ಸಿಂದಗಿ 14: 2024 ನವಂಬರ 27ರಂದು ನಡೆದ ಮನೆಕಳ್ಳತನ ಪ್ರಕರಣವನ್ನು ಬೇಧಿಸುವಲ್ಲಿ ಸಿಂದಗಿ ಪೊಲೀಸ್ರು ಯಶಸ್ವಿಯಾಗಿದ್ದು, ಆರೋಪಿಯನ್ನು ಬಂಧಿಸಿದ್ದಾರೆ.
2024 ನವಂಬರ 27ರಂದು ನಸುಕಿನಲ್ಲಿ ಯಂಕಂಚಿ ಗ್ರಾಮದ ನಿವೃತ್ತ ಶಿಕ್ಷಕಿ ಸಾತವ್ವ ವಿಠಲ ಕಂಬಾರ ಇವರು ಮನೆಯಲ್ಲಿ ಮಲಗಿದ್ದಾಗ ಯಾರೋ ಇಬ್ಬರು ಮನೆಯೊಳಗೆ ನುಗ್ಗಿ, ಜೀವ ಬೆದರಿಕೆ ಹಾಕಿ ಅವರಿಂದ 6,000 ನಗದು ಹಣ, 50 ಗ್ರಾಂನ ಬಂಗಾರದ 2 ಬಳೆಗಳು(ಪಾಟಲಿ), 50 ಗ್ರಾಂನ ಬಂಗಾರದ 4 ಬಳೆಗಳು (ಬಿಲ್ವರ್), ಒಟ್ಟು 6 ಲಕ್ಷ ಮೌಲ್ಯದ ಬಂಗಾರದ ಆಭರಣಗಳನ್ನು ಸುಲಿಗೆ ಮಾಡಿಕೊಂಡು ಹೋದ ಬಗ್ಗೆ ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆ ಪ್ರಕರಣವನ್ನು ಭೇದಿಸಿ ಸುಲಿಗೆ ಮಾಡಿದ್ದ 70 ಗ್ರಾಂ ಬಂಗಾರದ ಆಭರಣಗಳು ಹಾಗೂ 3 ಕಂಟ್ರಿ ಪಿಸ್ತೂಲ್ 12 ಸಜೀವ ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವಿಜಯಪುರ ಐಪಿಎಸ್ ಪೊಲೀಸ್ ಅಧೀಕ್ಷಕ ಲಕ್ಷ್ಮಣ ನಿಂಬರಗಿ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಲಕ್ಷ್ಮಣ ನಿಂಬರಗಿ, ಐಪಿಎಸ್ ಪೊಲೀಸ್ ಅಧೀಕ್ಷಕರು, ವಿಜಯಪುರ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಶಂಕರ ಮಾರಿಹಾಳ, ರಾಮನಗೌಡ ಹಟ್ಟಿ ಹಾಗೂ ಜಗದೀಶ ಎಚ್.ಎಸ್, ಡಿಎಸ್ಪಿ ಇಂಡಿ ಉಪ-ವಿಭಾಗ ರವರ ಮಾರ್ಗದರ್ಶನದಲ್ಲಿ ಸಿಪಿಐ ನಾನಾಗೌಡ ಪೊಲೀಸ್ ಪಾಟೀಲ ನೇತೃತ್ವದಲ್ಲಿ ಸಿಂದಗಿ ಪೊಲೀಸ್ ಠಾಣೆಯ ಪಿಎಸ್ಐ ಆರೀಫ್ ಮುಶಾಪುರಿ, ಎಎಸ್ಐ ಜೆ.ಎಸ್.ಗಲಗಲಿ ಹಾಗೂ ಸಿಬ್ಬಂದಿಗಳಾದ ಆರ್.ಎಲ್.ಕಟ್ಟಿಮನಿ, ಪಿ.ಕೆ.ನಾಗರಾಳ, ಎಸ್.ಎನ್.ಬಿರಾದಾರ, ಎಂ.ಎಚ್.ಹೊಸಮನಿ, ವಾಯ್.ಕೆ, ಉಕುಮನಾಳ, ಪಿ.ಕೆ.ಗೊರವಗುಂಡಗಿ, ಉಮೇಶ ನನಶೆಟ್ಟಿ, ಬಿ. ಎನ್.ಕೊಳೂರ, ಎಚ್.ಟಿ.ಗೋಡೆಕರ, ಎಸ್.ಎಸ್.ಕೊಂಡಿ, ಬಿ.ಜಿ.ಮುಳಸಾವಳಗಿ, ಇವರನ್ನೊಳಗೊಂಡ ವಿಶೇಷ ತನಿಖಾ ತಂಡವು ಎ 30ರಂದು ಬೆಳಿಗ್ಗೆ 7ಗಂಟೆ ಸುಮಾರಿಗೆ ಖಚಿತ ಮಾಹಿತಿ ಮೇರೆಗೆ ಚಾಂದಕವಟೆ ಗ್ರಾಮದ ಹತ್ತಿರ ಆರೋಪಿ ಪ್ರಶಾಂತ ಸಿದ್ದಾರಾಮ ನಾವಿ ದೇವರ ನಿಂಬರಗಿ ಇತನನ್ನು ವಶಕ್ಕೆ ಪಡೆದಿದ್ದಾರೆ.
ಆರೋಪಿಯನ್ನು ಪರೀಶೀಲಿಸಿದಾಗ ಆತನ ಬಳಿ 1 ಕಂಟ್ರಿ ಪಿಸ್ತೂಲ್ ಹಾಗೂ 4 ಸಜೀವ ಗುಂಡುಗಳು ದೊರೆತಿವೆ. ಆರೋಪಿಯನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಯಂಕಂಚಿ ಗ್ರಾಮದಲ್ಲಿ ಮನೆಕಳ್ಳತನ ಮಾಡಿದ ಬಂಗಾರದ ಆಭರಣಗಳನ್ನು ಇಂಡಿ ಮುತ್ತೂಟ್ ಫೈನಾನ್ಸ್ ಹಾಗೂ ಡಿಸಿಸಿ ಬ್ಯಾಂಕ್ನಲ್ಲಿ ಅಡ ಇಟ್ಟಿರುವುದಾಗಿ ಅಲ್ಲದೇ ಮಧ್ಯಪ್ರದೇಶ ರಾಜ್ಯದಿಂದ ಇನ್ನೂ 2 ಕಂಟ್ರಿ ಪಿಸ್ತೂಲ್ಗಳನ್ನು ತಂದಿದ್ದು, ಅವುಗಳನ್ನು ಮುಚ್ಚಿ ಇಟ್ಟಿರುವುದಾಗಿ ಮಾಹಿತಿ ನೀಡಿದ್ದಾನೆ.
ಆರೋಪಿ ಹತ್ತಿರ ಅಕ್ರಮ ಶಸ್ತ್ರಾಸ್ತ್ರ ದೊರೆತಿದ್ದರಿಂದ ಆತನ ಮೇಲೆ ಸಿಂದಗಿ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ: 119/2025 ಕಲಂ: 25(ಎ) ಆರ್ಮ್ ಆ್ಯಕ್ಟ್ -1959 ಅಡಿ ಪ್ರತ್ಯೇಕ ದೂರು ದಾಖಲಿಸಲಾಗಿದೆ. ದರೋಡೆ ಪ್ರಕರಣದ ತನಿಖೆ ಕೈಕೊಂಡು ಇಂಡಿ ಮುತ್ತೂಟ್ ಫೈನಾನ್ಸ್ ಹಾಗೂ ಡಿಸಿಸಿ ಬ್ಯಾಂಕ್ನಲ್ಲಿ ಅಡವಿಟ್ಟಿದ್ದ 50 ಗ್ರಾಂನ ಬಂಗಾರದ 2 ಬಳೆಗಳು (ಪಾಟಲಿ), 20 ಗ್ರಾಂನ ಬಂಗಾರದ 2 ಬಳೆಗಳು (ಬಿಲ್ವರ್) ಒಟ್ಟು 70 ಗ್ರಾಂ ಬಂಗಾರದ ಆಭರಣಗಳನ್ನು ವಶಪಡಿಸಿಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಹೆಚ್ಚಿನ ವಿಚಾರಣೆಗಾಗಿ ಆರೋಪಿಗೆ ಪೊಲೀಸ್ ಕಸ್ಟಡಿಗೆ ಪಡೆದು ಆತನ ಹೇಳಿಕೆ ಆಧಾರದ ಮೇಲೆ ದೇವರ ನಿಂಬರಗಿ ಗ್ರಾಮದ ಆತನ ಮನೆಯಲಿ ಮುಚ್ಚಿಟ್ಟಿದ್ದ 2 ಕಂಟ್ರಿ ಪಿಸ್ತೂಲ್ ಹಾಗೂ 8 ಸಜೀವ ಗುಂಡುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದ್ದಾರೆ.