ಪಂ. ಗುರುರಾಜಾಚಾರ್ಯ ಗುಡಿಯವರ ಕಾರ್ಯ ಅಭಿನಂದನಾರ್ಹ

ಭಾಗವತ ಸೇವಾ ಸಮರ​‍್ಣ ಮತ್ತು ಶ್ರೀಗಳ ಷಷ್ಟಬ್ದಿ ಸಮಾರಂಭದಲ್ಲಿ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ  

ಅಥಣಿ 07: ಸಾವಿರಾರು ಭಕ್ತರ ಮನೆ, ಮನೆಗೆ ಮತ್ತು ಮನ ಮನಕ್ಕೆ ಭಾಗವತವನ್ನು ತಲುಪಿಸಿದ ಪಂ. ಗುರುರಾಜಾಚಾರ್ಯ ಗುಡಿ ಇವರ ಕಾರ್ಯ ಅಭಿನಂದನಾರ್ಹ ಎಂದು ಉಡುಪಿ ಪೇಜಾವರ ಮಠದ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.  

ಅವರು ಸ್ಥಳೀಯ ರಾಘವೇಂದ್ರ ಸ್ವಾಮಿ ಮಠದಲ್ಲಿ ಆಯೋಜಿಸಿದ್ದ ಭಾಗವತ ಸೇವಾ ಸಮರ​‍್ಣ ಮತ್ತು ಶ್ರೀಗಳ ಷಷ್ಟಬ್ದಿ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡುತ್ತಿದ್ದರು.        

ಭಾಗವತದ ಶ್ರವಣ ಮಾಡಬೇಕು, ಭಾಗವತದಿಂದಲೇ ಜ್ಞಾನ ವೃದ್ಧಿಯಾಗುತ್ತದೆ, ಇದರಿಂದಲೇ ನಮ್ಮ ಬದುಕು ಸಾರ್ಥಕವಾಗುತ್ತದೆ ಮತ್ತು ಭಾಗವತ ಶ್ರವಣದಿಂದ ಭಗವಂತನ ಅನುಗ್ರಹಕ್ಕೂ ಪಾತ್ರರಾಗಲು ಸಾಧ್ಯ ಎಂದ ಅವರು ಭಾಗವತ ಶ್ರವಣ ಮಾಡಲು ಭಕ್ತರು ಉತ್ಸುಕರಾಗಿ ಕಾಯಬೇಕಾಗುತ್ತದೆ ಆದರೆ ಅಥಣಿಯಲ್ಲಿ ಡಾ.ಗುಡಿ ಇವರು ಕಳೆದ 25 ವರ್ಷಗಳಿಂದಲೂ ಭಾಗವತದ ರಸವನ್ನು ಭಕ್ತರ ಭಾಗವತ ಮನೆ ಮನೆಗೆ ತಲುಪಿಸುವ ಮೂಲಕ ಮನ ಮನಗಳಿಗೆ ಮುಟ್ಟಿಸಿದ್ದಾರೆ ಎಂದರು. 

ಡಾ.ಗುಡಿಯವರ ಈ ಪುಣ್ಯದ ಮತ್ತು ನಿಸ್ವಾರ್ಥದ ಕಾರ್ಯ ಮುಂದುವರೆಯಲಿ ಅವರಿಗೆ ಪೇಜಾವರ ಮಠದಿಂದ ಆಶೀರ್ವಾದ ರೂಪದಲ್ಲಿ ಸಹಕಾರ ಇರುತ್ತದೆ ಎಂದ ಅವರು ಭಾಗವತದ ಮೂಲಕ ಎಲ್ಲರ ಮನೆಗಳಲ್ಲಿ ಭಗವಂತನನ್ನು ಪ್ರತಿಷ್ಠಾಪಿಸುವ ಮೂಲಕ ಅವರು ಗುಡಿ ಎನ್ನುವ ತಮ್ಮ ಹೆಸರನ್ನು ಸಾರ್ಥಕಗೊಳಿಸಿದ್ದಾರೆ ಎಂದರು. 

ಸಮಾರಂಭದ ನೇತೃತ್ವ ವಹಿಸಿದ್ದ ಡಾ.ಗುರುರಾಜಾಚಾರ್ಯ ಗುಡಿ ಮಾತನಾಡಿ, ಮನೆ ಮನೆಗೆ ಭಾಗವತ ಅಭಿಯಾನದ ಯಶಸ್ಸಿಗೆ ಅಥಣಿಯ ಜನತೆ ಸಾಕಷ್ಟು ಸಹಕಾರ ನೀಡಿದ್ದಾರೆ ಜೊತೆಗೆ ಈ ಅಭಿಯಾನ ಯಶಸ್ವಿಯಾಗಲು ಪೇಜಾವರ ಮಠದ ಹಿರಿಯ ಸ್ಚಾಮೀಜಿ ವಿಶ್ವೇಶ ತೀರ್ಥ ಸ್ವಾಮೀಜಿ, ಉತ್ತರಾಧಿ ಮಠದ ಸತ್ಯಪ್ರಮೋದ ತೀರ್ಥ ಸ್ವಾಮೀಜಿ, ಸತ್ಯಾತ್ಮ ತೀರ್ಥ ಸ್ವಾಮೀಜಿ ಹಾಗೂ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಗಳ ಅನುಗ್ರಹವೇ ಕಾರಣ ಎಂದರು.          

ಸಮಾರಂಭದಲ್ಲಿ  ಶ್ರೀಗಳ ಅಭಿನಂದನಾ ಪರ ಡಾ.ರಾಮ ಕುಲಕಣಿ, ಎಸ್‌.ವಿ.ಜೋಶಿ, ಹರ್ಷಿತಾ ಜೋಶಿ ಮಾತನಾಡಿದರು. ಪಂ. ಜಯರಾಮಾಚಾರ್ಯ ಮದನಪಲ್ಲಿ, ಮೋಹನ ಕುಲಕರ್ಣಿ, ನಾಗೇಶಾಚಾರ್ಯ ಅಯಾಚಿತ, ಮೇಧಾ ಮಣ್ಣೂರ, ಅನಘಾ ಕುಲಕರ್ಣಿ ತಮ್ಮ ಅನಿಸಿಕೆ ಹಂಚಿಕೊಂಡರು.  

ಡಾ.ಗುರುರಾಜಾಚಾರ್ಯ ಗುಡಿ ರಚಿಸಿದ ಭಾಗವತ ಗ್ರಂಥಗಳನ್ನು ಶ್ರೀಗಳು ಬಿಡುಗಡೆಗೊಳಿಸಿದರು ಮತ್ತು  ಶ್ರೀಗಳ ಷಷ್ಟಬ್ದಿ ಅಂಗವಾಗಿ ಎನ್‌.ಕೆ.ಪಾಟೀಲ ಹಾಗೂ ವಿನಾಯಕ ದೇಶಪಾಂಡೆ ಫಲಪುಷ್ಪ ವೃಷ್ಟಿ ನೆರವೇರಿಸಿದರು. ಅಥಣಿ ಬ್ರಾಹ್ಮಣ ಸಮಾಜ ಸಂಘಟನೆ ಹಾಗೂ ರಾಘವೇಂದ್ರ ಸ್ವಾಮಿ ಟ್ರಸ್ಟನಿಂದ ಶ್ರೀಗಳನ್ನು ಸತ್ಕರಿಸಿದರು. ಭಾಗವತ ಪರೀಕ್ಷೆ ಬರೆದ ಮಹನೀಯರಿಗೆ ಶ್ರೀಗಳು ಸರ್ಟಿಫಿಕೇಟ್ ವಿತರಿಸಿದರು.  ಡಾ.ರಾಮ ಕುಲಕರ್ಣಿ ಮತ್ತು ಮದನ ಕೊಕಟನೂರ ಮನೆಗಳಲ್ಲಿ ಶ್ರೀಗಳು ತೊಟ್ಟಿಲು ಪೂಜೆಯನ್ನು ನೆರವೇರಿಸಿದರು. ಅನೀಲ ದೇಶಪಾಂಡೆ ಸ್ವಾಗತಿಸಿದರು, ಪ್ರೀತಿ ಕೊಕಟನೂರ ನಿರೂಪಿಸಿದರು.