ವೈದ್ಯ ಡಾ.ಪರಮಾನಂದ ಹೊಸಪೇಟೆ ವಿರುದ್ಧ ಕ್ರಮಕ್ಕೆ ಶೇಡಶ್ಯಾಳ ಆಗ್ರಹ

ರಾಯಬಾಗ 25: ತಾಲೂಕಿನ ಹಾರೂಗೇರಿ ಖಾಸಗಿ ಆಸ್ಪತ್ರೆ ವೈದ್ಯ ಡಾ.ಪರಮಾನಂದ ಹೊಸಪೇಟೆ ಹಣ ತೆಗೆದುಕೊಂಡು ಆರೋಪಿತರಿಗೆ ಸುಳ್ಳು ವೈದ್ಯಕೀಯ ಪ್ರಮಾಣ ಪತ್ರ ನೀಡಿ ವೃತ್ತಿಯಲ್ಲಿ ದುರ್ನಡತೆ ತೋರುತ್ತಿದ್ದು, ಇವರ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕೆಂದು ಮುಗಳಖೋಡದ ಕುಮಾರ ಶ್ರೀಮಂತ ಶೇಡಶ್ಯಾಳ ಆಗ್ರಹಿಸಿದ್ದಾರೆ.  

ಗುರುವಾರ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಾ.ಹೊಸಪೇಟೆಯವರು ಬಹಳಷ್ಟು ಪ್ರಕರಣಗಳಲ್ಲಿ ಆರೋಪಿತರಿಗೆ ಸಹಾಯವಾಗುವ ಉದ್ದೇಶದಿಂದ ಹಣ ಪಡೆದು ಸುಳ್ಳು ಪ್ರಮಾಣಪತ್ರಗಳನ್ನು, ಸುಳ್ಳು ಚಿಕಿತ್ಸೆ ದಾಖಲೆಗಳನ್ನು ನೀಡುತ್ತಿದ್ದಾರೆ. ಅವರು ವೈದ್ಯಕೀಯ ವೃತ್ತಿಯಲ್ಲಿ ದುರ್ನಡತೆ ತೋರುತ್ತಿರುವುದರಿಂದ ಅವರ ವಿರುದ್ಧ ವೈದ್ಯಕೀಯ ಇಲಾಖೆ ತನಿಖೆ ನಡೆಸಿ, ಅವರ ವೃತ್ತಿ ಪ್ರಮಾಣಪತ್ರವನ್ನು ರದ್ದುಪಡಿಸಬೇಕೆಂದು ಒತ್ತಾಯಿಸಿದರು.  

ಆರೋಪಿತರಿಗೆ ಅನುಕೂಲವಾಗಲು ಸುಳ್ಳು ವೈದ್ಯಕೀಯ ಪ್ರಮಾಣ ಪತ್ರಗಳನ್ನು ನೀಡಿ ಅಮಾಯಕ ಬಡ ನಿರಪರಾಧಿ ಜನರಿಗೆ ಬಹಳ ತೊಂದರೆಯಾಗುತ್ತಿದ್ದು, ಇಂತಹ ವೈದ್ಯನ ವಿರುದ್ಧ ಕಠಿಣ ಕಾನೂನು ಕ್ರಮಕೈಗೊಂಡು, ಅವರು ವೈದ್ಯಕೀಯ ವೃತ್ತಿ ಮಾಡದಂತೆ ತಡೆಯಬೇಕೆಂದು ಆಗ್ರಹಿಸಿದರು.  

ಪ್ರಕರಣ ಹಿನ್ನಲೆ: ಮುಗಳಖೋಡದ ಕುಮಾರ ಶೇಡಶ್ಯಾಳ ಇತನ ಸಹೋದರಿ ತನ್ನ ಗಂಡನೊಂದಿಗೆ ಹಿಡಕಲ್ ಗ್ರಾಮದಲ್ಲಿ ನೆಲೆಸಿದ್ದಾರೆ. ಕುಮಾರ ಇತನ ಭಾವ ದೀಲೀಪ ನಾಯಿಕ ಹಾಗೂ ಆತನ ಸಹೋದರರ ಮಧ್ಯೆ ಜಮೀನ ವಿವಾದ ಇದ್ದು, ಅವರ ಮಧ್ಯೆ ತಂಟೆಯಾಗಿದ್ದರಿಂದ ಕುಮಾರನ ಸಹೋದರಿ ಮತ್ತು ಭಾವ ಇವರಿಗೆ ಗಾಯವಾಗಿದ್ದು, ಇವರು ಆರೋಪಿತರ ವಿರುದ್ಧ ಹಾರೂಗೇರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಆರೋಪಿತರು ಸಹಿತ ತಮಗೆ ಪಿರ್ಯಾದಿದಾರರು ಹೊಡೆದಿದ್ದಾರೆ ಎಂದು ಸುಳ್ಳು ಪ್ರಕರಣ ದಾಖಲಿಸಲು ಹಾರೂಗೇರಿ ಖಾಸಗಿ ಆಸ್ಪತ್ರೆ ವೈದ್ಯ ಡಾ.ಪರಮಾನಂದ ಹೊಸಪೇಟೆ ಇವರಿಗೆ ಹಣ ನೀಡಿ ಖೊಟ್ಟಿ ವೈದ್ಯಕೀಯ ಪ್ರಮಾಣ ಪತ್ರ ತಯಾರಿಸಿ, ಪೊಲೀಸ್ ಠಾಣೆಗೆ ದೂರು ದಾಖಲಿಸಲು ಹೋದ ಸಂದರ್ಭದಲ್ಲಿ ಇವರ ಎಲ್ಲ ನಡೆ ಸಿಸಿ ಕ್ಯಾಮೆರಾದಲ್ಲಿ ದಾಖಲ ಆಗಿದ್ದು ತಿಳಿದು ಬಂದಿದೆ. ಖಾಸಗಿ ಆಸ್ಪತ್ರೆ ವೈದ್ಯ ಡಾ.ಹೊಸಪೇಟೆ ಅವರು ಇಂತಹ ನೂರಾರು ಸುಳ್ಳು ವೈದ್ಯಕೀಯ ಪ್ರಮಾಣ ಪತ್ರಗಳನ್ನು ನೀಡಿದ್ದರಿಂದ, ಅಮಾಯಕ, ಬಡ ಜನರು ಸುಳ್ಳು ಕೇಸಿನಲ್ಲಿ ಸಿಲುಕಿಕೊಂಡಿರುವುದು ಬೆಳಕಿಗೆ ಬಂದಿದೆ.  

ಸುದ್ದಿಗೋಷ್ಠಿಯಲ್ಲಿ ವಕೀಲ ಆರ್‌.ಎಸ್‌.ಶಿರಗಾಂವೆ ಇದ್ದರು.