ಬಾಲ್ಯ ವಿವಾಹ ತಡೆಗೆ ಕಿಶೋರಿಯರ ಸಂಕಲ್ಪ

ಬಾಲ್ಯ ವಿವಾಹ ತಡೆಗೆ ಕಿಶೋರಿಯರ ಸಂಕಲ್ಪ Teenage girls' resolve to stop child marriage

ಲೋಕದರ್ಶನ ವರದಿ 

ಬೆಳಗಾವಿ 19: ಸಮಾಜದಲ್ಲಿ ಆರೋಗ್ಯಕರ ವಾತಾವರಣ ನಿರ್ಮಿಸಿ, ಲಿಂಗ ಸಮಾನತೆ ಸಾಧಿಸಲು ಬಾಲ್ಯವಿವಾಹ ತಡೆ, ಮಕ್ಕಳ ರಕ್ಷಣೆ ಹಾಗೂ ವರದಕ್ಷಿಣೆಯಂತಹ ಸಾಮಾಜಿಕ ಪಿಡುಗುಗಳನ್ನು ನಿರ್ಮೂಲನೆ ಮಾಡುವುದು ಅತ್ಯಗತ್ಯ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕವಿತಾ ಹೊಸಮನಿ ಅಭಿಪ್ರಾಯಪಟ್ಟರು.  

ನಗರದ ದೇವರಾಜ ಅರಸು ಕಾಲನಿಯಲ್ಲಿರುವ ಮಹಿಳಾ ಕಲ್ಯಾಣ ಸಂಸ್ಥೆಯ ಶಕ್ತಿ ಸದನ ಕೇಂದ್ರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು.  

ಬಾಲ್ಯವಿವಾಹವು ಮಕ್ಕಳ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದ್ದು, ಹೆಣ್ಣು ಮಕ್ಕಳ ಆರೋಗ್ಯ, ಶಿಕ್ಷಣ ಹಾಗೂ ಭವಿಷ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಅನಾಥ, ಸಂಕಷ್ಟದಲ್ಲಿರುವ ಅಥವಾ ಬಾಲ್ಯವಿವಾಹದ ಅಪಾಯದಲ್ಲಿರುವ ಮಕ್ಕಳನ್ನು ತಕ್ಷಣವೇ ರಕ್ಷಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಹೇಳಿದರು.  

ಕಾರ್ಯಕ್ರಮದಲ್ಲಿ ಶಕ್ತಿ ಸದನದ ಪೂರ್ಣಿಮಾ ಸುಳೇಭಾವಿಮಠ ಮಾತನಾಡಿ, ವರದಕ್ಷಿಣೆ ಪದ್ಧತಿಯು ಮಹಿಳೆಯರ ಮೇಲಿನ ದೌರ್ಜನ್ಯ ಹಾಗೂ ಕೌಟುಂಬಿಕ ಹಿಂಸಾಚಾರಕ್ಕೆ ಪ್ರಮುಖ ಕಾರಣವಾಗಿದೆ ಎಂದು ತಿಳಿಸಿದರು.

ವರದಕ್ಷಿಣೆ ನಿಷೇಧ ಕಾಯ್ದೆಯ ಪ್ರಕಾರ ವರದಕ್ಷಿಣೆ ನೀಡುವುದು ಹಾಗೂ ಸ್ವೀಕರಿಸುವುದು ಎರಡೂ ಕಾನೂನುಬಾಹಿರ ಮತ್ತು ಶಿಕ್ಷಾರ್ಹ ಅಪರಾಧಗಳಾಗಿವೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಸುಜಾತಾ ಬಾಕರ್ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.