ಮತದಾನವು ಪ್ರತಿಯೋರ್ವರ ಜವಾಬ್ದಾರಿಯುತ ಕರ್ತವ್ಯ

ಸಂಡೂರು: ಸ್ಪೀಕಾಥಾನ್ ಕಾರ್ಯಕ್ರಮದಲ್ಲಿ ಎಆರ್‌ಓ ಸತೀಶ್ 

ಬಳ್ಳಾರಿ,06: ಮತದಾನ ಮಾಡುವುದು ಪ್ರತಿಯೋರ್ವರ ಒಂದು ಜವಾಬ್ದಾರಿಯುತ ಕರ್ತವ್ಯವಾಗಿದ್ದು, ತಪ್ಪದೇ ಮತದಾನ ಮಾಡಬೇಕು ಎಂದು ಸಂಡೂರು ಕ್ಷೇತ್ರ ಚುನಾವಣಾಧಿಕಾರಿ ಹೆಚ್‌.ಕೆ.ಸತೀಶ್ ಅವರು ತಿಳಿಸಿದರು. 

ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿ ಮತ್ತು ಸಂಡೂರು ತಾಲ್ಲೂಕು ಆಡಳಿತ ಹಾಗೂ ತಾಲೂಕು ಸ್ವೀಪ್ ಸಮಿತಿ ವತಿಯಿಂದ ಶುಕ್ರವಾರ ಶ್ರೀಶೈಲೇಶ್ವರ  ಬಿಇಡಿ ತರಬೇತಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಸ್ಪೀಕಥಾನ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. 

ಪ್ರತಿಯೊಬ್ಬರು ಮತದಾನ ಮಾಡಬೇಕು. ಮತದಾನ ಎನ್ನುವುದು ಒಂದು ಪವಿತ್ರ ಕೆಲಸವಾಗಿದ್ದು, ಇದರಲ್ಲಿ ಪ್ರತಿಯೊಬ್ಬ ಅರ್ಹ ಮತದಾರರು ಪಾಲ್ಗೊಳ್ಳಬೇಕು ಎಂದರು. 

ತಾಲೂಕು ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿ ಹಾಗೂ ತಾಲೂಕು ಸ್ವೀಪ್ ನೋಡಲ್ ಅಧಿಕಾರಿ ಷಡಕ್ಷರಯ್ಯ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರಜ್ಞಾವಂತರೇ ಮತದಾನದಿಂದ ದೂರ ಉಳಿಯುತ್ತಿದ್ದು ಅವರಿಗೆ ತಿಳುವಳಿಕೆಯನ್ನು ಮೂಡಿಸಿ ಮತದಾನಕ್ಕೆ ಬರುವಂತೆ ಪ್ರೇರೇಪಿಸಲು ತಿಳಿಸಿದರು. 

ಸಂಡೂರು ತಾಲೂಕಿನಲ್ಲಿ ಮತದಾನ ಜಾಗೃತಿಗೆ ಸಂಬಂಧಿಸಿದಂತೆ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಎಲ್ಲ ಇಲಾಖೆಯ ಸಿಬ್ಬಂದಿ ಹಾಗೂ ಸಾರ್ವಜನಿಕರೆಲ್ಲರೂ ಸಹಕರಿಸಬೇಕು ಎಂದು ಕೋರಿದರು. 

ತಹಶೀಲ್ದಾರ ಅನಿಲ್ ಕುಮಾರ್ ಮಾತನಾಡಿದರು. ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ಐ.ಆರ್‌.ಅಕ್ಕಿ,  ಇಸಿಓ ಬಸವರಾಜ್ ಹಾಗೂ ಡಿಎಲ್‌ಎಂಟಿ ಕೊಟ್ರೇಶ್, ಟಿಎಲ್‌ಎಂಟಿ ಸುಭಾನ್ ಹಾಜರಿದ್ದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಸಾರ್ವಜನಿಕರು ಸ್ಪೀಕಥಾನ್ ಕಾರ್ಯಕ್ರಮದ ಆಯ್ದ ವಿಷಯದ ಬಗ್ಗೆ ಮಾತನಾಡಿದರು. ನಂತರ ಅಂತಿಮವಾಗಿ ಮೂರು ಜನರನ್ನು ಆರಿಸಿ ತಾಲ್ಲೂಕು ಹಂತದಿಂದ ಜಿಲ್ಲಾ ಹಂತಕ್ಕೆ ಆಯ್ಕೆ ಮಾಡಲಾಯಿತು. ಇದೇ ಸಂದರ್ಭದಲ್ಲಿ ಗೆದ್ದವರಿಗೆ ಬಹುಮಾನವನ್ನು ವಿತರಿಸಲಾಯಿತು.