ಪ್ರತಿಪಕ್ಷಗಳು ನೇಹಾ ಹತ್ಯೆ ಪ್ರಕರಣವನ್ನು ರಾಜಕೀಯಕ್ಕೆ ಬಳಕೆ ಮಾಡಿಕೊಳ್ಳುತ್ತಿವೆ: ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು 20: ಪ್ರತಿಪಕ್ಷಗಳು ನೇಹಾ ಹತ್ಯೆ ಪ್ರಕರಣವನ್ನು ರಾಜಕೀಯಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ, ರಾಜಕೀಯಕ್ಕಾಗಿ ಒಬ್ಬರ ಸಾವನ್ನು ಬಳಸಿಕೊಳ್ಳುವುದು ದುರ್ದೈವ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ಬೇಸರ ವ್ಯಕ್ತಪಡಿಸಿದ್ದಾರೆ.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನೇಹಾ ಕೊಲೆಯನ್ನು ತೀವ್ರವಾಗಿ ಖಂಡಿಸುತ್ತೇನೆ, ಕೊಲೆಗಾರರನ್ನು ಕೂಡಲೇ ಬಂಧಿಸಲಾಗಿದೆ. ಇದು ಲವ್ ಜಿಹಾದ್ ಪ್ರಕರಣವಲ್ಲ. ಸರ್ಕಾರ ತನಿಖೆಯನ್ನು ಗಂಭೀರವಾಗಿ ಕೈಗೊಂಡಿದ್ದು. ಕೊಲೆಗಾರನಿಗೆ ಉಗ್ರ ಶಿಕ್ಷೆ ನೀಡಲು ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.

ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂಬ ಬಿಜೆಪಿ ಹೇಳಿಕೆ ಕುರಿತು ಮಾತನಾಡಿ, ಎಲ್ಲಾ ಕಾಲದಲ್ಲಿಯೂ ಕೊಲೆಗಳಾಗಿವೆ. ಹಾಗೆಂದು ಕಾನೂನು ಸುವ್ಯವಸ್ಥೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದಲ್ಲ. ಕರ್ನಾಟಕದಲ್ಲಿ ಇರುವಷ್ಟು ಶಾಂತಿ ಸುವ್ಯವಸ್ಥೆ ಬೇರೆ ರಾಜ್ಯಗಳಲ್ಲಿಲ್ಲ. ನಾವು ಯಾವುದೇ ಕೃತ್ಯ ನಡೆದರೂ, ಅದನ್ನು ತೀವ್ರವಾಗಿ ಖಂಡಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ರಾಜಕೀಯಕ್ಕಾಗಿ ಒಬ್ಬರ ಸಾವನ್ನು ಬಳಸಿಕೊಳ್ಳುವುದು ದುರ್ದೈವ, ಖಂಡನೀಯ ಎಂದು ತಿಳಿಸಿದರು.

ಕಾಂಗ್ರೆಸ್ ನ ಚೊಂಬು ಜಾಹೀರಾತನ್ನು ರಾಜ್ಯ ಸರ್ಕಾರದ ಖಜಾನೆ ಖಾಲಿಯಾಗಿರುವುದರ ಚಿನ್ಹೆ ಎಂಬ ಬಿಜೆಪಿ ತಿರುಗೇಟು ಕುರಿತು ಪ್ರತಿಕ್ರಿಯಿಸಿ, ಈ ದೇಶದ ಜನರಿಗೆ ಬಿಜೆಪಿ ಸರ್ಕಾರ ಖಾಲಿ ಚೊಂಬು ಕೊಟ್ಟಿದೆ. ಇದನ್ನು ತಿಳಿಸಲು ನಾವು ಜಾಹೀರಾತು ನೀಡಿದ್ದೇವೆ. ದೇಶದ ಜನರಿಗೆ 15 ಲಕ್ಷ ಕೊಟ್ಟರೇ? 2 ಕೋಟಿ ಉದ್ಯೋಗ ಸೃಷ್ಟಿ, ರೈತರ ಆದಾಯ ದುಪ್ಪಟ್ಟು , ಅಚ್ಚೇ ದಿನ್ ಬಂದಿದೆಯೇ? ಎಂದು ಪ್ರಶ್ನಿಸಿದರು.

ಮೋದಿ ಕೊಟ್ಟಿರುವ ಆಶ್ವಾಸನೆಗಳಲ್ಲಿ ಒಂದನ್ನೂ ಈಡೇರಿಸಿಲ್ಲ. ದೇಶದ ಜನರಿಗೆ ಖಾಲಿ ಚೊಂಬು ನೀಡಿದ್ದಾರೆ ಎಂದು ಜಾಹೀರಾತು ನೀಡಿದ್ದೇವೆ. ಅವರು ಏನಾದರೂ ಹೇಳಲಿ, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಬೊಕ್ಕಸ ಖಾಲಿಯಾಗಿಲ್ಲ. ಎಲ್ಲಾ ಗ್ಯಾರಂಟಿ ಗಳನ್ನು ಜಾರಿ ಮಾಡಿ ಅಭಿವೃದ್ಧಿ ಕೆಲಸವನ್ನೂ ಮಾಡಿದ್ದೇವೆ ಎಂದರು.