ವಿಜಯಪುರ ಜಿಲ್ಲೆಗೆ ಬಿಜೆಪಿ ಬರ ಅಧ್ಯಯನ ತಂಡದ ಭೇಟಿ

ವಿಜಯಪುರ 05: ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ನೇತೃತ್ವದ ಬಿಜೆಪಿ ಬರ ಅಧ್ಯಯನ ತಂಡ ಬುಧವಾರ ವಿಜಯಪುರ ತಾಲೂಕಿನ ತೊರವಿ, ತಾಜಪೂರ ಇನ್ನಿತರೆ ಭಾಗಗಳಿಗೆ ಭೇಟಿ ನೀಡಿ ಬರ ಪರಿಸ್ಥಿತಿಯನ್ನು ವೀಕ್ಷಣೆ ಮಾಡಿತು.

ತೊರವಿ ಗ್ರಾಮಕ್ಕೆ ಭೇಟಿ ನೀಡಿದ ಕೆ.ಎಸ್. ಈಶ್ವರಪ್ಪ ಅವರಿಗೆ ಎಲ್ಲ ಜಮೀನುಗಳಲ್ಲಿ ಒಣಗಿದ ಬೆಳೆಗಳು, ನೆಲಕಚ್ಚಿದ ಬೆಳೆಗಳು `ಬರ'ದ ಭೀಕರತೆಯ ಚಿತ್ರಣ ಕಣ್ಮುಂದೆ ಕಟ್ಟಿತು. 

ನೀರಿಲ್ಲದೇ ಒಣಗಿ ಹೋದ ಬೆಳೆಗಳು ರೈತನ ನೋವಿನ ಸ್ಥಿತಿಯನ್ನು ವಿವರಿಸುವಂತಿದ್ದವು.  ಒಣಗಿದ ಬೆಳೆಗಳು ಹಾಗೂ ಭೀಕರ ಬರದ ದೃಶ್ಯವನ್ನು ಕಂಡು ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರು ಮರುಗಿದರು.

ಬಿಜೆಪಿ ಬರ ಅಧ್ಯಯನ ತಂಡ ಹೊಲದಲ್ಲಿ ಪರಿಶೀಲನೆ ನಡೆಸುತ್ತಿದ್ದ ಸುದ್ದಿ ತಿಳಿದು ಪಕ್ಕದ ಜಮೀನುಗಳ ರೈತರು ಸಹ ಈಶ್ವರಪ್ಪ ಅವರ ಬಳಿಗೆ ಧಾವಿಸಿ ತಮ್ಮ ಅಳಲನ್ನು  ತೋಡಿಕೊಂಡರು.

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಶಾಸಕರಾದ ಎ.ಎಸ್. ಪಾಟೀಲ ನಡಹಳ್ಳಿ,  ಸೋಮನಗೌಡ ಪಾಟೀಲ ಸಾಸನೂರ, ಬಿಜೆಪಿ ಮುಖಂಡ ವಿಜಯಕುಮಾರ ಪಾಟೀಲ ಅವರು ಬರಗಾಲದಿಂದ ಈ ಭಾಗದ ರೈತರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಈಶ್ವರಪ್ಪ ಅವರಿಗೆ ಮನವರಿಕೆ ಮಾಡಿಕೊಟ್ಟರು.

ಒಣಗಿದ ಬೆಳೆಗಳನ್ನು ಕಂಡು ಮರುಕಪಟ್ಟ ಕೆ.ಎಸ್. ಈಶ್ವರಪ್ಪ ಸ್ಥಳದಲ್ಲಿದ್ದ ಬಿಜೆಪಿ ಶಾಸಕರಿಗೆ ಸ್ಪೀಕರ್ ಅವರ ಅನುಮತಿ ಪಡೆದುಕೊಂಡು ಈ ಭಾಗದಲ್ಲಿ ಒಣಗಿರುವ ಬೆಳೆಯನ್ನು ವಿಧಾನಸೌಧದಕ್ಕೆ ತರುವ ಪ್ರಯತ್ನ ಮಾಡಿ. ಈ ಭಾಗದ ಬರದ ಭೀಕರತೆಯನ್ನು ಈ ಬೆಳೆಗಳೇ ವಿವರಿಸುತ್ತವೆ, ಸಕರ್ಾರ ಕಣ್ಣಾದರೂ ತೆರೆಯಲಿ ಎಂದರು.

`ವಿಜಯಪುರ ಭಾಗದಲ್ಲಿ ಭೀಕರ ಬರ ಪರಿಸ್ಥಿತಿ ಎದುರಾಗಿದೆ. ಒಣಗಿದ ಬೆಳೆಗಳನ್ನು ತೆಗೆಯಲು ಸಹ ಕೂಲಿ ಕೊಡಲು ರೈತರ ಬಳಿ ದುಡ್ಡಿಲ್ಲ. ಅನ್ನದಾತನ ಸಂಕಷ್ಟಕ್ಕೆ ಸಕರ್ಾರ ಸ್ಪಂದಿಸಬೇಕು, ರೈತರ ವಿಷಯದಲ್ಲಿ ರಾಜಕಾರಣ ಬೇಡ, ಮುಖ್ಯಮಂತ್ರಿ ಕುಮಾರಸ್ವಾಮಿ, ಮಾಜಿ ಪ್ರಧಾನಿ ಎಚ್.ಡಿ. ದೇವೆಗೌಡ, ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಈ ಭಾಗಕ್ಕೆ ಭೇಟಿ ನೀಡಬೇಕು ಎಂದು ಒತ್ತಾಯಿಸಿದರು.

ಬಿಜೆಪಿ ಮುಖಂಡರಾದ ಸಂಗರಾಜ ದೇಸಾಯಿ, ಆರ್.ಎಸ್. ಪಾಟೀಲ, ಚಿದಾನಂದ ಚಲವಾದಿ, ರಾಜು ಬಿರಾದಾರ, ಶಿಲ್ಪಾ ಕುದರಗೊಂಡ ಮೊದಲಾದವರು ಪಾಲ್ಗೊಂಡಿದ್ದರು.