ಸುಶ್ರುತ ವಿಜ್ಞಾನ ಪ್ರಯೋಗಾಲಯಕ್ಕೆ ಚಾಲನೆ; ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೆ ಒತ್ತು

ಸುಶ್ರುತ ವಿಜ್ಞಾನ ಪ್ರಯೋಗಾಲಯಕ್ಕೆ ಚಾಲನೆ; ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೆ ಒತ್ತು  Sushruta Science Laboratory inaugurated; emphasis on the all-round development of students

ಲೋಕದರ್ಶನ ವರದಿ

ಮಹಾಲಿಂಗಪುರ 15: ನಗರದ ಪಿಎಂಶ್ರೀ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ನೂತನವಾಗಿ ನಿರ್ಮಿಸಲಾದ ಸುಶ್ರುತ ವಿಜ್ಞಾನ ಪ್ರಯೋಗಾಲಯ ಸೇರಿದಂತೆ ವಿವಿಧ ಶೈಕ್ಷಣಿಕ, ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಬುಧವಾರ ಶಾಸಕ ಸಿದ್ದು ಸವದಿ ಚಾಲನೆ ನೀಡಿದರು.  

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಶಾಸಕ ಸಿದ್ದು ಸವದಿ, ಪ್ರಯೋಗಾಲಯವನ್ನು ಉದ್ಘಾಟಿಸಿದ ಬಳಿಕ ಶಾಲೆಯ ವಿವಿಧ ಸೌಲಭ್ಯಗಳನ್ನು ವೀಕ್ಷಿಸಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.  

ಈ ಸಂದರ್ಭದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಕೇವಲ ಪಠ್ಯ ಶಿಕ್ಷಣಕ್ಕೆ ಸೀಮಿತರಾಗದೆ ವಿಜ್ಞಾನ, ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳು ಹಾಗೂ ನಾಯಕತ್ವ ಕೌಶಲಗಳನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.  

“ಇಂತಹ ವಿಜ್ಞಾನ ಪ್ರಯೋಗಾಲಯಗಳು ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಲು ನೆರವಾಗುತ್ತವೆ. ಶಾಲೆಗಳು ಗುಣಮಟ್ಟದ ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳ ಸರ್ವಾಂಗೀಣ ವ್ಯಕ್ತಿತ್ವ ವಿಕಸನಕ್ಕೂ ಆದ್ಯತೆ ನೀಡಬೇಕು,” ಎಂದು ಹೇಳಿದರು.  ಇದೇ ವೇಳೆ ಶಾಲೆಯ ವತಿಯಿಂದ ಶಾಸಕ ಸಿದ್ದು ಸವದಿ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.  

ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರಾದ ಶಂಕರಗೌಡ ಪಾಟೀಲ, ಶೇಖರ್ ಅಂಗಡಿ, ಭೀಮಶಿ ಗೌಂಡಿ, ಶಿವಾನಂದ ಅಂಗಡಿ, ವಿಜಯ ಸಬಕಾಳೆ, ಅರ್ಜುನ ಮೊಪಗಾರ, ಚೆನ್ನಪ್ಪ ಪಟ್ಟಣಶೆಟ್ಟಿ, ಮಹೇಶ್ ಜಿದ್ದಿಮನಿ, ತಿಪ್ಪಣ್ಣ ಬಂಡಿವಡ್ಡರ, ಸಂಜಯ ರಾಠೋಡ್ ಹಾಗೂ ಈರ​‍್ಪ ಬೀಳಗಿ ಉಪಸ್ಥಿತರಿದ್ದರು.  

ಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಕ-ಶಿಕ್ಷಕಿಯರು, ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಪೋಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಶಾಲೆಯಲ್ಲಿ ಆರಂಭಗೊಂಡಿರುವ ಸುಶ್ರುತ ವಿಜ್ಞಾನ ಪ್ರಯೋಗಾಲಯ ಹಾಗೂ ವಿವಿಧ ಶೈಕ್ಷಣಿಕ ಚಟುವಟಿಕೆಗಳು ವಿದ್ಯಾರ್ಥಿಗಳ ಜ್ಞಾನವೃದ್ಧಿ ಮತ್ತು ಸಮಗ್ರ ಬೆಳವಣಿಗೆಗೆ ಪೂರಕವಾಗಲಿವೆ ಎಂಬ ಅಭಿಪ್ರಾಯ ವ್ಯಕ್ತವಾಯಿತು.