ಏಕೀಕೃತ ಭಾರತ ನಿರ್ಮಾಣದಲ್ಲಿ ವಲ್ಲಭಭಾಯಿ ಪಟೇಲ್ ಕೊಡುಗೆ ಸ್ಮರಣೀಯ: ಸಂತೋಷ ಬಂಡೆ

ಇಂಡಿ 31: ಪಟೇಲ್ ಅವರು ಮದ್ಯಪಾನ, ಅಸ್ಪೃಶ್ಯತೆ, ಜಾತಿ ತಾರತಮ್ಯದ ವಿರುದ್ಧ ಹೋರಾಟ ಮಾಡುತ್ತಾ, ಮಹಿಳಾ ವಿಮೋಚನೆಗಾಗಿ ವ್ಯಾಪಕವಾಗಿ ಕೆಲಸ ಮಾಡಿದ್ದು, ಅವರ ಆರ್ಥಿಕ ತತ್ವ್ವಶಾಸ್ತ್ರದ ತತ್ವಗಳಲ್ಲಿ ಸ್ವಾವಲಂಬನೆ ಬಹುಮುಖ್ಯವಾಗಿದೆ ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು. 

ಮಂಗಳವಾರ ತಾಲೂಕಿನ ಹಿರೇರೂಗಿ ಗ್ರಾಮದ ಯುಬಿಎಸ್ ಶಾಲೆಯಲ್ಲಿ ಹಮ್ಮಿಕೊಂಡ ಸರ್ದಾರ್ ವಲ್ಲಭಭಾಯಿ ಪಟೇಲ ಅವರ ಜಯಂತಿ ನಿಮಿತ್ತ ರಾಷ್ಟ್ರೀಯ ಏಕತಾ ದಿನವನ್ನು ಉದ್ದೇಶಿಸಿ ಅವರು ಮಾತನಾಡಿದರು. 

ಆಧುನಿಕ ಮತ್ತು ಏಕೀಕೃತ ಭಾರತವನ್ನು ನಿರ್ಮಿಸುವಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಅಮೂಲ್ಯ ಕೊಡುಗೆಯನ್ನು ಪ್ರತಿಯೊಬ್ಬ ಭಾರತೀಯನು ಸ್ಮರಿಸಬೇಕಾದ ಅಗತ್ಯವಿದೆ. ಪಟೇಲರು ಜಾತ್ಯಾತೀತ ರಾಷ್ಟ್ರ ಸ್ಥಾಪನೆಯ ಗುರಿ ಹೊಂದಿದ್ದರು ಎಂದು ಹೇಳಿದರು. 

ಶಿಕ್ಷಕ ಎಸ್‌.ಎಸ್‌. ಅರಬ ಮಾತನಾಡಿ, ಪಟೇಲರು ನಿಸ್ವಾರ್ಥ ನಾಯಕರಾಗಿದ್ದರು, ಅವರು ದೇಶದ ಹಿತಾಸಕ್ತಿಗಳನ್ನು ಎಲ್ಲಕ್ಕಿಂತ ಹೆಚ್ಚಾಗಿ ಇರಿಸಿಕೊಂಡು, ಏಕ ಮನಸ್ಸಿನ ಭಕ್ತಿಯಿಂದ ಭಾರತದ ಭವಿಷ್ಯವನ್ನು ರೂಪಿಸಿದರು ಎಂದು ಹೇಳಿದರು. 

ಮುಖ್ಯ ಶಿಕ್ಷಕ ಎ.ಎಂ. ಬೆದ್ರೇಕರ ಅಧ್ಯಕ್ಷತೆ ವಹಿಸಿ ಮಾತನಾಡಿ, ಮೂಲಭೂತ ಹಕ್ಕುಗಳು ಮತ್ತು ನಾಗರಿಕ ಸ್ವಾತಂತ್ರ್ಯಗಳ ರಕ್ಷಣೆಗೆ ಬದ್ಧವಾಗಿದ್ದ ಪಟೇಲರು ಕಾರ್ಮಿಕರಿಗೆ ಕನಿಷ್ಠ ವೇತನ ಮತ್ತು ಅಸ್ಪೃಶ್ಯತೆ ನಿವಾರಣೆಗೆ  ಆದ್ಯತೆ ನೀಡಿದ್ದರು ಎಂದು ಹೇಳಿದರು. 

ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಏಕತಾ ದಿನದ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಸೇವಾ ನಿವೃತ್ತಿ ಹೊಂದಿದ ಹಿರೇರೂಗಿ ಕೆಜಿಎಸ್ ಶಾಲೆಯ ಶಿಕ್ಷಕಿ ಎಂ.ಎಂ. ಪತ್ತಾರ ಅವರನ್ನು ಸನ್ಮಾನಿಸಲಾಯಿತು. ಕೆಜಿಎಸ್ ಮುಖ್ಯ ಶಿಕ್ಷಕಿ ವಿ.ವೈ. ಪತ್ತಾರ, ಶಿಕ್ಷಕರಾದ ಎಸ್‌.ಪಿ. ಪೂಜಾರಿ, ಎಸ್‌.ಎಂ. ಪಂಚಮುಖಿ ಸೇರಿದಂತೆ ಶಾಲಾ ಮಕ್ಕಳು ಭಾಗವಹಿಸಿದ್ದರು.