ಹಾನಗಲ್ 08: ಸಾಮಾಜಿಕ ಜವಾಬ್ದಾರಿ ಹೊತ್ತುಕೊಳ್ಳಲು ಯುವಕರು ಮುಂದೆ ಬರುತ್ತಿಲ್ಲ. ಸಾಮಾಜಿಕ ಜವಾಬ್ದಾರಿಯಿಂದ ವಿಮುಖರಾಗುತ್ತಿರುವ ಪರಿಣಾಮ ಸಮಸ್ಯೆಗಳು ಹೆಚ್ಚುತ್ತಿವೆ ಎಂದು ಶಾಸಕ ಶ್ರೀನಿವಾಸ ಮಾನೆ ಅಸಮಾಧಾನ ವ್ಯಕ್ತಪಡಿಸಿದರು.
ತಾಲೂಕಿನ ಹಿರೇಹುಲ್ಲಾಳ ಗ್ರಾಮದಲ್ಲಿ ತಿಳವಳ್ಳಿಯ ಸರಕಾರಿ ಪ್ರಥಮ ದರ್ಜೆ ಕಾಲೇಜು ಆಯೋಜಿಸಿದ್ದ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ನಮ್ಮ ದೇಶದ ಸಾಲ ಬರೋಬ್ಬರಿ 210 ಲಕ್ಷ ಕೋಟಿ ತಲುಪಿದೆ. ಮತ್ತೆ 12 ಲಕ್ಷ ಕೋಟಿಗೆ ಅರ್ಜಿ ಹಾಕಲಾಗಿದೆ. ರಾಜ್ಯದ ಸಾಲವೂ 5 ಲಕ್ಷ 50 ಸಾವಿರ ಕೋಟಿಯಷ್ಟಿದೆ. ನಮ್ಮ ರಾಜ್ಯದ ಸಾಲಕ್ಕೆ ಪ್ರತಿದಿನ 135 ಕೋಟಿ ರೂ. ಬಡ್ಡಿ ಪಾವತಿಸಬೇಕಾಗಿದೆ. ಇದು ನಾವೇ ಸೃಷ್ಟಿ ಮಾಡಿಕೊಂಡ ಸಮಸ್ಯೆ. ನಮ್ಮ ದೇಶದ ಜನಸಂಖ್ಯೆ ಹೆಚ್ಚಿದೆ. ಆದರೆ ಉತ್ಪಾದಕತೆಯಲ್ಲಿ ನಾವು ಹಿಂದೆ ಬಿದ್ದಿದ್ದೇವೆ. ಧರ್ಮ, ಜಾತಿಗಳ ಸಂಘರ್ಷದಲ್ಲಿ ನಾವು ಸಿಲುಕಿಕೊಂಡಿದ್ದು, ಆರ್ಥಿಕ ಅಭಿವೃದ್ಧಿಯ ಚಟುವಟಿಕೆಗಳನ್ನು ಕೈಬಿಟ್ಟಿದ್ದೇವೆ. ಚೀನಾ ತನ್ನ ಉತ್ಪಾದಕತೆ ವೃದ್ಧಿಸಿಕೊಂಡು ಆರ್ಥಿಕವಾಗಿ ಪ್ರಭಲವಾಗುತ್ತಿದೆ ಎಂದು ಹೇಳಿದ ಅವರು ಯಾವುದೇ ಷಡ್ಯಂತ್ರಕ್ಕೆ ಬಲಿಯಾಗದೇ ನಾವೆಲ್ಲ ಗಟ್ಟಿಯಾಗಿ ಹೆಜ್ಜೆ ಹಾಕಬೇಕಿದೆ. ಬೇರೆ, ಬೇರೆ ದೇಶಗಳ ಮೇಲೆ ಅವಲಂಬಿತರಾಗದೇ ಸ್ಥಳೀಯವಾಗಿ ಉತ್ಪಾದಕತೆ ಹೆಚ್ಚಿಸಿ ವಾಣಿಜ್ಯ ಚಟುವಟಿಕೆಗಳಲ್ಲಿ ಸಾಧನೆ ತೋರಬೇಕಿದೆ ಎಂದರು.
ಬಳಿಕ ಶಿಬಿರಾರ್ಥಿಗಳೊಂದಿಗೆ ಕೆಲಕಾಲ ಸಂವಾದ ನಡೆಸಿದರು. ಜಿಪಂ ಮಾಜಿ ಸದಸ್ಯ ಮಹದೇವಪ್ಪ ಬಾಗಸರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜು ಗೊರಣ್ಣನವರ, ಪ್ರಕಾಶ ಬಾಗಣ್ಣನವರ, ಸೀತಾಳದ ಎಂ.ಎಸ್. ಸೇರಿದಂತೆ ಇನ್ನೂ ಹಲವರು ಈ ಸಂದರ್ಭದಲ್ಲಿ ಇದ್ದರು.