ಪ್ರವಾದಿ ಮೊಹಮ್ಮದರ ಆದರ್ಶ ಪಾಲಿಸಿ: ಡಾ. ಖಾಜಿ

ತಾಳಿಕೋಟಿ 11: ಪವಿತ್ರ ರಮಜಾನ್ ಹಬ್ಬದ ನಿಮಿತ್ಯ ಇಲ್ಲಿಯ ನೂತನ ಇದಗಾ ಮೈದಾನದಲ್ಲಿ ಸಾವಿರಾರು ಮುಸ್ಲಿಂ ಬಾಂಧವರು ಈದ್ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ನಂತರ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ಈ ಸಮಯದಲ್ಲಿ ಈದ ಪ್ರವಚನ ನೀಡಿದ ಡಾ. ಮಿನಹಾಜುದ್ದೀನ ಖಾಜಿ ಅವರು ರಮಜಾನ್ ತಿಂಗಳಿನಲ್ಲಿ ಮುಸ್ಲಿಂ ಬಾಂಧವರು ಉಪವಾಸ ವೃತಗಳ ಮೂಲಕ ಗಳಿಸಿಕೊಂಡ ಶಾಂತಿ ಮತ್ತು ಸಹನೆ ಗುಣವನ್ನು ಸಮಾಜದಲ್ಲಿ ಹರಡಲು ಪ್ರಯತ್ನಿಸಬೇಕು ಪ್ರವಾದಿ ಮೊಹಮ್ಮದರ ಆದರ್ಶ ಬದುಕು ಅವರಿಗೆ ಮಾದರಿಯಾಗಬೇಕು ಎಂದರು.  

ಇಂದು ಸಮಾಜದಲ್ಲಿ ಕೆಲವರು ತಮ್ಮ ಸ್ವಾರ್ಥಕ್ಕಾಗಿ ಧರ್ಮದ ಹೆಸರಿನಲ್ಲಿ ಅಶಾಂತಿಯನ್ನು ಹರಡಲು ಪ್ರಯತ್ನಿಸುತ್ತಿದ್ದಾರೆ ಇಂಥವರು ಎಲ್ಲ ಸಮಾಜಗಳಲ್ಲೂ ಇದ್ದಾರೆ. ಜಗತ್ತಿನ ಯಾವ ಧರ್ಮವು ಹಿಂಸೆಯನ್ನು ಬೋಧಿಸುವುದಿಲ್ಲ. ಶಾಂತಿ ಎಲ್ಲ ಧರ್ಮಗಳ ಮೂಲ ಮಂತ್ರವಾಗಿದೆ ಶಾಂತಿ ಮತ್ತು ಸಾಮರಸ್ಯವನ್ನು ಬೆಳೆಸಲು ನಾವೆಲ್ಲರೂ ಶಕ್ತಿಮೀರಿ ಪ್ರಯತ್ನಿಸಬೇಕಾಗಿದೆ. ಭಾರತ ಒಂದು ವೈವಿಧ್ಯಮಯವಾದ ಬಹುಸಂಸ್ಕೃತಿಯ ದೇಶವಾಗಿದೆ. ಶತ ಶತ ಮಾನಗಳಿಂದ ಇಲ್ಲಿ ನಾವೆಲ್ಲರೂ ಕೂಡಿಕೊಂಡು ಬದಕುತ್ತಿದ್ದೇವೆ. ಈ ಪರಂಪರೆಯನ್ನು  ಉಳಿಸಿಕೊಂಡು ಹೋಗುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ ಎಂದರು.  

ಪ್ರವಾದಿ ಮಹಮ್ಮದರು ನಮಗೆ ಉನ್ನತ ಆದರ್ಶಗಳನ್ನು ಕೊಟ್ಟು ಹೋಗಿದ್ದಾರೆ. ಅವುಗಳನ್ನು ಪಾಲಿಸುವ ಅಗತ್ಯವಿದೆ. ಹಸಿದವರಿಗೆ ಊಟ ನೀಡಿ ಎಲ್ಲರ ಮೇಲೆ ಕರುಣೆ ತೋರಿ ಎಂಬುದು ಪ್ರವಾದಿಗಳ ಉನ್ನತ ತತ್ವಗಳಲ್ಲಿ ಒಂದಾಗಿದೆ. ಅದು ನಮ್ಮ ಜೀವನದ ಮೂಲ ಮಂತ್ರವಾಗಬೇಕು. ನೆರೆಹೊರೆಯವರ ಕಷ್ಟಗಳಿಗೆ ಸ್ಪಂದಿಸಬೇಕು ಅವರು ಕಷ್ಟದಲ್ಲಿದ್ದಾಗ ಅವರ ನೆರವಿಗೆ ಧಾವಿಸುವವನೇ ನಿಜವಾದ ಮುಸ್ಲಿಂ ಆಗಿದ್ದಾನೆ ಎಂದು ಪ್ರವಾದಿಗಳು ಹೇಳಿದ್ದಾರೆ ಎಂದು ತಿಳಿಸಿದರು.    

ಪಟ್ಟಣದ ಹಳೆಯ ಇದ್ಗಾದಲ್ಲಿಯೂ ಸಾವಿರಾರು ಮುಸ್ಲಿಂ ಬಾಂಧವರು ಈದ ಸಾಮೂಹಿಕ ಪ್ರಾರ್ಥನೆಯನ್ನು ಸಲ್ಲಿಸಿದರು. ಸಾಮೂಹಿಕ ಪ್ರಾರ್ಥನೆಯಲ್ಲಿ ಸಮಾಜದ ಗಣ್ಯರಾದ ಸೈಯದ್ ಫಸಿಯುದ್ದೀನ್ ಖಾಜಿ, ಖಾಜಾಹುಸೇನ ಡೋಣಿ, ಗನಿಸಾಬ ಲಾಹೋರಿ, ಎ.ಡಿ.ಎಕೀನ, ಅಲ್ಲಾಬಕ್ಷ ನಮಾಜಕಟ್ಟಿ, ಅಬ್ದುಲ ರಜಾಕ್ ಮನಗೂಳಿ, ಕೆ.ಐ.ಸಗರ, ಹಸನಸಾಬ ಮನಗೂಳಿ, ಮಹೆಬೂಬ್ ಚೋರಗಸ್ತಿ, ಫಯಾಜ ಖಾಜಿ, ಇಬ್ರಾಹಿಂ ಮನ್ಸೂರ, ಶಮ್ಸುದ್ದೀನ ನಾಲಬಂದ, ಎಂ.ಎ.ಮೇತ್ರಿ, ಅಬ್ದುಲ್ ಸತ್ತಾರ ಅವಟಿ, ರೋಶನ ಡೋಣಿ, ನಬಿ ಹುಣಶ್ಯಾಳ (ಗುತ್ತಿಹಾಳ), ಅಬ್ದುಲ್ ರಹೆಮಾನ ಸಮಾಜಕಟ್ಟಿ, ಸಿಕಂದರ ವಠಾರ, ರಾಜೇಸಾ ಒಂಟಿ, ಮುಜಾಹೀದ ನಮಾಜಕಟ್ಟಿ ಮತ್ತೀತರರು ಇದ್ದರು. ಪೋಲಿಸ್ ಬಂದೋಬಸ್ತಿ: ರಮಜಾನ್ ಹಬ್ಬದ ಈದ್ ಪ್ರಾರ್ಥನೆಯು ಶಾಂತಿ ಪೂರ್ಣವಾಗಿ ನಡೆಯುವಂತಾಗಲು ಪಿಎಸ್‌ಐ ಘೋರಿ ಹಾಗೂ ಲಮಾಣಿ ಇವರ ನೇತೃತ್ವದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್‌ ಒದಗಿಸಲಾಗಿತ್ತು.