ಕೌಶಲ್ಯ ಮೇಳ: ವಿದ್ಯಾರ್ಥಿಗಳ ಪ್ರತಿಭೆಗೆ ವೇದಿಕೆ
Skill Fair: A Platform for Students' Talent
ಲೋಕದರ್ಶನ ವರದಿ
ಧಾರವಾಡ 08: ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಶೈಕ್ಷಣಿಕ ಜ್ಞಾನದ ಜೊತೆಗೆ ಕೌಶಲ್ಯ, ಸಂವಹನ ಸಾಮರ್ಥ್ಯ, ಸಮಸ್ಯೆ ಪರಿಹರಿಸುವ ಶಕ್ತಿ, ತಾಂತ್ರಿಕ ಜ್ಞಾನ ಹಾಗೂ ಆತ್ಮವಿಶ್ವಾಸವೂ ಅಗತ್ಯ ಎಂದು ಮಜೇದಿಯಾ ಫೌಂಡೇಶನ್ ಅಧ್ಯಕ್ಷೆ ಶ್ರೀಮತಿ ನಂದಿನಿ ಕಶ್ಯಪ್ ಹೇಳಿದರು.
ಧಾರವಾಡದ ಜೆ.ಎಸ್.ಎಸ್. ಮಂಜುನಾಥೇಶ್ವರ ಸಿಬಿಎಸ್‌ಇ ಶಾಲೆಯಲ್ಲಿ ಆಯೋಜಿಸಿದ್ದ ತಾಂತ್ರಿಕ ವಸ್ತು ಪ್ರದರ್ಶನ ಹಾಗೂ ಕೌಶಲ್ಯ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮಕ್ಕಳನ್ನು ಕೇವಲ ಪಠ್ಯಕ್ಕೆ ಸೀಮಿತಗೊಳಿಸದೆ, ಹೊಸ ವಿಚಾರಗಳತ್ತ ಆಸಕ್ತಿ ಬೆಳೆಸುವ ಪ್ರಯತ್ನ ನಡೆಯಬೇಕು. ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಸಹಕಾರಿಯಾಗುತ್ತವೆ ಎಂದರು.
ಜೆ.ಎಸ್.ಎಸ್. ಐಟಿಐ ಕಾಲೇಜಿನ ಪ್ರಾಚಾರ್ಯ ಮಹಾವೀರ ಉಪಾಧ್ಯಾಯ ಮಾತನಾಡಿ, ವಿದ್ಯಾರ್ಥಿಗಳಿಗೆ ಸಾಂಪ್ರದಾಯಿಕ ಶಿಕ್ಷಣದ ಜೊತೆಗೆ ಪ್ರೌಢಶಾಲಾ ಹಂತದಲ್ಲೇ ವಿವಿಧ ಕೌಶಲ್ಯಗಳ ತರಬೇತಿ ನೀಡುವುದರಿಂದ ಭವಿಷ್ಯದ ತಾಂತ್ರಿಕತೆ ಹಾಗೂ ಉದ್ಯೋಗ ಕ್ಷೇತ್ರಕ್ಕೆ ಅಗತ್ಯವಾದ ಸಾಮರ್ಥ್ಯ ಬೆಳೆಸಬಹುದು ಎಂದರು.
ಶಾಲೆಯ ಪ್ರಾಚಾರ್ಯೆ ಶ್ರೀಮತಿ ರಜಿನಿ ಪಾಟೀಲ ಮಾತನಾಡಿ, 21ನೇ ಶತಮಾನದ ಕೌಶಲ್ಯಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ ಉದ್ದೇಶದಿಂದ ಮೇಳ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಮೇಳದಲ್ಲಿ ಹುಬ್ಬಳ್ಳಿ-ಧಾರವಾಡದ 20 ಶಾಲೆಗಳ ವಿದ್ಯಾರ್ಥಿಗಳು ವಿವಿಧ ತಂಡಗಳಲ್ಲಿ ಭಾಗವಹಿಸಿದ್ದರು. ಯಂತ್ರೋಪಕರಣಗಳ ಕಾರ್ಯನಿರ್ವಹಣೆ, ಕಲೆ-ಕರಕುಶಲ ವಸ್ತುಗಳು, ಕೃತಕ ಬುದ್ಧಿಮತ್ತೆ ಆಧಾರಿತ ಯೋಜನೆಗಳು ಸೇರಿದಂತೆ ಹಲವು ಮಾದರಿಗಳನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದರು. ಸುಕೃತಿ ಎನ್‌ಜಿಒ ವತಿಯಿಂದ ಮಹಿಳೆಯರು ತಯಾರಿಸಿದ ವಸ್ತುಗಳ ಮಾರಾಟಕ್ಕೂ ವ್ಯವಸ್ಥೆ ಮಾಡಲಾಗಿತ್ತು.
500ಕ್ಕೂ ಹೆಚ್ಚು ಪೋಷಕರು ಹಾಗೂ ವಿದ್ಯಾರ್ಥಿಗಳು ಮೇಳ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಕೊನೆಯಲ್ಲಿ ವಿಜೇತ ತಂಡಗಳಿಗೆ ಬಹುಮಾನ ಹಾಗೂ ಪ್ರಮಾಣಪತ್ರಗಳನ್ನು, ಭಾಗವಹಿಸಿದ ಎಲ್ಲರಿಗೂ ಪ್ರಮಾಣಪತ್ರಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಕೃಷಿ ವಿಶ್ವವಿದ್ಯಾಲಯದ ಡಾ. ಜಯತೀರ್ಥ ದಿವಾನ್, ಕೆ.ಎಚ್.ಕೆ. ಮಹಾವಿದ್ಯಾಲಯದ ಶಿವಾನಂದ ಶಂಭೋಜಿ ಸೇರಿದಂತೆ ವಿವಿಧ ಸಂಸ್ಥೆಗಳ ಮುಖ್ಯಸ್ಥರು, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
ಉತ್ತರ ವಲಯ ಪೊಲೀಸರಿಂದ ರೌಡಿ ನಿಗ್ರಹಕ್ಕೆ ಕಠಿಣ ಕ್ರಮ : 23 ರೌಡಿಗಳ ಗಡಿಪಾರು
ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಪತಿ ಹತ್ಯೆ; ಕಾಣೆಯಾದ ನಾಟಕ, 6 ತಿಂಗಳ ಬಳಿಕ ಪ್ರಕರಣ ಬಯಲು
6.85 ಕೆ.ಜಿ. ಗಾಂಜಾ ಮಿಶ್ರಿತ ಚಾಕಲೇಟ್ ಪ್ಯಾಕೆಟ್ಗಳ ವಶ: ಓರ್ವ ಆರೋಪಿ ಬಂಧನ
ಕಳೆದುಹೋಗಿದ್ದ 57 ಮೊಬೈಲ್ ಸಿಇಐಆರ್ ಪೋರ್ಟಲ್ ಮೂಲಕ ಪತ್ತೆ: ವಾರಸುದಾರರಿಗೆ ವಾಪಸ್
ಬಹುಕೋಟಿ ವಂಚನೆ : ನೀಲಣ್ಣವರ, ಪತ್ನಿ ಸೇರಿ ಆಪ್ತರ ಕಚೇರಿ, ನಿವಾಸಗಳ ಮೇಲೆ ಇಡಿ ದಾಳಿ
ಬಡೆಕೊಳ್ಳಮಠದ ಬಳಿ ಅಪಘಾತ ತಡೆಗೆ ತಾತ್ಕಾಲಿಕ ಕ್ರಮ: ಮಳೆಗಾಲ ಬಳಿಕ ಶಾಶ್ವತ ಕಾಮಗಾರಿ 