ಸರ್ವಕಾಲಿಕ ಸರ್ವಮಾನ್ಯ ಕವಿ ಡಾ. ಶಿವರಾಮ ಕಾರಂತರು - ಡಾ. ಬಿ. ಎಸ್‌. ಶಿವಕುಮಾರ್

The most respected poet of all time, Dr. Shivarama Karantaru - Dr. B. S. Shivakumar

ಲೋಕದರ್ಶನ ವರದಿ 

ಸರ್ವಕಾಲಿಕ ಸರ್ವಮಾನ್ಯ ಕವಿ ಡಾ. ಶಿವರಾಮ ಕಾರಂತರು - ಡಾ. ಬಿ. ಎಸ್‌. ಶಿವಕುಮಾರ್  

ಹಾವೇರಿ 21: ಹಲವು ಆಯಾಮಗಳಲ್ಲಿ ನಾಡಿನ ಕ್ಲಿಷ್ಟತೆಗಳನ್ನು ಸ್ಪಷ್ಟ ರೀತಿಯಲ್ಲಿ ಸಾಹಿತ್ಯದ ಮೂಲಕ ಬಡಿದೆಚ್ಚರಿಸಿದ ಅಜಾನುಬಾಹು ವ್ಯಕ್ತಿತ್ವದ ಡಾ. ಶಿವರಾಮ ಕಾರಂತರು ಸರ್ವಕಾಲಿಕ ಸರ್ವಮಾನ್ಯ ಕವಿಯಾಗಿದ್ದಾರೆ ಎಂದು ಆಂಧ್ರ​‍್ರದೇಶ ಕುಪ್ಪಂ ದ್ರಾವಿಡ ವಿಶ್ವವಿದ್ಯಾಲಯದ ತುಳು ಅಧ್ಯಯನ ಪೀಠದ ಪ್ರಾಧ್ಯಾಪಕ ಡಾ. ಬಿ. ಎಸ್‌. ಶಿವಕುಮಾರ್ ಅಭಿಪ್ರಾಯಪಟ್ಟರು.  

ಅವರು ನಗರದ ಪ್ರತಿಷ್ಠಿತ ಕೆ.ಎಲ್‌.ಇ.ಸಂಸ್ಥೆಯ ಗುದ್ಲೆಪ್ಪ ಹಳ್ಳಿಕೇರಿ ಮಹಾವಿದ್ಯಾಲಯದಲ್ಲಿ ಉಡುಪಿ ಡಾ. ಶಿವರಾಮ ಕಾರಂತ ಟ್ರಸ್ಟ್‌, ಶಿಗ್ಗಾಂವಿ ಗೌರಮ್ಮ ಬ. ಅಂಕಲಕೋಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಐಕ್ಯೂಎಸಿ ಹಾಗೂ ಕನ್ನಡ ವಿಭಾಗಗಳ ಜಂಟಿ ಆಯೋಜಕತ್ವದಲ್ಲಿ ಏರಿ​‍್ಡಸಿದ್ದ "ಡಾ. ಶಿವರಾಮ ಕಾರಂತರ ಬರಹಗಳು: ಸಮಕಾಲೀನ ಚಿಂತನೆ" ಕುರಿತ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.  

ಕಾರಂತರು ವೈಜ್ಞಾನಿಕ ಮತ್ತು ವೈಚಾರಿಕ ದೃಷ್ಟಿಕೋನವನ್ನಿಟ್ಟುಕೊಂಡು ಹದವಾಗಿ ಮೆದುವಾಗಿ ಕಾವ್ಯಗಳನ್ನು ರಚಿಸಿದ ಮಹಾನ್ ಕವಿ. ಕಡಲ ತೀರದಿಂದ ನಾಡಿನ ಓದುಗರ ಒಡಲಿಗೆ ಅಕ್ಷರದ ಸಾಗರವನ್ನೇ ಹರಿಸಿದ ಧೀಮಂತಿಕೆಯ ಚಿಂತಕರು. ಆಡು ಮುಟ್ಟದ ಸೊಪ್ಪಿಲ್ಲ ಕಾರಂತರು ಬರೆಯದ ಸಾಹಿತ್ಯ ಪ್ರಾಕಾರವಿಲ್ಲ ಎಂಬಂತೆ ಸಾಹಿತ್ಯದಲ್ಲಿ ಉತ್ತಮ ಉದಾತ್ತ ಕೃಷಿಗೈದು ಹೆಸರಾದವರು. ಸತತ 96 ವರ್ಷಗಳ ಪರ್ಯಂತ ಜೀವಿಸಿದ್ದ ಸಾಧಕ ಶಿರೋಮಣಿಯಂತಿದ್ದ ಕಾರಂತರು ಸಾಮಾಜಿಕ, ಶೈಕ್ಷಣಿಕ, ವೈಜ್ಞಾನಿಕ, ರಾಜಕೀಯ, ನಾಟಕ, ಸಿನಿಮಾ, ಪರಿಸರ, ಯಕ್ಷಗಾನ, ಪತ್ರಿಕೋದ್ಯಮ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಹೃದಯ ಶ್ರೀಮಂತಿಕೆ ಮೆರೆದವರು.  

ವಯಸ್ಸು ಏರಿದಂತೆಲ್ಲ ಜ್ಞಾನದ ಪಕ್ವತೆಯನ್ನು, ಫಲವತ್ತತೆಯನ್ನು ಹೆಚ್ಚಿಸಿದ ಕವಿಪುಂಗವರು. ಮಕ್ಕಳಿಂದ ಹಿಡಿದು ವಯೋವೃದ್ಧರವೆಗಿನ ಬದುಕಿನ ಪಯಣದ ಚಿತ್ರಣಗಳನ್ನು ಅಕ್ಷರಗಳ ತೋರಣದಲ್ಲಿ ಕಟ್ಟಿದ ವಿಶಾಲ ಮನೋಭಾವದ ಕವಿನೇತಾರರೆನಿಸಿದ್ದಾರೆ. ಅವರ ಸ್ಮರಣೆ ನಿರಂತರವಾಗಲೆಂಬ ಉದ್ದೇಶದಿಂದ ಬದುಕು-ಬರಹಗಳ ವಿಚಾರವಾಗಿ ಕಾರ್ಯಕ್ರಮವನ್ನು ಕಟ್ಟಿಕೊಂಡು ಬಂದಿರುವುದು ಸಂತೋಷದ ವಿಚಾರವಾಗಿದೆ. ಇನ್ನಷ್ಟು ವಿಸ್ತೃತ ರೀತಿಯ ಸಂಕಿರಣಗಳು ಅಲ್ಲಲ್ಲಿ ಏರ​‍್ಪಟಟು ಕನ್ನಡ ನಾಡಿನ ಜ್ಞಾನಪೀಠದ ರತ್ನ ಎಲ್ಲೆಡೆಗೂ ಹೊಳೆಯಲೆಂದರು.  

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಡಾ. ಶಿವರಾಮ ಕಾರಂತ ಟ್ರಸ್ಟ್‌ನ ಅಧ್ಯಕ್ಷ ಡಾ. ಗಣನಾಥ ಶೆಟ್ಟಿ ಎಕ್ಕಾರು ಮಾತನಾಡಿ ಎಲ್ಲಾ ಕಾಲಕ್ಕೂ, ಎಲ್ಲಾ ಸಂದರ್ಭಕ್ಕೂ ಅನ್ವಯವಾಗುವ ಕವಿ ಡಾ. ಶಿವರಾಮ ಕಾರಂತರಾಗಿದ್ದಾರೆ. ಸಣ್ಣ ಹಳ್ಳಿಯಲ್ಲಿ ಹುಟ್ಟಿ ಬೆಳೆದ ಸಾಹಿತ್ಯ ಪ್ರತಿಭೆ ಇಂದು ವಿಶ್ವಮಟ್ಟದಲ್ಲಿ ಬೆಳೆದು ನಿಂತು ಕನ್ನಡ ನಾಡಿನ ಕೀರ್ತಿ ಪತಾಕೆಯನ್ನು ಮುಗಿಲೆತ್ತರಕ್ಕೆ ಹಾರಿಸಿರುವುದು ನಮ್ಮೆಲ್ಲರ ಹೆಮ್ಮೆಯಾಗಿದೆ. ಕಡಲತೀರದ ಭಾರ್ಗವ, ನಡೆದಾಡುವ ವಿಶ್ವಕೋಶವೆಂದೇ ಪ್ರಸಿದ್ಧಿ ಪಡೆದು ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕವನ್ನು ಕವಿ, ಕಾದಂಬರಿಗಾರ, ಅನುವಾದಕ, ನಾಟಕಕಾರರಾಗಿ ಶ್ರೀಮಂತಗೊಳಿಸುವಲ್ಲಿ ಅವರ ಕೊಡುಗೆ ಅಪಾರವಾದುದು. ದಮನಿತರ ಧ್ವನಿಯಾಗಿ ಗಟ್ಟಿತನದ ದಿಟ್ಟತನದ ಸಾಹಿತ್ಯದ ಉಜ್ವಲತೆಗೆ ಕಾರಣವಾಗಿರುವ ಅವರು ಈ ನಾಡು ಕಂಡ ಅದ್ಭುತ ಚಮತ್ಕಾರಿ ವ್ಯಕ್ತಿತ್ವ ಎಂದು ಬಣ್ಣಿಸಿದರು.  

ಟ್ರಸ್ಟ್‌ನ ಸದಸ್ಯ ಕಾರ್ಯದರ್ಶಿ ಪೂರ್ಣಿಮಾ ಮಾತನಾಡಿ ಕನ್ನಡ ಮಣ್ಣಿನ ಶ್ರೇಷ್ಠತೆಯನ್ನು ನಾಡಿಗೆ ಪರಿಚಯಿಸಿದ ಹಿರಿಮೆ ಡಾ. ಶಿವರಾಮ ಕಾರಂತರದು. ಅವರು ಹೆಣೆದ ನಾಟಕಗಳು ಪರಿವರ್ತನೆಯ ಬದುಕಿಗೆ ನಾಂದಿ ಹಾಡಿರುವುದು ಸಾಹಿತ್ಯ ಆಳ ಮತ್ತು ಹರವನ್ನು ತಿಳಿಸುತ್ತದೆ. ಪ್ರಸ್ತುತ ಕಾಲಮಾನಕ್ಕೆ ಅವರ ಕಾದಂಬರಿಗಳು ಬದಲಾವಣೆಯನ್ನುಂಟು ಮಾಡುವಲ್ಲಿ ಸಹಕಾರಿಯಾಗಿವೆ ಎಂದರು.  

ಅಧ್ಯಕ್ಷತೆ ವಹಿಸಿದ್ದ ಬೆಳಗಾವಿ ಕೆ.ಎಲ್‌.ಇ.ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ಎಂ. ಸಿ. ಕೊಳ್ಳಿ ಮಾತನಾಡಿ ಕಾರಂತರು ಕೆಳಮಟ್ಟದಿಂದ ಬೆಳೆದು ನಿಂತ ಹೆಮ್ಮರ. ಅವರ ಬದುಕೇ ಒಂದು ಅದ್ಭುತ ಕಾವ್ಯವಿದ್ದಂತೆ. ಹಲವು ಆಯಾಮಾಗಳನ್ನು ಅವರನ್ನು ಪರಿಚಯಿಸುತ್ತ ಹೋದಂತೆಲ್ಲ ವಿಸ್ತಾರ ಹೆಚ್ಚಾಗುತ್ತಲೇ ಹೋಗುತ್ತದೆ. ಇಂದಿನ ವಿದ್ಯಾರ್ಥಿಗಳಿಗೆ ಅವರ ಪರಿಚಯ ಈ ವಿಚಾರ ಸಂಕಿರಣದ ಮೂಲಕ ನಡೆಯುತ್ತಿರುವುದು ಸೂಕ್ತವಾಗಿದೆ ಎಂದರು.  

ವೇದಿಕೆಯಲ್ಲಿ ಕಾಲೇಜು ಸ್ಥಾನಿಕ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಡಾ. ಎಸ್‌. ಎಲ್‌. ಬಾಲೇಹೊಸೂರು, ಮಂಡಳಿಯ ಸದಸ್ಯ ಜೆ. ಎಸ್‌. ಅರಣಿ, ಕುಂದಾಪುರ ಬಂಡಾರ್‌ಕಾರ್ಸ್‌ ಕಾಲೇಜಿನ ನಿವೃತ್ತ ಪ್ರಾಧ್ಯಾಪಕಿ ಡಾ. ರೇಖಾ ಬನ್ನಾಡಿ ಉಪಸ್ಥಿತರಿದ್ದರು. ಆರಂಭದಲ್ಲಿ ಜಿ. ಎಚ್‌. ಕಾಲೇಜಿನ ಪ್ರಾಚಾರ್ಯೆ ಡಾ. ಸಂಧ್ಯಾ ಆರ್‌. ಕುಲಕರ್ಣಿ ಸ್ವಾಗತಿಸಿದರು. ಶಿಗ್ಗಾಂವಿ ಸ.ಪ್ರ.ದ. ಕಾಲೇಜಿನ ಪ್ರಾಂಶುಪಾಲ ಡಾ. ಎ. ಸಿ. ವಾಲಿ ಪ್ರಾಸ್ತಾವಿಕ ಮಾತನಾಡಿದರು. ವಿಭಾಗದ ಮುಖ್ಯಸ್ಥ ಡಾ. ಜೆ. ಎಫ್‌. ಹೊಸಮನಿ ಪರಿಚಯಿಸಿದರು. ಶ್ರೀದೇವಿ ದೊಡ್ಡಮನಿ ನಿರ್ವಹಿಸಿದರು. ಡಾ. ಆನಂದ ಇಂದೂರ ಹಾಗೂ ಡಾ. ಶಮಂತಕುಮಾರ್ ಕೆ. ಎಸ್‌. ವಂದಿಸಿದರು. ಇದೇ ಸಂದರ್ಭದಲ್ಲಿ ಹಲವು ಸಂಶೋಧನಾತ್ಮಕ ಲೇಖನಮಾಲೆಗಳುಳ್ಳ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು. ವಿವಿಧ ಕಾಲೇಜುಗಳ ಉಪನ್ಯಾಸಕರು, ಸಂಶೋಧನಾರ್ಥಿಗಳು, ವಿದ್ಯಾರ್ಥಿಗಳು ಹಾಗೂ ಅಭಿಮಾನಿಗಳು ಪಾಲ್ಗೊಂಡಿದ್ದರು.