20ರಂದು ರವಿ ಪೂಜಾರಿ ಜನ್ಮದಿನ ಅತ್ಯಂತ ಸರಳವಾಗಿ ಆಚರಣೆ: ದೀಪಕ ಬುರ್ಲಿ

ಅಥಣಿ 18: ಸಾಮಾಜಿಕ ಕಾರ್ಯಕರ್ತ, ಉದ್ಯಮಿ, ಕನ್ನಡ ಪರ ಹೋರಾಟಗಾರ ರವಿ ಪೂಜಾರಿ ಇವರ 41 ನೇ ಜನ್ಮ ದಿನವನ್ನು ಸಾಮಾಜಿಕ ಮತ್ತು ಸೇವಾ ಕಾರ್ಯಗಳಿಗೆ ಚಾಲನೆ ನೀಡುವ ಮೂಲಕ ಅತ್ಯಂತ ಸರಳವಾಗಿ ಇದೇ ಮಾರ್ಚ 20 ರಂದು ಆದರ್ಶ ನಗರದ ಆರ್‌.ಎಸ್‌.ಪಿ ಸಭಾಂಗಣದಲ್ಲಿ ಜರುಗಿಸಲಾಗುವುದು ಎಂದು ಪ್ರವೀಣ ಶೆಟ್ಟಿ ಬಣದ ಕರವೇ ತಾಲೂಕಾ ಅಧ್ಯಕ್ಷ ದೀಪಕ ಬುರ್ಲಿ ತಿಳಿಸಿದರು.  

ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಅದ್ದೂರಿ ಆಚರಣೆಯನ್ನು ಕೈ ಬಿಡಲಾಗಿದೆ ಆದರೆ ಪ್ರತಿ ವರ್ಷದಂತೆ ಮುಂಜಾನೆ  ಗೋ ಶಾಲೆಗೆ ಭೇಟಿ ನೀಡಿ ಮೇವು ವಿತರಣೆ, ಸರಕಾರಿ ಆಸ್ಪತ್ರೆಯಲ್ಲಿ ಬಾಣಂತಿಯರಿಗೆ ಸೀರೆ,  ಹಾಲು, ಹಣ್ಣು ವಿತರಣೆ ಸೇರಿದಂತೆ ಅನೇಕ ಸಾಮಾಜಿಕ, ಸೇವಾ ಕಾರ್ಯಗಳಿಗೆ ಚಾಲನೆ ನೀಡಲಾಗುವುದು ಎಂದ ಅವರು ಅದೇ ದಿನ ಸಾಮಾಜಿಕ ಮತ್ತು ರಚನಾತ್ಮಕ ಕಾರ್ಯಗಳಿಗಾಗಿ ಆರ್‌.ಎಸ್‌.ಪಿ ಮೀಟಿಂಗ ಹಾಲ್ ನ್ನು ಕೂಡ ಗಣ್ಯರಿಂದ ಉದ್ಘಾಟಿಸಲಾಗುವುದು ಎಂದು ತಿಳಿಸಿದರು.  

ಉದ್ಯಮಿ ರವಿ ಪೂಜಾರಿ ಮಾತನಾಡಿ, ಸರಳವಾಗಿ ಆಚರಿಸುತ್ತಿರುವ ನನ್ನ ಜನ್ಮ ದಿನದ ಕಾರ್ಯಕ್ರಮದ ಸಾನಿಧ್ಯವನ್ನು ಹಣಮಾಪುರದ ಶ್ರೀ ಸಿದ್ಧಯೋಗಿ ಅಮರೇಶ್ವರ ಮಹಾರಾಜರು, ಅಥಣಿ ಶೆಟ್ಟರ ಮಠದ ಶ್ರೀ ಮರುಳಸಿದ್ಧ ಸ್ವಾಮೀಜಿ ವಹಿಸುವರು. ಕಾರ್ಯಕ್ರಮದ ಉದ್ಘಾಟನೆಯನ್ನು ಮಾಜಿ ಸಚಿವ ರಮೇಶ ಜಾರಕಿಹೊಳಿ ಮತ್ತು ಆರ್‌.ಎಸ್‌.ಪಿ ಮೀಟಿಂಗ ಹಾಲ್ ನ್ನು ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಉದ್ಘಾಟಿಸುವರು ಎಂದು ತಿಳಿಸಿದರು.  

ವಿಶೇಷ ಆವ್ಹಾನಿತರಾಗಿ ಮಾಜಿ ಶಾಸಕರಾದ ಮಹೇಶ ಕುಮಠಳ್ಳಿ, ಶ್ರೀಮಂತ ಪಾಟೀಲ, ಪಿ.ರಾಜೀವ್ ಮತ್ತು ಮುಖ್ಯ ಅತಿಥಿಗಳಾಗಿ ಧುರೀಣರಾದ ಸಿದ್ದಪ್ಪ ಮುದಕಣ್ಣವರ, ಅಪ್ಪಾಸಾಹೇಬ ಅವತಾಡೆ, ಉಮೇಶರಾವ ಬಂಟೋಡಕರ, ಪ್ರಭಾಕರ ಚವ್ಹಾಣ, ಅನೀಲರಾವ ದೇಶಪಾಂಡೆ, ಸತ್ಯಪ್ಪ ಬಾಗೆಣ್ಣವರ, ರಾಜೇಂದ್ರ ಐಹೊಳೆ, ಗೀರೀಶ ಬುಟಾಳಿ, ಸಂತೋಷ ಕಕಮರಿ, ಮಹಾದೇವ ಮಡಿವಾಳ, ಅಶೋಕ ಯಲ್ಲಡಗಿ ಸೇರಿದಂತೆ ಅನೇಕ ಗಣ್ಯರು ಅತಿಥಿಗಳಾಗಿ ಆಗಮಿಸಲಿದ್ದಾರೆ ಮತ್ತು ಇದೇ ಸಮಯದಲ್ಲಿ ರಸ ಮಂಜರಿ ಕಾರ್ಯಕ್ರಮ ಹಮ್ಮಿಕೊಳ್ಖಲಾಗಿದೆ ಎಂದು ತಿಳಿಸಿದರು.  

ಪ್ರಕಾಶ ಹಿಡಕಲ್, ಸಿದ್ದಪ್ಪ ಕುಂಬಾರ, ರಮೇಶ ಪೂಜಾರಿ, ಆದಿತ್ಯ ಪವಾರ, ಆನಂದ ಹಡಿಗನಾಳ ಉಪಸ್ಥಿತರಿದ್ದರು.