ಉದ್ಯಮಶೀಲತೆಯತ್ತ ವಿದ್ಯಾರ್ಥಿಗಳ ಹೆಜ್ಜೆ

ಉದ್ಯಮಶೀಲತೆಯತ್ತ ವಿದ್ಯಾರ್ಥಿಗಳ ಹೆಜ್ಜೆ Students' steps towards entrepreneurship

ಲೋಕದರ್ಶನ ವರದಿ 

ಗದಗ 11 : ಸಿಡಾಕ್ ಸಂಸ್ಥೆ ಕಳೆದ ಎರಡು ದಶಕಗಳಿಂದ ಉದ್ಯಮಶೀಲತಾ ತರಬೇತಿ ಮತ್ತು ಕಾರ್ಯಾಗಾರಗಳನ್ನು ನಡೆಸಿಕೊಂಡು ಬರುತ್ತಿದ್ದು, ವಿದ್ಯಾರ್ಥಿಗಳು ಇಂತಹ ತರಬೇತಿಗಳ ಸದುಪಯೋಗ ಪಡೆದುಕೊಂಡು ಸ್ವಯಂ ಉದ್ಯೋಗ ಮತ್ತು ಉದ್ಯಮಶೀಲತೆಯತ್ತ ಹೆಜ್ಜೆ ಇಡಬೇಕೆಂದು ಗದಗ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಎನ್‌.ಎಸ್‌. ಕುಲಕರ್ಣಿ ಹೇಳಿದರು. ಅವರು ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ, ಧಾರವಾಡದ ಕರ್ನಾಟಕ ಉದ್ಯಮಶೀಲತಾಭಿವೃದ್ಧಿ ಕೇಂದ್ರ   ಹುಲಕೋಟಿಯ   ಕೆ.ಎಚ್‌. ಪಾಟೀಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಯೋಗದಲ್ಲಿ ಆಯೋಜಿಸಿದ ಮೂರು ದಿನಗಳ ಉದ್ಯಮಶೀಲತಾ ತಿಳುವಳಿಕೆ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡುತ್ತ, ವಿದ್ಯಾರ್ಥಿಗಳು ಪದವಿ ಅಧ್ಯಯನದ ಜೊತೆಗೆ ಸ್ವಯಂ ಉದ್ಯಮಶೀಲತೆಯ ಜ್ಞಾನವನ್ನೂ ಸಂಪಾದಿಸಬೇಕೆಂದು ಕರೆ ನೀಡಿದರು.

ನಾಡಗೀತೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಕಾಲೇಜಿನ ಉದ್ಯೋಗ ಮಾಹಿತಿ ಕೋಶದ ಸಂಯೋಜಕ ಡಾ. ಶ್ರೀಶವಿಠ್ಠಲ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಿಡಾಕ್ ಗದಗ ಕೇಂದ್ರದ ತರಬೇತುದಾರ ಮಂಜುನಾಥ ಮುಳಗುಂದ ಗಣ್ಯಮಾನ್ಯರು ಮತ್ತು ವಿದ್ಯಾರ್ಥಿಗಳನ್ನು ಸ್ವಾಗತಿಸಿದರು. ಮುಖ್ಯ ಅತಿಥಿ ಹುಲಕೋಟಿಯ ರೂರಲ್ ಎಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸೈನ್ಸ್‌ ವಿಭಾಗದ ಮುಖ್ಯಸ್ಥ ಡಾ. ಶರಣಬಸವರಾಜ ಅಂಗಡಿ ಮಾತನಾಡುತ್ತ, ವಿದ್ಯಾರ್ಥಿ ಜೀವನದಲ್ಲಿ ನಿರಂತರ ಪ್ರಯತ್ನ, ಶ್ರದ್ಧೆ, ನಿಷ್ಠೆ, ಪ್ರಾಮಾಣಿಕತೆ ಅಗತ್ಯವಾಗಿದ್ದು, ಇವುಗಳನ್ನು ಮೈಗೂಡಿಸಿಕೊಂಡರೆ ಏನನ್ನಾದರೂ ಸಾಧಿಸಬಹುದೆಂದರು. ಸಿಡಾಕ್ ಸಂಸ್ಥೆಯ ಧಾರವಾಡ ವಲಯದ ಜಂಟಿ ನಿರ್ದೇಶಕ ಚಂದ್ರಶೇಖರ ಅಂಗಡಿ ಅವರು ಜೀವನದಲ್ಲಿ ಎದುರಾಗುವ ಕಷ್ಟ-ಸವಾಲುಗಳನ್ನು ಹಲವು ಮಜಲುಗಳಲ್ಲಿ ಮೆಟ್ಟಿ ನಿಂತು ಸಾಧನೆಯ ಉತ್ತುಂಗಕ್ಕೇರಿದ ಸಾಧಕರ ಉದಾಹರಣೆಗಳನ್ನು ನೀಡುವ ಮೂಲಕ ವಿದ್ಯಾರ್ಥಿಗಳನ್ನು ಪ್ರೇರೇಪಿಸಿದರು.