ಇನ್ನೂ ಹಲವು ಕ್ಷೇತ್ರಗಳಲ್ಲಿ ಹೆಸರಾಂತ ನೇಕಾರ ಸಮಾಜದ ಕಲಾವಿದರಿದ್ದಾರೆ. ಈ ಸಂಖ್ಯೆ ಇನ್ನೂ ಹೆಚ್ಚಾಗಬೇಕು. ನೇಕಾರರಲ್ಲಿ ಶೈಕ್ಷಣಿಕ ಹಾಗೂ ರಾಜಕೀಯ ಶಕ್ತಿ ಬೆಳೆಯಬೇಕು. ನೇಕಾರರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿ. ಶಿಕ್ಷಣವೇ ಎಲ್ಲದರ ಪ್ರಭಾವಿ ಶಕ್ತಿ. ರಾಜ್ಯದಲ್ಲಿ ನೇಕಾರ ಮಠಗಳು ಶಿಕ್ಷಣ ನೀಡುವ ಕೆಲಸ ಮಾಡುತ್ತಿವೆ. ಗುಳೇದಗುಡ್ಡದ ಶ್ರೀ ಮಠವೂ ಇಂತಹ  ಸಮಾಜಮುಖಿ ಕಾರ್ಯದಲ್ಲಿ ತೊಡಗಿರುವುದು ಶ್ಲಾಘನೀಯವೆಂದರು. 

     ಬೆಂಗಳೂರಿನ ವಾಣಿಜ್ಯ ತೆರಿಗೆ ಇಲಾಖೆ ಜಂಟಿ ನಿರ್ದೇಶಕ ಸಂಗಮೇಶ ಉಪಾಸೆ ಮುಖ್ಯ ಅತಿಥಿಗಳಾಗಿ ಮಾತನಾಡಿ, ಸಮಾಜ ಸುಧಾರಕರು ಜಾತಿ, ಧರ್ಮವನ್ನು ಬದಿಗಿರಿಸಿ ಜನರ ಅಂಧಕಾರವನ್ನು, ತಪ್ಪು ತಿಳುವಳಿಕೆಯನ್ನು, ಮೌಢ್ಯವನ್ನು ಹೋಗಲಾಡಿಸಲು ಪ್ರಯತ್ನಿಸಿದರೆ ನಾವಿಂದು ಅವರವರ ಜಾತಿ, ಧರ್ಮವನ್ನು ಗಣನೆಗೆ ತೆಗೆದುಕೊಂಡು ಅವರನ್ನು ಜಾತಿ,ಧರ್ಮಕ್ಕೆ ಸೀಮಿತಗೊಳಿಸಿರುವುದು ಅಪಾಯಕಾರಕ ಎಂದು  ಶರಣ ಧರ್ಮ ಎಲ್ಲರನ್ನು ಒಗ್ಗೂಡಿಸುವ ಧರ್ಮ. ಇಲ್ಲಿ ಜಾತಿ, ಧರ್ಮದ ಭೇದವಿಲ್ಲ. ಆದರೆ ಇಂದು ನಾವು ಸಮಾಜವನ್ನು ಜಾತಿ, ಧರ್ಮದ ಹೆಸರಿನಲ್ಲಿ ಒಡೆಯುವ ಕಾರ್ಯ ಮಾಡುತ್ತಿದ್ದೇವೆ. ಮಹಾ ಪುರುಷರನ್ನು ಜಾತಿ, ಧರ್ಮಕ್ಕೆ ಸೀಮಿತಗೊಳಿಸುತ್ತಿದ್ದೇವೆ. ಅಂಬೇಡ್ಕರ್ ದಲಿತರಿಗೆ, ಬಸವಣ್ಣ ಲಿಂಗಾಯತರಿಗೆ, ಶಿವಾಜಿ ಮರಾಠಿಗರಿಗೆ ಹೀಗೆ ಜಾತಿ, ಧರ್ಮಕ್ಕೆ ಇವರೆಲ್ಲ ಸೀಮಿತವಾದರೆ ದೇಶದಲ್ಲಿ ಸಮಾನತೆ, ಏಕತೆ ಕಾಣುವುದಾದರೂ ಹೇಗೆ. ಇಂತಹ ಸಂಕುಚಿತ ವಿಚಾರಕ್ಕೆ ನನ್ನ ಧಿಕ್ಕಾರವಿದೆ ಎಂದರು.  

ಮುಧೋಳ ಕುಬಸದ ಆಸ್ಪತ್ರೆಯ ವೈದ್ಯ ಡಾ.ಶಿವಾನಂದ ಕುಬಸದ ಉಪನ್ಯಾಸ ನೀಡಿದರು. ಚಲನಚಿತ್ರ ನಿರ್ದೆಶಕರಾದ ಟಿ.ಎನ್‌.ನಾಗೇಶ, ನಾಗೇಂದ್ರ ಮಾಗಡಿ, ರಮೇಶ ಕೋಟೆ, ತಮ್ಮಿನಟ್ಟಿಯ ಪದ್ಮಸಾಲಿ ನೇಕಾರ ಸಮಾಜ ಗುರುಪೀಠದ ಜಗದ್ಗುರು ಪ್ರಭುಲಿಂಗ ಶ್ರೀಗಳು, ತೆಲಸಂಗ ಕುಂಬಾರ ಗುಂಡಯ್ಯ ಮಹಾ ಸಂಸ್ಥಾನದ ಪರಮ ಪೂಜ್ಯ ಬಸವಗುಂಡಯ್ಯ ಶ್ರೀಗಳು ಮಾತನಾಡಿದರು.  ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ  ಉಪಾಧ್ಯಕ್ಷ ಡಾ.ಬಸವರಾಜ ಕೇಲಗಾರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶ್ರೀಮಠದ ಬಸವರಾಜ ಶ್ರೀಗಳು ಸಾನಿಧ್ಯ ವಹಿಸಿ ಮಾತನಾಡಿದರು. 

    ಇದೇ ಸಂದರ್ಭದಲ್ಲಿ ವಿವಿಧ ಜಾತಿ ಸಮುದಾಯಗಳ ಪ್ರಮುಖರನ್ನು ಸನ್ಮಾನಿಸಲಾಯಿತು. ಶರಣ ಸಂಗಮ ಸ್ವಾಗತ ಸಮಿತಿ ಅಧ್ಯಕ್ಷ ನಾಗೇಶಪ್ಪ ಪಾಗಿ, ಮಲ್ಲೇಶಪ್ಪ ಬೆಣ್ಣಿ, ಗುರು ಕಾಳಿ, ಆನಂದ ತಿಪ್ಪಾ, ಮಲ್ಲಿಕಾರ್ಜುನ ರಾಜನಾಳ, ಶಿವಾನಂದ ಜವಳಿ, ಸೋಮಶೇಖರ ಕಲಬುರ್ಗಿ ಸೇರಿದಂತೆ ಇತರರು ಸಮಾರಂಭದಲ್ಲಿ ಪಾಲೊಂಡಿದ್ದರು.