ಸಾಮಾಜಿಕ ನಾಟಕಗಳು ಸಮಾಜಕ್ಕೆ ಒಳ್ಳೆ ಸಂದೇಶ ನೀಡುತ್ತವೆ: ಮಾಗಣಗೇರಾ

Social dramas give a good message to society: Maganagera

ಸಿಂದಗಿ 11: ಗ್ರಾಮೀಣ ಪ್ರದೇಶಗಳಲ್ಲಿ ಜಾತ್ರೆಗಳಲ್ಲಿ ಹಮ್ಮಿಕೊಳ್ಳುವ ಸಾಮಾಜಿಕ ನಾಟಕಗಳು ಮನರಂಜನೆ ಜೊತೆಗೆ ಸಮಾಜಕ್ಕೆ ಒಳ್ಳೆ ಸಂದೇಶ ನೀಡುತ್ತವೆ ಎಂದು ಬಿಜೆಪಿ ಯುವ ಮುಖಂಡ ಶ್ರೀಶೈಲಗೌಡ ಬಿರಾದಾರ ಮಾಗಣಗೇರಾ ಹೇಳಿದರು. 

ತಾಲೂಕಿನ ಕೆರೂರ ಗ್ರಾಮದಲ್ಲಿ ಶ್ರೀ ಶಿವಲಿಂಗೇಶ್ವರ ಜಾತ್ರಾ ಮಹೋತ್ಸವದ ನಿಮಿತ್ತ ಹಮ್ಮಿಕೊಂಡ ಸಾಮಾಜಿಕ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. 

ಪ್ರಸ್ತುತ ಮನುಷ್ಯ ಮಾನಸಿಕ ಸಂಕಷ್ಟಗಳಿಗೆ ಸಿಕ್ಕಿ ತಳಮಳಗಳಿಗೆ ಒಳಗಾಗಿದ್ದು, ಅದರಿಂದ ಹೊರಬರಲು ಪ್ರಯತ್ನಿಸಿದರೂ ಸಾಧ್ಯವಾಗುತ್ತಿಲ್ಲ. ಸಾಮಾಜಿಕ ಅಸಮತೋಲನದ ಬಗ್ಗೆ, ಮನುಷ್ಯನನ್ನು ಮನಷ್ಯನನ್ನಾಗಿ ನೋಡದ ಮನುಷ್ಯ ಸಂಬಂಧಗಳ ಬಗ್ಗೆ, ಒಟ್ಟು ಜನ ಸಮುದಾಯಗಳ ಲಯಗಳನ್ನು ಒಟ್ಟುಗೂಡಿಸುವ ಬೆಳಕಿನ ಕಡೆಗೆ ಯೋಚಿಸಿ, ಕೋಮಲ ಹೃದಯಗಳಿಗೆ ಹಿಂಸೆಯ ವಿಚಾರಗಳನ್ನು ಬಿತ್ತುವ ಭಯೋತ್ಪಾದನೆ, ಭ್ರಷ್ಟಾಚಾರ, ಅತ್ಯಾಚಾರ, ಅನಾಚಾರ, ದರ​‍್-ದೌರ್ಜನ್ಯ, ಕೊಲೆ-ಕಗ್ಗೊಲೆ, ಜಾತೀಯತೆ, ಮತೀಯತೆಗಳ ಕರಾಳ ಕದಂಬ ಬಾಹುಗಳಲ್ಲಿ ಸಾಮಾನ್ಯರು ಸಿಕ್ಕಿ ತತ್ತರಿಸಿ ಹೋಗಿದ್ದಾರೆ. ಅವರನ್ನು ಕಾಪಾಡುವ ಹೊಣೆಗಾರಿಕೆ ಜವಾಬ್ದಾರಿ ನಮ್ಮದಾಗಿದೆ ಎನ್ನುವ ಸಂದೇಶದ ಇಂದು ಸಾಮಾಜಿಕ ನಾಟಕಗಳು ನಿಜವಾದ ಮನಸ್ಸುಗಳೊಂದಿಗೆ ಮಾತನಾಡುತ್ತದೆ ಎಂದರು. 

ಯಂಕಂಚಿಯ ಹಿರೇಮಠದ ಶ್ರೀ ಅಭಿನವ ರುದ್ರಮುನಿ ಶಿವಾಚಾರ್ಯರು ಮಾತನಾಡಿ, ಜಾತ್ರೆಗಳಲ್ಲಿ ನಡೆಯುವ ಸಾಮಾಜಿಕ ನಾಟಕಗಳು ಮೌಲ್ಯಾಧಾರಿತ ನಾಟಕಗಳಾಗಿರಬೇಕು. ನಾಟಕ ಪ್ರದರ್ಶನದಿಂದ ಸಮಾಜದಲ್ಲಿ ಒಳ್ಳೆ ಬದಲಾವಣೆ ತರುವಂತಿರಬೇಕು. ಮಠ-ಮಂದಿರಗಳು ಹಮ್ಮಿಕೊಳ್ಳುವ ಕಾರ್ಯಕ್ರಮಗಳಲ್ಲಿ ತಮ್ಮ ಮಕ್ಕಳೊಂದಿಗೆ ಭಾಗವಹಿಸಬೇಕು. ಮಕ್ಕಳಿಗೆ ಮೌಲ್ಯಗಳನ್ನು ಕಲಿಸಬೇಕು ಎಂದು ಹೇಳಿದರು. 

ಸಾಮಾಜಿಕ ನಾಟಕಗಳು ಉತ್ತಮ ಸಮಾಜ ಕಟ್ಟೋಣವೆಂಬ ಸಂದೇಶವನ್ನು ನೀಡುತ್ತವೆ. ಆದ್ದರಿಂದ ಜಾತ್ರೆಗಳಲ್ಲಿ ನಡೆಯುವ ಸಾಮಾಜಿಕ ನಾಟಕಗಳಿಗೆ ಸಾರ್ವಜನಿಕರು ಪ್ರೋತ್ಸಾಹ ನೀಡಬೇಕು. ನಾಟಕಗಳಿಂದ ತಿಳಿದ ಒಳ್ಳೆ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳ ಬೇಕು. ನಾಟಕಗಳು ಸಮಾಜದ ಅಂಕುಡೊಂಕು ತಿದ್ದುತ್ತವೆ. ನಾಟಕಗಳು ನಮ್ಮ ಜೀವನದ ದಿಕ್ಕನ್ನೇ ಬದಲಾಯಿಸುತ್ತವೆ ಎಂದು ಹೇಳಿದರು. 

ನಿಂಗನಗೌಡ ಪಾಟೀಲ, ಪೀರು ಕೆರೂರ, ರವಿ ನಾಯ್ಕೋಡಿ, ಸಿದ್ದಯ್ಯಸ್ವಾಮಿ ಹಿರೇಮಠ, ಶಿವಗೊಂಡಪ್ಪಗೌಡ ಪಾಟೀಲ, ಸಂಗು ಬಿರಾದಾರ, ಅವ್ವಣ್ಣ ಕೆರೂರ ರವರು ಸೇರಿದಂತೆ ಮುಖಂಡರು, ಗ್ರಾಮಸ್ಥರು ಉಪಸ್ಥಿತರಿದ್ದರು.