ವಿದ್ಯಾರ್ಥಿಗಳ ಆರೋಗ್ಯ ರಕ್ಷಣೆಗೆ ಸಮಾಜದ ಸಹಕಾರ ಅಗತ್ಯ: ಸಿ.ಪಿ.ಐ. ಆರ್‌.ಆರ್‌. ಪಾಟೀಲ

ವಿದ್ಯಾರ್ಥಿಗಳ ಆರೋಗ್ಯ ರಕ್ಷಣೆಗೆ ಸಮಾಜದ ಸಹಕಾರ ಅಗತ್ಯ: ಸಿ.ಪಿ.ಐ. ಆರ್‌.ಆರ್‌. ಪಾಟೀಲ  Societal cooperation is essential for safeguarding students' health: CPI R.R. Patil

ಲೋಕದರ್ಶನ ವರದಿ 

ಮಹಾಲಿಂಗಪುರ 14: ಸರ್ಕಾರಿ ಶಾಲೆಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳ ಆರೋಗ್ಯ ಕಾಪಾಡಲು ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಅತ್ಯಗತ್ಯವಾಗಿದೆ. ಸಮಾಜದ ದಾನಿಗಳು ಹಾಗೂ ಸೇವಾ ಸಂಸ್ಥೆಗಳು ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಕೈಜೋಡಿಸಿದಾಗ ಮಾತ್ರ ಮೂಲಸೌಕರ್ಯಗಳನ್ನು ಇನ್ನಷ್ಟು ಉತ್ತಮಗೊಳಿಸಲು ಸಾಧ್ಯವಾಗುತ್ತದೆ ಎಂದು  ರಬಕವಿ - ಬನಹಟ್ಟಿ ಕ್ಷೇತ್ರದ ಸಿ.ಪಿ.ಐ. ಆರ್‌.ಆರ್‌. ಪಾಟೀಲ ಹೇಳಿದರು.  

ಪಟ್ಟಣದ ಕೆಂಗೇರಿ ಮಡ್ಡಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಗುಡ್ವಿಲ್ ಟ್ರಸ್ಟ್‌ ವತಿಯಿಂದ ಅಳವಡಿಸಲಾದ ವಾಟರ್ ಫಿಲ್ಟರ್ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳ ಆರೋಗ್ಯವೇ ರಾಷ್ಟ್ರದ ಭವಿಷ್ಯದ ಭದ್ರ ಬುನಾದಿಯಾಗಿದೆ. ವಿಶೇಷವಾಗಿ ಗ್ರಾಮೀಣ ಹಾಗೂ ಬಡ ಕುಟುಂಬಗಳ ಮಕ್ಕಳು ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಹಿನ್ನೆಲೆಯಲ್ಲಿ ಅವರಿಗೆ ಶುದ್ಧ ಕುಡಿಯುವ ನೀರಿನಂತಹ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದು ಸಮಾಜದ ಜವಾಬ್ದಾರಿಯಾಗಿದೆ ಎಂದು ಹೇಳಿದರು.  

ಗುಡ್ವಿಲ್ ಟ್ರಸ್ಟ್‌ ಅಧ್ಯಕ್ಷ ಸುನೀಲ ಕದಪಟ್ಟಿ ಮಾತನಾಡಿ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವ ಉದ್ದೇಶದಿಂದ ಈ ವರ್ಷ ಸಂಗಾನಟ್ಟಿ ಗ್ರಾಮದ ಎರಡು ಹಾಗೂ ಮಹಾಲಿಂಗಪುರದ ಮೂರು ಸರ್ಕಾರಿ ಶಾಲೆಗಳು ಸೇರಿ ಒಟ್ಟು ಐದು ಶಾಲೆಗಳಿಗೆ 50 ಲೀಟರ್ ಸಾಮರ್ಥ್ಯದ ವಾಟರ್ ಫಿಲ್ಟರ್ಗಳನ್ನು ವಿತರಿಸಲಾಗಿದೆ ಎಂದು ತಿಳಿಸಿದರು.  

ಗ್ರಾಮೀಣ ಹಾಗೂ ಬಡ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣದ ಜೊತೆಗೆ ಆರೋಗ್ಯಕರ ವಾತಾವರಣ ಕಲ್ಪಿಸುವುದು ಟ್ರಸ್ಟ್ನ ಪ್ರಮುಖ ಧ್ಯೇಯವಾಗಿದೆ. ಇಂದಿನ ವಿದ್ಯಾರ್ಥಿಗಳೇ ದೇಶದ ಭವಿಷ್ಯವಾಗಿರುವುದರಿಂದ ಅವರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಲು ಸಮಾಜದ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಅವರು ಕರೆ ನೀಡಿದರು.  ಕಾರ್ಯಕ್ರಮದಲ್ಲಿ ಸಮಾಜಸೇವೆಯಲ್ಲಿ ತೊಡಗಿರುವ ಗಣ್ಯರನ್ನು ಸನ್ಮಾನಿಸಲಾಯಿತು.  

ಈ ಸಂದರ್ಭದಲ್ಲಿ ಗುಡ್ವಿಲ್ ಟ್ರಸ್ಟ್‌ ಸದಸ್ಯರಾದ ಅರ್ಚನಾ ಕದಪಟ್ಟಿ, ಶಂಭುಲಿಂಗ ನಕಾಟಿ, ಗಗನ ಕದಪಟ್ಟಿ, ಜೆ.ಜೆ. ಜಕ್ಕಣ್ಣವರ, ಗಣೇಶ್ ನಧಾಫ್, ಎಸ್‌.ಡಿ.ಎಂ.ಸಿ. ಅಧ್ಯಕ್ಷ ಪರಶುರಾಮ ಅಮರಾವತಿ, ಪ್ರಾಚಾರ್ಯ ಕೆ.ಎನ್‌. ಕಾಳವ್ವಗೋಳ, ಸಿದ್ದಪ್ಪ ರಾವೋಜಿ, ರೇಖಾ ಬ್ಯಾಕೋಡ, ರೇಖಾ ಅಲಿಬಾದಿ ಸೇರಿದಂತೆ ಶಾಲೆಯ ಶಿಕ್ಷಕರು, ಪಾಲಕರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.  ಜೆ.ಎಸ್‌. ಹಳ್ಳದ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.