ರಾಚಪ್ಪ ಹಡಪದರ ಹೋರಾಟದ ಬದುಕು ಸ್ಮರಣೀಯ: ಈರಣ್ಣ ಚಿಕ್ಕಬೆಳ್ಳಿಕಟ್ಟಿ

ರಾಚಪ್ಪ ಹಡಪದರ ಹೋರಾಟದ ಬದುಕು ಸ್ಮರಣೀಯ: ಈರಣ್ಣ ಚಿಕ್ಕಬೆಳ್ಳಿಕಟ್ಟಿ Rachappa Hadapada's life of struggle is memorable: Veeranna Chikkabellikatti

ಲೋಕದರ್ಶನ ವರದಿ 

 ಧಾರವಾಡ 14 : ಸಾಮಾಜಿಕ ನ್ಯಾಯಕ್ಕಾಗಿ ಜೀವನವೀಡೀ ಹೋರಾಟ ನಡೆಸಿದ ದಿವಂಗತ ರಾಚಪ್ಪ ಹಡಪದ ಅವರು ಧಾರವಾಡದ ಎಲ್ಲ ಜನಪರ ಹೋರಾಟಗಳಿಗೆ ಧ್ವನಿಯಾಗಿದ್ದರು ಎಂದು ನ್ಯಾಯವಾದಿ ಈರಣ್ಣ ಚಿಕ್ಕಬೆಳ್ಳಿಕಟ್ಟಿ ಹೇಳಿದರು.  

ಕರ್ನಾಟಕ ವಿದ್ಯಾವರ್ಧಕ ಸಂಘ ಹಾಗೂ ಹಿರಿಯ ಸಮಾಜವಾದಿ ದಿ. ರಾಚಪ್ಪ ಹಡಪದ ದತ್ತಿ ಅಂಗವಾಗಿ ಜು.13ರಂದು ಆಯೋಜಿಸಿದ್ದ ‘ರಾಚಪ್ಪ ಹಡಪದ ಅವರ ಜೀವನ ಮತ್ತು ಸಾಧನೆ’ ಕುರಿತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.  

ರಾಚಪ್ಪ ಹಡಪದ ಅವರು ಡಾ. ರಾಮ ಮನೋಹರ ಲೋಹಿಯಾ, ಶಾಂತವೇರಿ ಗೋಪಾಲಗೌಡ ಹಾಗೂ ಜಯಪ್ರಕಾಶ್ ನಾರಾಯಣ ಅವರ ವಿಚಾರಗಳಿಂದ ಪ್ರಭಾವಿತರಾಗಿ ಸಾಮಾಜಿಕ ನ್ಯಾಯ, ರೈತರು ಹಾಗೂ ಕಾರ್ಮಿಕರ ಹಕ್ಕುಗಳಿಗಾಗಿ ನಿರಂತರ ಹೋರಾಟ ನಡೆಸಿದ ಸಮಾಜವಾದಿಯಾಗಿದ್ದರು. ಧಾರವಾಡದಲ್ಲಿದ್ದ ಅವರ ಸಮತಾ ಸಲೂನ್ ಜನಪರ ಚರ್ಚೆಗಳ ಕೇಂದ್ರವಾಗಿತ್ತು. ಸರಳ ಜೀವನ ನಡೆಸಿದ ಅವರು ಸ್ವಾಭಿಮಾನವನ್ನು ಎಂದಿಗೂ ಬಿಟ್ಟುಕೊಡಲಿಲ್ಲ ಎಂದು ತಿಳಿಸಿದರು.  

ರಾಚಪ್ಪ ಹಡಪದ ಅವರ ವ್ಯಕ್ತಿತ್ವ ಅತ್ಯಂತ ಆಕರ್ಷಕವಾಗಿತ್ತು. ಹೋರಾಟಗಾರರಾಗಿದ್ದರೂ ಸ್ವಂತ ಮನೆ ಹೊಂದಿರಲಿಲ್ಲ. ಪ್ರಶಸ್ತಿ ಅಥವಾ ಲಾಭಕ್ಕಾಗಿ ಅವರು ಎಂದಿಗೂ ಪ್ರಯತ್ನಿಸಲಿಲ್ಲ. ದೇಶದ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಸೆರೆವಾಸ ಅನುಭವಿಸಿದ್ದರೂ ತಮ್ಮ ಹೋರಾಟವನ್ನು ನಿಲ್ಲಿಸಲಿಲ್ಲ. ಕವಿವ ಸಂಘದ ಗೌರವ ಉಪಾಧ್ಯಕ್ಷರಾಗಿ ಸ್ಮರಣೀಯ ಸೇವೆ ಸಲ್ಲಿಸಿದ್ದರು ಎಂದು ಹೇಳಿದರು.  

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಮಾತನಾಡಿ, ರಾಚಪ್ಪ ಹಡಪದ ಅವರು ಅನ್ಯಾಯದ ವಿರುದ್ಧ ಹೋರಾಡಿದ ನಿಷ್ಠಾವಂತ ಸಮಾಜಸೇವಕರಾಗಿದ್ದು, ಅವರ ಆದರ್ಶಗಳು ಇಂದಿಗೂ ಪ್ರಸ್ತುತವಾಗಿವೆ ಎಂದರು.  

ಕಾರ್ಯಕ್ರಮದಲ್ಲಿ ಸಮಾಜಸೇವಕ ನಗ್ಗಿಕೇರಿ ನಿಂಗಪ್ಪ ಕುಡುವಕ್ಕಲಿಗರ ಅವರನ್ನು ದತ್ತಿ ಪರವಾಗಿ ಸನ್ಮಾನಿಸಲಾಯಿತು. ವೇದಿಕೆಯಲ್ಲಿ ದತ್ತಿಯ ದಾನಿ ರವಿರಾಜ ಹಡಪದ ಉಪಸ್ಥಿತರಿದ್ದರು.  ಶಿವಾನಂದ ಭಾವಿಕಟ್ಟಿ ಸ್ವಾಗತಿಸಿದರು. ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೀರಣ್ಣ ಒಡ್ಡೀನ ಕಾರ್ಯಕ್ರಮ ನಿರ್ವಹಿಸಿದರು. ಡಾ. ಜಿನದತ್ತ ಎ. ಹಡಗಲಿ ವಂದಿಸಿದರು.  

ಕಾರ್ಯಕ್ರಮದಲ್ಲಿ ಬಸವಪ್ರಭು ಹೊಸಕೇರಿ, ಸತೀಶ ತುರಮರಿ, ಮಲ್ಲಿಕಾರ್ಜುನ ಹಡಪದ, ಬಿ.ಎಚ್‌. ಕೋಟಿಗೌಡ್ರ, ಬಸವರಾಜ ಪಟ್ಟಣ, ಎಂ.ಕೆ. ಬಿರಾದಾರ, ಹೊಸಮನಿ ಸೇರಿದಂತೆ ರಾಚಪ್ಪ ಹಡಪದ ಅವರ ಕುಟುಂಬದವರು, ಅಭಿಮಾನಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.