ನೇಹಾ ಹಿರೇಮಠ ಹತ್ಯೆ ಖಂಡನೀಯ ಅರಳೆಲೆಮಠದ ಶ್ರೀಗಳ ವಿಷಾದ

ಶಿಗ್ಗಾವಿ 21: ಹುಬ್ಬಳ್ಳಿ ನಗರದ ಬಿವಿಬಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ನಗರಪಾಲಿಕೆ ಸದಸ್ಯ ನಿರಂಜನ ಹಿರೇಮಠ ಅವರ ಮಗಳು ನೇಹಾಳನ್ನು ಏಕಾಏಕಿ ಕಾಲೇಜು ಆವರಣದಲ್ಲಿ ಬರ್ಬರ ಹತ್ಯೆ ಮಾಡಿರುವುದು ಅತ್ಯಂತ ಖಂಡನೀಯವಾದುದು. ಅಮಾನುಷವಾಗಿ ಕಗ್ಗೊಲೆಗೈದಿರುವುದು ಇಡೀ ಮಾನವ ಸಂಕುಲವೇ ತಲೆ ತಗ್ಗಿಸುವಂತಹ ನೀಚ ಕೃತ್ಯವಾಗಿದೆ ಎಂದು ಬಂಕಾಪುರ ಭಾವೀಸ್ ಮಹಲ್ ಕಟ್ಟೀಮನಿ ಅರಳೆಲೆಹಿರೇಮಠದ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಗಳು ವಿಷಾದ ವ್ಯಕ್ತಪಡಿಸಿದ್ದಾರೆ.  

ಈ ಘಟನೆಯಿಂದಾಗಿ ಹೆಣ್ಣುಮಕ್ಕಳು ಹೆಚ್ಚಿನ ವಿದ್ಯಾಭ್ಯಾಸಕ್ಕೆ ಶಾಲಾ-ಕಾಲೇಜುಗಳಿಗೆ ತೆರಳಲು ಹಿಂದೆಮುಂದೆ ನೋಡುವಂತಾಗಿದೆ. ಭಯದ ಛಾಯೆ ಎಲ್ಲೆಡೆಗೂ ವ್ಯಾಪಿಸಿದೆ. ಇಡೀ ಸಮಾಜವೇ ಇಂದು ದುಃಖದ ಮಡುವಿನಲ್ಲಿದೆ. ಸಾಮಾಜಿಕ ಸಾಮರಸ್ಯ ಬಯಸುವ ಜನರ ಮಧ್ಯದಲ್ಲಿ ಕ್ರೂರ ಮನಸ್ಸಿನ, ಶಾಂತಿ ಕದಡುವ ಇಂತಹ ವ್ಯಕ್ತಿಗಳನ್ನು ಪತ್ತೇಹಚ್ಚಿ ಅತ್ಯಂತ ಕಠಿಣ ಶಿಕ್ಷೆಯನ್ನು ಸರ್ಕಾರ ಪ್ರಾಮಾಣಿಕವಾಗಿ ಮಾಡಬೇಕಿದೆ. ಕಾನೂನನ್ನೂ ಧಿಕ್ಕರಿಸಿ ದುಷ್ಟಕೃತ್ಯವೆಸಗಿದವರ ವಿರುದ್ಧ ಕ್ರಮ ಕೈಗೊಳ್ಳುವ ಅಗತ್ಯವಿದೆ. ಈ ಸಂಬಂಧ ರಾಜಕೀಯ, ಧರ್ಮ, ಜಾತಿ ಲೇಪನ ಮಾಡದೇ ಮುಂದೆ ಇಂತಹ ಕೆಟ್ಟ ವಾತಾವರಣ ನಿರ್ಮಾಣವಾಗದಂತೆ ನೋಡಿಕೊಳ್ಳುವ ಗುರುತರ ಜವಾಬ್ದಾರಿ ಸರ್ಕಾರದ ಮೇಲಿದೆ. ಮೃತಳ ಆತ್ಮಕ್ಕೆ ಭಗವಂತ ಶಾಂತಿ ನೀಡಲಿ ಅವರ ಕುಟುಂಬಕ್ಕೆ ಆ ದೇವರು ದುಖ: ಬರಿಸುವ ಶಕ್ತಿ ಬರಿಸಲಿ ಎಂದು ನುಡಿದರು.