ನಾಲ್ಕು ಪತ್ರಿಕೆಗಳು ಯಶಸ್ವಿ ಮುಕ್ತಾಯ: ಎರಡು ಪತ್ರಿಕೆಗಳನ್ನು ದೈರ್ಯದಿಂದ ಎದುರಿಸಿ
ಚಿಕ್ಕೋಡಿ, 29 : ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಎಂಟು ವಲಯದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಶಾಂತಿ ಹಾಗೂ ಸುಗಮವಾಗಿ ನಡೆದಿದ್ದು, ಈಗಾಗಲೇ ನಾಲ್ಕು ವಿಷಯಗಳ ಪರೀಕ್ಷೆ ಯಶಸ್ವಿಯಾಗಿ ಮುಕ್ತಾಯಗೊಂಡಿವೆ. ಮುಂದಿನ ಎರಡು ಪರೀಕ್ಷೆಗಳನ್ನು ವಿದ್ಯಾರ್ಥಿಗಳು ದೈರ್ಯದಿಂದ ಎದುರಿಸಬೇಕು ಎಂದು ಚಿಕ್ಕೋಡಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಆರ್.ಎಸ್.ಸೀತಾರಾಮು ಹೇಳಿದರು.
ಶನಿವಾರ ಶೈಕ್ಷಣಿಕ ಜಿಲ್ಲಾ ವ್ಯಾಪ್ತಿಯ ವಿವಿಧ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿದ ಬಳಿಕ ಅವರು ಪತ್ರಿಕಾ ಪ್ರಕಟಣೆಯಲ್ಲಿ ಈ ವಿಷಯ ತಿಳಿಸಿದ್ದಾರೆ. ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ವ್ಯಾಪ್ತಿಯ ಅಥಣಿ, ಚಿಕ್ಕೋಡಿ, ನಿಪ್ಪಾಣಿ, ಕಾಗವಾಡ, ರಾಯಬಾಗ, ಮೂಡಲಗಿ,ಗೋಕಾಕ ಮತ್ತು ಹುಕ್ಕೇರಿ ತಾಲೂಕಿನ ಎಂಟು ವಲಯದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಪಾರದರ್ಶಕವಾಗಿ ನಡೆದಿವೆ. ವಿದ್ಯಾರ್ಥಿಗಳು ಪರೀಕ್ಷೆಗೆ ಗೈರಾಗದೆ ಪರೀಕ್ಷೆಗೆ ಕುಳಿತಕೊಳ್ಳಬೇಕು, ಪರೀಕ್ಷೆ ಬರೆಯುವ ಮಕ್ಕಳು ಸಮಯಕ್ಕೆ ಸರಿಯಾಗಿ ಪರೀಕ್ಷಾ ಕೇಂದ್ರಕ್ಕೆ ಆಗಮೀಸಬೇಕು ಎಂದರು.
ಶೈಕ್ಷಣಿಕ ಜಿಲ್ಲೆಯ ವ್ಯಾಪ್ತಿಯಲ್ಲಿ ಶನಿವಾರ ನಡೆದ ಸಮಾಜ ವಿಜ್ಞಾನ ಪರೀಕ್ಷೆಗೆ ಸುಮಾರು 44354 ವಿದ್ಯಾರ್ಥಿಗಳ ಪೈಕಿ 43722 ವಿದ್ಯಾರ್ಥಿಗಳು ಪರೀಕ್ಷೆ ಹಾಜರಾಗಿದ್ದಾರೆ. 632 ವಿದ್ಯಾರ್ಥಿಗಳು ಗೈರಾಗಿದ್ದಾರೆ. ಶೈಕ್ಷಣಿಕ ಜಿಲ್ಲೆಯ 130 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆದಿವೆ. ಶನಿವಾರ ಸಮಾಜ-ವಿಜ್ಞಾನ ಪರೀಕ್ಷೆಗೆ ಅಥಣಿ ವಲಯದಲ್ಲಿ 66, ನಿಪ್ಪಾಣಿ ವಲಯದಲ್ಲಿ 86, ಚಿಕ್ಕೋಡಿ ವಲಯದಲ್ಲಿ 81, ಗೋಕಾಕ ವಲಯದಲ್ಲಿ 44, ಹುಕ್ಕೇರಿ ವಲಯದಲ್ಲಿ 133, ಕಾಗವಾಡ ವಲಯದಲ್ಲಿ 23, ಮೂಡಲಗಿ ವಲಯದಲ್ಲಿ 86, ರಾಯಬಾಗ ವಲಯದಲ್ಲಿ 113 ಮಕ್ಕಳು ಸೇರಿ ಒಟ್ಟು 632 ಮಕ್ಕಳು ಗೈರಾಗಿದ್ದಾರೆ ಎಂದು ತಿಳಿಸಿದರು.