ಮತದಾರರ ಪಟ್ಟಿ ಪರಿಷ್ಕರಣೆ; ಪ್ರತಿಯೊಬ್ಬ ನಾಗರಿಕನ ಮತ ಅಮೂಲ್ಯ : ತಹಶೀಲ್ದಾರ್ ಮಲ್ಲಿಕಾರ್ಜುನ ಹೆಗ್ಗನ್ನವರ

ಮತದಾರರ ಪಟ್ಟಿ ಪರಿಷ್ಕರಣೆ; ಪ್ರತಿಯೊಬ್ಬ ನಾಗರಿಕನ ಮತ ಅಮೂಲ್ಯ : ತಹಶೀಲ್ದಾರ್ ಮಲ್ಲಿಕಾರ್ಜುನ ಹೆಗ್ಗನ್ನವರ Voter list revision; every citizen's vote is invaluable: Tahsildar Mallikarjun Heggannavar

ಸವದತ್ತಿ 05 : ಪ್ರಜಾಪ್ರಭುತ್ವದ ಯಶಸ್ಸಿನಲ್ಲಿ ಪ್ರತಿಯೊಬ್ಬ ನಾಗರಿಕನ ಮತವು ಅತ್ಯಮೂಲ್ಯವಾಗಿದೆ. ಮತದಾನವು ಕೇವಲ ಸಂವಿಧಾನದತ್ತ ಹಕ್ಕು ಮಾತ್ರವಲ್ಲ, ದೇಶದ ಅಭಿವೃದ್ಧಿಯಲ್ಲಿ ಪ್ರತಿಯೊಬ್ಬರೂ ಪಾಲ್ಗೊಳ್ಳಬೇಕಾದ ಪ್ರಮುಖ ಜವಾಬ್ದಾರಿಯಾಗಿದೆ. ಯಾವುದೇ ಕಾರಣಕ್ಕೂ ಮತದಾರರು ತಮ್ಮ ಹಕ್ಕನ್ನು ಕಳೆದುಕೊಳ್ಳಬಾರದು ಎಂದು ತಹಶೀಲ್ದಾರ್ ಮಲ್ಲಿಕಾರ್ಜುನ ಹೆಗ್ಗನ್ನವರ ಕರೆ ನೀಡಿದರು. ಇಲ್ಲಿನ ಶಿವಬಸವ ನಗರದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಹಾಗೂ ಬೂತ್ ಮಟ್ಟದ ಅಧಿಕಾರಿಗಳು  ಮನೆ-ಮನೆಗೆ ಭೇಟಿ ನೀಡಿ ನಡೆಸುತ್ತಿರುವ ಸಮೀಕ್ಷಾ ಕಾರ್ಯದ ನೇತೃತ್ವ ವಹಿಸಿ ಅವರು ಮಾತನಾಡಿದರು.

ಮತದಾರರ ಪಟ್ಟಿಯಲ್ಲಿರುವ ದೋಷಗಳನ್ನು ಸರಿಪಡಿಸಲು ಮತ್ತು ಅರ್ಹ ಹೊಸ ಮತದಾರರನ್ನು ನೋಂದಾಯಿಸಲು ಅಧಿಕಾರಿಗಳು ಮನೆ-ಮನೆಗೆ ಭೇಟಿ ನೀಡುತ್ತಿದ್ದಾರೆ. ಈ ಸಂದರ್ಭದಲ್ಲಿ ಸಾರ್ವಜನಿಕರು ತಮ್ಮ ಹೆಸರು ಪಟ್ಟಿಯಲ್ಲಿರುವುದನ್ನು ಖಚಿತಪಡಿಸಿಕೊಳ್ಳಬೇಕು. ಒಂದು ವೇಳೆ ಹೆಸರು ಇಲ್ಲದಿದ್ದರೆ ಅಥವಾ ವಿಳಾಸ ಬದಲಾವಣೆಯಾಗಿದ್ದರೆ, ಸಂಬಂಧಪಟ್ಟ ಬೂತ್ ಮಟ್ಟದ ಅಧಿಕಾರಿಗಳ ಬಳಿ ನಿಗದಿತ ನಮೂನೆಯಲ್ಲಿ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿ ನೋಂದಾಯಿಸಿಕೊಳ್ಳಬೇಕು ಎಂದು ಅವರು ಕೋರಿದರು. ಎಸ್‌.ಎಮ್‌. ಮುದುಗಲ್ಲ, ಚಂದ್ರಶೇಖರ ಜೊತೆನ್ನವರ, ದೀಪಾ ಸಿಂದೋಗಿ, ಆರ್‌.ಎಲ್‌. ಹಿರೇಹೊಳ್ಳಿ, ಪ್ರಸಾದ ಅಂಬಿಗೇರ, ಸತೀಶ್ ಬಾಡಗಿ, ಗದಿಗ್ಯಪ್ಪ ಮುರಗಿ, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.